Advertisement

ಮುಂಗಾರು ಬಿತ್ತನೆಗೆ ರೈತರ ಹಿಂದೇಟು; ವಾಡಿಕೆಗಿಂತ ಕಡಿಮೆ ಮಳೆ

06:16 PM Jun 30, 2022 | Nagendra Trasi |

ಆಲಮಟ್ಟಿ: ಮುಂಗಾರು ಮಳೆ ಸಮರ್ಪಕವಾಗಿ ಸುರಿಯದಿರುವುದರಿಂದ ಬಿತ್ತಲು ರೈತರು ಹಿಂದೇಟು ಹಾಕುವಂತಾಗಿದೆ. ಪ್ರತಿ ವರ್ಷವೂ ರೋಹಿಣಿ ಅಥವಾ ಮೃಗಶಿರಾ ಮಳೆಗಳು ವಾಡಿಕೆಯಂತೆ ಆಗುತ್ತಿದ್ದರಿಂದ ರೈತರು ಮುಂಗಾರು ಬಿತ್ತನೆ ಮಾಡುತ್ತಿದ್ದರು.

Advertisement

ನಂತರದ ಮಳೆಗಳು ಸಕಾಲದಲ್ಲಿ ಆಗದಿದ್ದರೂ ಕೃಷ್ಣೆಯ ಉಗಮ ಸ್ಥಾನ ಮಹಾಬಳೇಶ್ವರದಲ್ಲಿ ವ್ಯಾಪಕ ಮಳೆಯಾಗುತ್ತಿತ್ತು. ಇದರಿಂದ ಆಲಮಟ್ಟಿಯ ಲಾಲ್‌ ಬಹಾದ್ದೂರ್‌ ಶಾಸ್ತ್ರಿ ಜಲಾಶಯಕ್ಕೆ ಒಳ ಹರಿವು ಹೆಚ್ಚಾಗಿ ಜಲಾಶಯ ಕಾಲಮಿತಿಯಲ್ಲಿ ತುಂಬುತ್ತಿದ್ದರಿಂದ ಸಹಜವಾಗಿ ಕಾಲುವೆಗಳ ಮೂಲಕ ರೈತರ ಜಮೀನಿಗೆ ನೀರು ಹರಿಸಲಾಗುತ್ತಿತ್ತು.

ಮುಂಗಾರು ಮಳೆಗಳು ಕೃಷ್ಣಾ ಮೇಲ್ದಂಡೆ ಯೋಜನೆಯ ಫಲಾನುಭವಿ ಜಿಲ್ಲೆಗಳಲ್ಲಿ ಸಮರ್ಪಕವಾಗಿ ಸುರಿಯದಿದ್ದರೂ ಶಾಸ್ತ್ರಿ ಸಾಗರ ಮತ್ತು ನಾರಾಯಣಪುರದ ಬಸವ ಸಾಗರಗಳಲ್ಲಿ ವ್ಯಾಪಕ ಜಲರಾಶಿ ತುಂಬುತ್ತಿದ್ದರಿಂದ ಆ ನೀರನ್ನು ಕಾಲುವೆಗಳ ಮೂಲಕ ರೈತರು ತಾವು ಬಿತ್ತನೆ ಮಾಡಿದ ಫಸಲಿಗೆ ನೀರುಣಿಸುತ್ತಿದ್ದರು.

ಸಾಮಾನ್ಯವಾಗಿ ಮೇ ಕೊನೆ ವಾರದಿಂದ ಜೂನ್‌ ತಿಂಗಳಿನಲ್ಲಿ ಮಳೆಯಾಗುತ್ತಿತ್ತು. ಈ ಬಾರಿ ಕೃಷ್ಣಾ ನದಿ ದಡದಲ್ಲಿರುವ ಜಿಲ್ಲೆಗಳಲ್ಲಿ ಸಮರ್ಪಕವಾಗಿ ಮಳೆಯಾಗಿಲ್ಲ. ಅಲ್ಲದೇ ಮಹಾರಾಷ್ಟ್ರದಲ್ಲಿರುವ ಕೃಷ್ಣಾ ಜಲಾನಯನ ಪ್ರದೇಶದಲ್ಲಿಯೂ ವಾಡಿಕೆಯಂತೆ ಮಳೆಯಾಗದೇ ಇರುವುದರಿಂದ ಅಧಿಕೃತವಾಗಿ ಆಲಮಟ್ಟಿ ಜಲಾಶಯಕ್ಕೆ ಒಳ ಹರಿವು ಆರಂಭಗೊಳ್ಳದೇ ಇರುವುದು ರೈತರನ್ನು ಚಿಂತೆಗೀಡುಮಾಡಿದೆ.

519.60ಮೀ. ಗರಿಷ್ಠ ಎತ್ತರದಲ್ಲಿ 123.081 ಟಿಎಂಸಿ ಅಡಿ ಗರಿಷ್ಠ ಸಂಗ್ರಹ ಸಾಮರ್ಥ್ಯದ ಶಾಸ್ತ್ರಿ ಜಲಾಶಯದಲ್ಲಿ ಬುಧವಾರ 513.12ಮೀ. ಎತ್ತರದಲ್ಲಿ ಒಟ್ಟು 48.278 ಟಿಎಂಸಿ ಅಡಿ ಸಂಗ್ರಹವಾಗಿದ್ದು, 30.658 ಟಿಎಂಸಿ ಅಡಿ ನೀರು ಬಳಸಿಕೊಳ್ಳಬಹುದಾಗಿದೆ. ಈ ಬಾರಿ ಒಳಹರಿವು ಆರಂಭವಾಗಿಲ್ಲ. ಕೂಡಗಿಯಲ್ಲಿರುವ ಶಾಖೋತ್ಪನ್ನ ವಿದ್ಯುತ್‌ ಸ್ಥಾವರ, ಭಾಷ್ಪೀಭವನ ಹಾಗೂ ವಿವಿಧ ಕುಡಿಯುವ ನೀರಿನ ಯೋಜನೆಗಳು ಸೇರಿ ಒಟ್ಟು 810 ಕ್ಯೂಸೆಕ್‌ ನೀರು ಹೊರ ಹರಿವಿದೆ.

Advertisement

ಕಳೆದ ವರ್ಷ ಇದೇ ದಿನ 517.43 ಮೀ. ಎತ್ತರದಲ್ಲಿ 89.933 ಟಿಎಂಸಿ ಅಡಿ ನೀರು ಸಂಗ್ರಹವಾಗಿ ಜಲಾಶಯಕ್ಕೆ 20451 ಕ್ಯೂಸೆಕ್‌ ನೀರು ಒಳಹರಿವಿತ್ತು. ಜಲಾಶಯದಿಂದ 20451ಕ್ಯೂಸೆಕ್‌ ನೀರು ಹೊರ ಹರಿವಿತ್ತು.

ಮುಗಿಯದ ಕ್ಲೋಸರ್‌ ಕಾಮಗಾರಿ: ಮಳೆಗಾಲ ಆರಂಭವಾಗಿ ತಿಂಗಳು ಗತಿಸುತ್ತಿದ್ದರೂ ಕೂಡ ಕೃಷ್ಣಾ ಮೇಲ್ದಂಡೆ ಯೋಜನೆ ಕಾಲುವೆಗಳಲ್ಲಿನ ಹೂಳೆತ್ತುವುದು. ಒಡೆದ ಕಾಲುವೆಗಳ ದುರಸ್ತಿ ಮಾಡುವ ಕಾಮಗಾರಿಗಳು ಇನ್ನೂ ಕೂಡ ಸರಿಯಾಗಿ ಆರಂಭವಾಗದೇ ಇರುವುದು ಕೂಡ ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಕೃಷ್ಣೆಯ ಉಗಮ ಸ್ಥಾನದಲ್ಲಿ ಮತ್ತು ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ವ್ಯಾಪಕವಾಗಿ ಮಳೆ ಸುರಿದರೆ ಒಂದೇ ವಾರದಲ್ಲಿ ಎರಡೂ ಜಲಾಶಯಗಳು ತುಂಬುವುದು ವಾಡಿಕೆಯಾಗಿದೆ. ಒಂದು ವೇಳೆ ಮಹಾರಾಷ್ಟ್ರದಲ್ಲಿ ಮಳೆ ಸುರಿದು ಜಲಾಶಯಕ್ಕೆ ನೀರು ಬಂದು ತುಂಬಿದರೂ ಕೂಡ ಕಾಲುವೆಗಳಲ್ಲಿನ ಹೂಳು ತೆರವು ಹಾಗೂ ವಿಶೇಷ ದುರಸ್ತಿ ಕಾಮಗಾರಿಗಳು ಮುಗಿಯಲು ಇನ್ನೂ ಒಂದು ತಿಂಗಳಾದರೂ ಬೇಕಾಗುತ್ತವೆ ಎನ್ನುತ್ತವೆ ಕೃಷ್ಣಾ ಭಾಗ್ಯ ಜಲ ನಿಗಮದ ಮೂಲಗಳು.

ಕಳೆದ 12 ವರ್ಷಗಳ ಹಿನ್ನೋಟ ನೋಡಿದಾಗ ಕೇವಲ ಎರಡು ಬಾರಿ ಮಾತ್ರ ಜುಲೈ ತಿಂಗಳಿನ ಆರಂಭಿಕ ವಾರದಲ್ಲಿ ಜಲಾಶಯಕ್ಕೆ ಒಳಹರಿವು ಬಂದಿದ್ದನ್ನು ಹೊರತು ಪಡಿಸಿದರೆ 10 ವರ್ಷಗಳ ಕಾಲ ಸಾಮಾನ್ಯವಾಗಿ ಜೂನ್‌ ತಿಂಗಳಿನಲ್ಲಿಯೇ ಮಳೆಯಾಗಿದೆ.

ರೋಹಿಣಿ ಹಾಗೂ ಮೃಗಶಿರಾ ಮಳೆಗಳು ಕೆಲ ಭಾಗಗಳಲ್ಲಿ ಅಲ್ಪಸ್ವಲ್ಪವಾಗಿ ಆಗಿರುವುದರಿಂದ ಬಿತ್ತನೆ ಮಾಡಿದ ಬೆಳೆಗಳು ಮೊಳಕೆಯಲ್ಲಿಯೇ ಕಮರುವ ಸ್ಥಿತಿ ಬಂದಿದೆ. ಅಲ್ಲದೇ ರೈತರು ಸಾಲ ಮಾಡಿ ಬಿತ್ತನೆಗಾಗಿ ಭೂಮಿಯನ್ನು ಹದವಾಗಿರಿಸಿದ್ದಾರೆ. ಅಲ್ಲದೇ ಬೀಜ-ಗೊಬ್ಬರ ಖರೀದಿ ಮಾಡಿಟ್ಟುಕೊಂಡಿದ್ದಾರೆ.ಸಕಾಲಕ್ಕೆ ಮಳೆಯಾಗದಿದ್ದರೆ ರೈತರು ಸಂಕಷ್ಟಕ್ಕೀಡಾಗುತ್ತಾರೆ ಎನ್ನುತ್ತಾರೆ ರೈತ ಮುಖಂಡ ಸಲೀಂ ಮುಲಾ.

ಪ್ರತಿ ವರ್ಷವೂ ರೋಹಿಣಿ ಅಥವಾ ಮೃಗಶಿರಾ ಮಳೆಗಳು ಸುರಿಯುತ್ತಿದ್ದರಿಂದ ರೈತರು ಸಕಾಲಕ್ಕೆ ಬಿತ್ತನೆ ಮಾಡುತ್ತಿದ್ದರು. ಆದರೆ ಈ ಬಾರಿ ಎರಡೂ ಮಳೆಗಳು ಸಮರ್ಪಕವಾಗಿ ಆಗದಿರುವುದರಿಂದ ಮುಂಗಾರು ಬೆಳೆಗಳ ಬಿತ್ತನೆ ಮಾಡುವುದು ರೈತರಿಗೆ ಚಿಂತೆಯಾಗಿದೆ.
ಮಲ್ಲು ರಾಠೊಡ,
ತಾಪಂ ಮಾಜಿ ಸದಸ್ಯ

ಕಾಲುವೆಗಳ ಹೂಳೆತ್ತುವುದು ಹಾಗೂ ಕಾಲುವೆ ದುರಸ್ತಿ ಕಾಮಗಾರಿಗಳು 15ದಿನದೊಳಗೆ ಮುಕ್ತಾಯಗೊಳ್ಳುತ್ತವೆ. ಜಲಾಶಯಕ್ಕೆ ಇನ್ನೂ ಒಳ ಹರಿವು ಆರಂಭವಾಗಿಲ್ಲ, ಮಹಾರಾಷ್ಟ್ರದಲ್ಲಿ ಮಳೆ ಆರಂಭವಾಗಿದ್ದು ಬುಧವಾರದಿಂದ ಒಳ ಹರಿವು ಆರಂಭವಾಗುವ ನಿರೀಕ್ಷೆಯಿದೆ.
ಎಚ್‌.ಸುರೇಶ, ಮುಖ್ಯ
ಅಭಿಯಂತರರು ಕೆಬಿಜೆನ್ನೆಲ್‌ ಆಲಮಟ್ಟಿ ವಲಯ

ಶಂಕರ ಜಲ್ಲಿ

Advertisement

Udayavani is now on Telegram. Click here to join our channel and stay updated with the latest news.

Next