Advertisement

3ನೇ ಡೋಸ್‌ ಲಸಿಕೆ ಪಡೆಯಲು ನಿರಾಸಕ್ತಿ

09:10 AM Oct 29, 2022 | Team Udayavani |

ಕೊಪ್ಪಳ: ಕಳೆದ ಕೋವಿಡ್‌ ಸಂದರ್ಭದಲ್ಲಿ ಆಸ್ಪತ್ರೆಗಳ ಮುಂದೆ ನಾ ಮುಂದು ತಾ ಮುಂದು ಎಂದು ಸರದಿ ಸಾಲಿನಲ್ಲಿ ನಿಂತು ಲಸಿಕೆ ಹಾಕಿಸಿಕೊಳ್ಳುತ್ತಿದ್ದ ಜನರೀಗ ಕೋವಿಡ್‌ ಸೋಂಕಿನ ಆರ್ಭಟ ಕಡಿಮೆಯಾದ ಬಳಿಕ 3ನೇ ಡೋಸ್‌ ಪಡೆಯಲು ನಿರಾಸಕ್ತಿ ತೋರಿಸುತ್ತಿದ್ದಾರೆ. ಕೊಪ್ಪಳ ಜಿಲ್ಲೆಯಲ್ಲಿ ಈವರೆಗೂ 2 ಲಕ್ಷ ಜನರಷ್ಟೇ 3ನೇ ಡೋಸ್‌ ಲಸಿಕೆ ಪಡೆದಿದ್ದು, 6 ಲಕ್ಷ ಜನರು ಲಸಿಕೆ ಪಡೆಯುವುದು ಬಾಕಿಯಿದೆ.

Advertisement

ಜಿಲ್ಲೆಯಲ್ಲಿ ಕಳೆದ ಎರಡು ವರ್ಷದ ಅವಧಿಯಲ್ಲಿ ಜನತೆ ಕೋವಿಡ್‌ ಆತಂಕದಲ್ಲಿಯೇ ಜೀವನವನ್ನ ಸಾಗಿಸಿದ್ದರು. ಲಸಿಕೆ ಪಡೆಯಿರಿ ಎಂದು ಹೇಳಿದಾಕ್ಷಣ ಆಸ್ಪತ್ರೆಗಳ ಮುಂದೆ ಸರದಿ ಸಾಲಿನಲ್ಲಿ ನಿಂತು ಲಸಿಕೆ ಪಡೆದಿದ್ದರು. ಕೋವಿಡ್‌ ಬಗ್ಗೆ ಜಾಗೃತರಾಗಿರಿ ಎಂದು ಸರ್ಕಾರ ಹೇಳಿದಾಕ್ಷಣ ಅತ್ಯಂತ ಕಟ್ಟುನಿಟ್ಟಿನ ನಿಯಮ ಪಾಲನೆ ಮಾಡಿದ್ದರು. ಆದರೆ ಈಗ ಅದೇ ಜನರು 3ನೇ ಡೋಸ್‌ ಪಡೆಯುವಲ್ಲಿ ಆಸಕ್ತಿಯೇ ಇಲ್ಲ ಎನ್ನುವ ಮಾತುಗಳು ಕೇಳಿ ಬಂದಿವೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮೊದಲೆರಡು ಡೋಸ್‌ಗಳನ್ನ ಜಿಲ್ಲೆಯ ಜನರಲ್ಲಿ ಆದ್ಯತೆ ಮೇರೆಗೆ ಲಸಿಕೆ ಹಾಕಿದೆ. 18 ವರ್ಷ ಮೇಲ್ಪಟ್ಟ ಹಾಗೂ 59 ವರ್ಷದೊಳಗಿನ ಪ್ರತಿಯೊಬ್ಬರೂ 3ನೇ ಡೋಸ್‌ ಲಸಿಕೆ ಪಡೆಯಿರಿ ಎಂದೆನ್ನುತ್ತಿದೆ. ಜನರಲ್ಲೂ ಜಾಗೃತಿ ಮೂಡಿಸುತ್ತಿದೆ. ಈ ಲಸಿಕೆ ಪಡೆಯುವುದರಿಂದ ಜನರಲ್ಲಿ ನಿರೋಧಕ ಶಕ್ತಿ ಹೆಚ್ಚಾಗಿ ಯಾವು ಸೋಂಕು ತೊಂದರೆ ಮಾಡಲ್ಲ ಎಂದು ಜಾಗೃತಿ ಮೂಡಿಸುತ್ತಿದೆ. ಆದರೆ ಜನರಲ್ಲಿ ಮೂರನೇ ಡೋಸ್‌ ಪಡೆಯಲು ಆಸಕ್ತಿ ತೋರುತ್ತಿಲ್ಲ.

ಪ್ರಸ್ತುತ ಜಿಲ್ಲಾ ಆರೋಗ್ಯ ಇಲಾಖೆಯ ಅಂಕಿ ಅಂಶಗಳ ಪ್ರಕಾರ, 3ನೇ ಡೋಸ್‌ ಅನ್ನು ಕೊಪ್ಪಳ ತಾಲೂಕು-82819, ಕುಷ್ಟಗಿ -72501, ಯಲಬುರ್ಗಾ-63863, ಗಂಗಾವತಿ-66879 ಜನರು ಸೇರಿದಂತೆ ಒಟ್ಟಾರೆ ಈ ವರೆಗೂ 2,86,062 ಜನರು 3ನೇ ಡೋಸ್‌ ಲಸಿಕೆ ಪಡೆದಿದ್ದಾರೆ. ಆದರೆ ಮಾಹಿತಿಯ ಪ್ರಕಾರ 6,69,699 ಜನರು 3ನೇ ಡೋಸ್‌ ಲಸಿಕೆ ಪಡೆಯಬೇಕಿದೆ. ಕೊಪ್ಪಳ ತಾಲೂಕಿನಲ್ಲಿ 1,95,479, ಕುಷ್ಟಗಿ-1,26,694, ಯಲಬುರ್ಗಾ-1,13,969, ಗಂಗಾವತಿ-2,33,567 ಸೇರಿದಂತೆ 6,69,699 ಜನರು ಲಸಿಕೆಯನ್ನು ಪಡೆಯಬೇಕಿದೆ. ಈ ಪೈಕಿ ಗಂಗಾವತಿ ತಾಲೂಕಿನಲ್ಲಿಯೇ ಹೆಚ್ಚು ಜನರು ಮೂರನೇ ಡೋಸ್‌ ಪಡೆಯುವಲ್ಲಿ ನಿರಾಸಕ್ತಿ ತೋರುತ್ತಿದ್ದಾರೆ.

ಕೋವಿಡ್‌ ಭಯವೇ ಮರೆತ ಜನತೆ: ರಾಜ್ಯದ ಇತರೆ ಜಿಲ್ಲೆಗಳ ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ಕೊಪ್ಪಳ ಜಿಲ್ಲೆಯೇ 3ನೇ ಡೋಸ್‌ ಲಸಿಕೆ ಹಾಕುವಲ್ಲಿ ಉತ್ತಮ ಎಂದೆನಿಸಿದೆ. ಯಾದಗಿರಿ ಮೊದಲ ಸ್ಥಾನದಲ್ಲಿದ್ದರೆ, ಕೊಪ್ಪಳ 2ನೇ ಸ್ಥಾನದಲ್ಲಿದೆ. ಇದು ಸ್ವಲ್ಪ ನೆಮ್ಮದಿಯ ವಿಚಾರವಾಗಿದೆ. ಆದರೆ ಜಿಲ್ಲೆಯ ಜನತೆ ಕೋವಿಡ್‌ ಭಯವನ್ನೇ ಮರೆತು ಲಸಿಕೆಯನ್ನೂ ಪಡೆಯುವಲ್ಲಿ ನಿರಾಸಕ್ತಿ ತೋರುತ್ತಿದ್ದಾರೆ. ಈಗೆಲ್ಲ ಕೋವಿಡ್‌ ಇಳಿಮುಖವಾಗಿದೆ. ಮತ್ತ್ಯಾಕೆ 3ನೇ ಡೋಸ್‌ ಲಸಿಕೆ ಪಡೆಯಬೇಕು ಎನ್ನುವ ನಿರ್ಲಕ್ಷ್ಯ ಭಾವನೆ ತಾಳುತ್ತಿದ್ದಾರೆ. ಆದರೂ ಸಹಿತ ಜಿಲ್ಲಾ ಆರೋಗ್ಯ ಇಲಾಖೆ 310 ತಂಡವು ಮನೆ ಮನೆಗೆ ವಾರದಲ್ಲಿ ಒಂದು ದಿನ ತೆರಳಿ ಲಸಿಕೆ ಹಾಕಿಸಿಕೊಳ್ಳುವಂತೆ ಜನರಲ್ಲಿ ಮನವಿ ಮಾಡುತ್ತಿದೆ.

Advertisement

ಜಿಲ್ಲೆಯಲ್ಲಿ 3ನೇ ಡೋಸ್‌ ಲಸಿಕೆಯನ್ನು ಆಸ್ಪತ್ರೆಗಳಲ್ಲಿ ಹಾಕಲಾಗುತ್ತಿದೆ. ವಾರದಲ್ಲಿ ಒಂದು ದಿನ ತಮ್ಮ ತಂಡವು ಮನೆ ಮನೆಗೆ ತೆರಳಿ ಲಸಿಕೆ ಹಾಕುತ್ತಿದೆ. ಈಗ ಕೋವಿಡ್‌ ಇಳಿಮುಖವಾಗಿದ್ದು, ಜನರಲ್ಲಿ ಭಯ ದೂರವಾಗಿದೆ. ಹಾಗಾಗಿ ಜನರು 3ನೇ ಡೋಸ್‌ ಲಸಿಕೆ ಪಡೆಯಲು ಆಸಕ್ತಿ ತೋರುತ್ತಿಲ್ಲ. ನಾವು ಅವರಿಗೆ ಮನವರಿಕೆ ಮಾಡಿ ಲಸಿಕೆ ಹಾಕುತ್ತಿದ್ದೇವೆ.  -ಡಾ| ಪ್ರಕಾಶ, ಆರ್‌ಸಿಎಚ್‌ ಅಧಿಕಾರಿ

„ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next