ವಿಜಯಪುರ: ಜಿಲ್ಲಾಡಳಿತ ಕಟ್ಟಡುನಿಟ್ಟಿನ ಕ್ರಮದ ಹೊರತಾಗಿಯೂ ವಿಜಯಪುರ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರಿಗೆ ನೀಡುವ ರೆಮ್‌ಡೆಸಿವಿಯರ್ ಲಸಿಕೆಯ ಅಕ್ರಮ ಹಾಗೂ ಕಾಳಸಂತೆ ವ್ಯಾಪರ ಜೋರಾಗಿದೆ. ಇದಕ್ಕೆ ಕಡಿವಾಣ ಹಾಕಲು ರೆಮ್‌ಡೆಸಿವಿಯರ್ ಲಸಿಕೆ ವಿಭಾಗಕ್ಕೆ ಪ್ರತ್ಯೇಕವಾಗಿ ನೋಡಲ್ ಅಧಿಕಾರಿಯನ್ನೇ ನೇಮಿಸಿದ್ದರೂ ಕಾಳಸಂತೆ ದಂಧೆ ವ್ಯಾಪಕವಾಗಿ ನಡೆಯುತ್ತಿದೆ.
ಇದಕ್ಕೆ ಪುಷ್ಟಿ ನೀಡುವಂತೆ ರೆಮ್‌ಡೆಸಿವಿಯರ್ ಕಾಳಸಂತೆ ಮಾರಾಟದ ಸಂದರ್ಭದಲ್ಲಿ ವಿಜಯಪುರ ಪೊಲೀಸರು ಐವರನ್ನು ಬಂ ಧಿಸಿದ್ದು, ಡಿಎಚ್‌ಒ ಹುದ್ದೆಯಲ್ಲಿದ್ದ ಡಾ| ಯರಗಲ್ ಅವರನ್ನು ಸರ್ಕಾರ ಕಡ್ಡಾಯ ರಜೆ ಮೇಲೆ ಕಳಿಸಿದೆ. ಅಷ್ಟರ ಮಟ್ಟಿಗೆ ಜಿಲ್ಲೆಯಲ್ಲಿ ಕೋವಿಡ್ ವೇಗದ ಹೆಚ್ಚಳ ಹಾಗೂ ಪರಿಸ್ಥಿತಿ ದುರ್ಲಾಭ ಪಡೆಯುತ್ತಿರುವ ಜಾಲವೂ ತಲೆ ಎತ್ತಿದೆ. ಗೋಲಗುಂಬಜ್ ಠಾಣೆ ವ್ಯಾಪ್ತಿಯಲ್ಲಿ ರೆಮ್ ಡೆಸಿವಿಯರ್ ಲಸಿಕೆ ತನ್ನಲ್ಲಿ ಹೆಚ್ಚಿನ ಬೆಲೆಗೆ ಕಾಳಸಂತೆಯಲ್ಲಿ ಮಾರಾಟದ ಬಗ್ಗೆ ಔಷಧ ನಿಯಂತ್ರಣ ಇಲಾಖೆಯ ನೀಲಕಂಠ ತಾರು ರಾಠೊಡ ದೂರು ಆಧರಿಸಿ, ಗೋಲಗುಂಬಜ್ ಠಾಣೆ ಸಿಪಿಐ ಬಸವರಾಜ ಮೂಕರ್ತಿಹಾಳ, ಎಸೈ ಆರ್.ಎಸ್. ಲಮಾಣಿ ನೇತೃತ್ವದಲ್ಲಿ ಪೊಲೀಸರು ಆನಂದ ಸೋಹನ್ ರುಣವಾಲ್, ಆದಿತ್ಯ ಅಣ್ಣಾರಾಯ ಜೋಶಿ, ವಿಜಯ ಪ್ರಭಾಕರ ದೇಶಪಾಂಡೆ, ಮಹ್ಮದ್ ಅಬ್ದುಲ್ ಆಲಂ ಮುಲ್ಲಾ, ಶೃತಿ ಹಡಪದ ಎಂಬುವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪೇದೆ ಫೈಜಲ್ ಶಬ್ಬೀರ್ ಇನಾಮದಾರ ಅವರನ್ನು ಸಮವಸ್ತ್ರ ರಹಿತರಾಗಿ ನಡೆಸಿದ ಗುಪ್ತ ಕಾರ್ಯಾಚರಣೆ ಸಂದರ್ಭದಲ್ಲಿ ರೆಮ್ ಡೆಸಿವಿಯರ್ ಅಕ್ರಮ ಜಾಲ ಬಯಲಾಗಿದೆ. ಇಷ್ಟಾದರೂ ಕೋವಿಡ್ ಆಸ್ಪತ್ರೆಗಳಲ್ಲಿ ರೆಮ್ ಡೆಸಿವಿಯರ್ ಲಸಿಕೆ ಸಿಗುತ್ತಿಲ್ಲ, ತಕ್ಷಣ ವ್ಯವಸ್ಥೆ ಮಾಡಿ ಎಂದು ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತ ರೋಗಿಗಳು, ಅವರ ಸಂಬಂಧಿ ಗಳು ಜಿಲ್ಲಾಡಳಿತಕ್ಕೆ, ಆರೋಗ್ಯ ಇಲಾಖೆಗೆ ಗೋಗರೆಯುತ್ತಲೇ ಇದ್ದಾರೆ. ತಮಗೆ ಪರಿಚಿತರು, ಹತ್ತಿದವರ ಮೂಲಕ ಪ್ರಭಾವಿಗಳನ್ನು ಸಂಪರ್ಕಿಸಿ ಹೇಗಾದರೂ ಮಾಡಿ ತಮ್ಮನ್ನು ಉಳಿಸಿಕೊಳ್ಳಲು ರೆಮ್‌ಡೆಸಿವಿಯರ್ ಲಸಿಕೆ ಕೊಡಿಸಿ ಎಂದು ಅಂಗಲಾಚುತ್ತಿದ್ದಾರೆ.
ಕಳೆದ ಒಂದು ವಾರದ ಹಿಂದಿನಿಂದ ರೆಮ್ ಡೆಸಿವಿಯರ್ ಲಸಿಕೆಯ ಬೇಡಿಕೆ ಹೆಚ್ಚಿದ್ದು, ಕೆಲವು ಖಾಸಿಗಿ ಆಸ್ಪತ್ರೆಗಳಲ್ಲಿ ಲಸಿಕೆಯ ದುರ್ಬಳಕೆ ಹಾಗೂ ದುರ್ಲಾಭ ಪಡೆಯುವ ಕುರಿತು ಜಿಲ್ಲಾಡಳಿತದ ಗಮನಕ್ಕೆ ಬಂದಿದೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಡಿಸಿ ಸುನೀಲಕುಮಾರ, ಕೆಎಎಸ್ ಹಿರಿಯ ಅಧಿ ಕಾರಿ ಡಾ| ಔದ್ರಾಮ್ ಅವರನ್ನು ರೆಮ್‌ಡೆಸಿವಿಯರ್, ಆಕ್ಸಿಜನ್ ಉಸ್ತುವಾರಿಗೆಂದೇ ಪ್ರತ್ಯೇಕವಾಗಿ ನೋಡಲ್ ಅಧಿಕಾರಿಯಾಗಿ ನೇಮಿಸಿದ್ದಾರೆ.
ಇದಲ್ಲದೇ ಪರಿಸ್ಥಿತಿ ದುಲಾರ್ಭ ಪಡೆಯುವ ಖಾಸಗಿ ಆಸ್ಪತ್ರೆಗಳ ಮೇಲೆ ನಿಗಾ ಇರಿಸಲು ವಿಶೇಷ ಆ್ಯಪ್ ರೂಪಿಸಿದ್ದು, ಇದರಲ್ಲಿ ಪ್ರತಿ ಕೋವಿಡ್ ಆಸ್ಪತ್ರೆಯ ಹಾಸಿಗೆ, ಆಕ್ಸಿಜನ್, ಐಸಿಯುವ ಘಟಕಗಳ ಹಾಸಿಗೆ ಲಭ್ಯತೆ ಕುರಿತು ಕ್ಷಣ ಕ್ಷಣದ ಮಾಹಿತಿ ಪಡೆಯುತ್ತಿದೆ. ಇದಲ್ಲದೇ ಆಸ್ಪತ್ರೆಯಲ್ಲಿನ ಹಾಸಿಗೆ ಹಾಗೂ ಔಷ ಧ ಕಾಳಸಂತೆ ತಡೆಗೆ ಪ್ರತಿ ಆಸ್ಪತ್ರೆಗೆ ತಲಾ ಒಬ್ಬೊಬ್ಬರಂತೆ ನೋಡಲ್ ಅ ಧಿಕಾರಿಯ ನೇಮಕವೂ ಆಗಿದೆ.
ಇದರ ಬೆನ್ನಲ್ಲೇ ವಿಜಯಪುರ ಡಿಎಚ್‌ಒ ಡಾ| ರಾಜಕುಮಾರ ಯರಗಲ್ ಅವರನ್ನು ಕಡ್ಡಾಯ ರಜೆ ಮೇಲೆ ತೆರಳುವಂತೆ ಸರ್ಕಾರ ಆದೇಶ ಹೊರಡಿಸಿದೆ. ಕೋವಿಡ್ ಎರಡನೇ ಅಲೆಯ ವೇಗ ಹೆಚ್ಚಿದ್ದು, ಸೋಂಕು ನಿಯಂತ್ರಣ ವಿಷಯದಲ್ಲಿ ವಿಫಲವಾಗಿದ್ದಾರೆ ಎಂಬ ಆರೋಪದಲ್ಲಿ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧೀನ ಕಾರ್ಯದರ್ಶಿ ಯ.ಶಿವಶಂಕರ, ತಕ್ಷಣದಿಂದಲೇ ಜಾರಿಗೆ ಬರುವಂತೆ ಈ ಬಗ್ಗೆ ಆದೇಶ ಹೊರಡಿಸಿದ್ದಾರೆ. ಅಲ್ಲದೇ ತೆರವಾಗುವ ವಿಜಯಪುರ ಡಿಎಚ್‌ಒ ಹುದ್ದೆಗೆ ಕಲಬುರಗಿ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಫಿಜಿಸಿಯನ್ ಆಗಿರುವ ಡಾ| ಮಹೇಂದ್ರ ಕಾಪಸೆ ಅವರಿಗೆ ಹೆಚ್ಚುವರಿ ಹೊಣೆ ನೀಡಿ ಏಪ್ರಿಲ್ 28 ರಂದೇ ಅ ಧಿಸೂಚನೆ ಹೊರಡಿಸಿದೆ.