“ಅಂಧನಾಗಿ ಪಾತ್ರ ಮಾಡುವಾಗ ಕಣ್ಣಿಲ್ಲದವರೇ ಗ್ರೇಟ್ ಅನಿಸಿ ಬಿಡ್ತು’
– ಹೀಗೆ ಹೇಳಿ ಒಂದು ಕ್ಷಣ ಮೌನವಾದರು ಶಿವರಾಜಕುಮಾರ್. ಅಂಧರ ಬಗ್ಗೆ ಶಿವಣ್ಣ ಮಾತನಾಡಲು ಕಾರಣ “ಕವಚ’ ಚಿತ್ರ. ಶಿವರಾಜಕುಮಾರ್ “ಕವಚ’ ಚಿತ್ರದಲ್ಲಿ ನಟಿಸಿರೋದು ನಿಮಗೆ ಗೊತ್ತೇ ಇದೆ. ಮೊದಲ ಬಾರಿಗೆ ಈ ಚಿತ್ರದಲ್ಲಿ ಅವರು ಅಂಧನಾಗಿ ನಟಿಸಿದ್ದಾರೆ. ಈ ಪಾತ್ರ ಮಾಡುವಾಗ ಶಿವಣ್ಣ ತುಂಬಾ ಭಾವುಕರಾದರಂತೆ. “ಅಪ್ಪಾಜಿ ಹೋಗುವಾಗ ನೇತ್ರದಾನ ಮಹಾದಾನ ಅಂತಾ ಇಬ್ಬರಿಗೆ ಕಣ್ಣು ಕೊಟ್ಟು ಹೋದರು, ಆ ಎಮೋಶನ್, ಕಮಿಟ್‌ಮೆಂಟ್ ಈ ಪಾತ್ರದಲ್ಲಿದೆ’ ಎಂದರು.
ಚಿತ್ರದ ಬಗ್ಗೆ ಮಾತನಾಡಿದ ಶಿವಣ್ಣ, “ಚಿತ್ರದಲ್ಲಿ ಮಗು ಪಾತ್ರ ಮಾಡಿರುವ ಮೀನಾಕ್ಷಿಯ ಅಭಿನಯವನ್ನೂ ನೋಡಿ ಕಲಿತಿದ್ದೀನಿ. ಎಲ್ಲರೂ ರಾಜಕುಮಾರ್, ರಜನೀಕಾಂತ್, ಅಮಿತಾಬಚ್ಚನ್ ಆಗಲಿಕ್ಕಾಗಲ್ಲ. 33 ವರ್ಷಗಳಿಂದ ಜನ ನನ್ನ ಸಿನಿಮಾ ನೋಡುತ್ತಿದ್ದರೂ, ಈಗಲೂ ನನ್ನ ಸಿನಿಮಾ ನೋಡಬೇಕು ಎಂದು ಬಯಸುತ್ತಾರಲ್ಲ ಅದೇ ನನ್ನ ಪುಣ್ಯ’ ಎಂದರು.
ಈ ಚಿತ್ರದಲ್ಲಿ ಅಂಧನ ಪಾತ್ರಕ್ಕಾಗಿ ಶಿವರಾಜಕುಮಾರ್ ಅವರಿಗೆ ಅಂಧರ ಶಾಲೆಯ ಶಿಕ್ಷಕರು 2-3 ದಿನ ಅಂಧರು ಸ್ಟಿಕ್ ಬಳಸುವುದು, ಕಣ್ಣು ಗುಡ್ಡೆ ಮೇಲೆ ಮಾಡುವುದನ್ನು ಹೇಳಿಕೊಟ್ಟರಂತೆ. “ಕಣ್ಣು ಗುಡ್ಡೆ ಮೇಲೆ ಮಾಡಿದಾಗ ಕೆಲವೊಮ್ಮೆ ತಲೆನೋವು ಬರುತ್ತಿತ್ತು. ಭಾವನೆಗಳ ಜೊತೆಗೆ ಎಷ್ಟರ ಮಟ್ಟಿಗೆ ಅಟ್ಯಾಚ್‌ಮೆಂಟ್ ಇರುತ್ತೆ ಅನ್ನುವ ಕಾರಣಕ್ಕಾಗಿ ಈ ಸಿನಿಮಾ ಒಪ್ಪಿಕೊಂಡೆ’ ಎಂದರು. “ತುಂಬಾ ವರ್ಷದಿಂದ ರಿಮೇಕ್ ಚಿತ್ರ ಮಾಡಿರಲಿಲ್ಲ. ಮಲಯಾಳಂನ ಮೋಹನ್‌ಲಾಲ್ ಚಿತ್ರ ಎಂಬ ಕಾರಣಕ್ಕೆ ಮಾಡಿದೆವು, ಚಿತ್ರದಲ್ಲಿನ ಎಲ್ಲ ಪಾತ್ರಗಳು ಚಿಕ್ಕದಾಗಿದ್ದರೂ ಸಿನಿಮಾಗೆ ಬೇಕು ಎಂಬ ಕಾರಣಕ್ಕೆ ಮಾಡಿಸಲಾಗಿದೆ. ಅಪಾರ್ಟ್ ಮೆಂಟ್ ಕೂಡ ಇಲ್ಲಿ ಪಾತ್ರವಾಗಿದೆ’ ಎಂದು ಹೇಳಿದರು. ಒಳ್ಳೆಯ ಸಿನಿಮಾ ಬಂದರೆ ಮುಂದೆ ಕೂಡ ರೀಮೇಕ್ ಸಿನಿಮಾಗಳಲ್ಲಿ ಅಭಿನಯಿಸುತ್ತೇನೆ. ಹಾಗೆಂದು ಅದನ್ನೇ ಮುಂದುವರೆಸುವುದಿಲ್ಲ ಎನ್ನುವುದು ಶಿವಣ್ಣ ಮಾತು.
ಹಾಡುಗಳ ಬಗ್ಗೆ ಮಾತನಾಡಿದ ಶಿವಣ್ಣ, “ಅರ್ಜುನ್ ಜನ್ಯ ಈ ಚಿತ್ರಕ್ಕೆ ಒಳ್ಳೆಯ ಸಂಗೀತ ನೀಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಮಾಡಿದ ಚಿತ್ರಗಳೆಲ್ಲಾ ಯಶಸ್ಸಾಗಿದೆ. ಈ ಚಿತ್ರದಲ್ಲೂ ಕಣ್ಣೀರ ಒರೆಸೋಕೆ ಎಂಬ ಅದ್ಭುತವಾದ ಹಾಡೊಂದಿದೆ, ಅದನ್ನು ಮುಂದಿನ ವಾರ ಲಾಂಚ್ ಮಾಡುತ್ತೇವೆ’ ಎಂದು ಹೇಳಿದರು. ಚಿತ್ರ ಡಿಸೆಂಬರ್‌ನಲ್ಲೇ ಬಿಡುಗಡೆಯಾಗಬೇಕಿತ್ತು, ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದೆ. ಏ.5ರಂದು ಬೇವು-ಬೆಲ್ಲ ತಿನ್ನುವ ಯುಗಾದಿ ಹಬ್ಬಕ್ಕೆ ಚಿತ್ರ ಬಿಡುಗಡೆಯಾಗುತ್ತಿದೆ ಎಂದರು.
ನಟಿ ಕೃತಿಕ ಜಯಕುಮಾರ್ ಮಾತನಾಡಿ, “”ಕವಚ’ ಸಿನಿಮಾ ಭಾವನೆಗಳಿಗೆ ಹತ್ತಿರವಾಗಿದೆ. ಶಿವಣ್ಣ ಜೊತೆಗೆ ಸಿನಿಮಾ ಮಾಡುವ ಅವಕಾಶ ದೊರೆತಿದ್ದು, ನನ್ನ ಭಾಗ್ಯ. ಹೀಗಾಗಿ ಕವಚ ನನಗೆ ವಿಶೇಷ ಸಿನಿಮಾ ಎನಿಸಿದೆ ಎಂದು ಹೇಳಿದರು. ನಟ ವಸಿಷ್ಠ ಸಿಂಹ, ನಿರ್ದೇಶಕ ಜಿವಿಆರ್ ವಾಸು ಮಾತನಾಡಿದರು.
ಗಿರೀಶ್ ಹುಣಸೂರು