ಬೆಳಗಾವಿ: 14 ವರ್ಷಗಳ ನಂತರ ಮತ್ತೆ ಭೀಕರವಾಗಿ ಮರುಕಳಿಸಿದ ನದಿಗಳ ಪ್ರವಾಹ ಹಳ್ಳಿಗಳ ಸ್ಥಳಾಂತರದ ಬೇಡಿಕೆಗೆ ಮತ್ತೆ ಜೀವ ತುಂಬಿದೆ. ಜನರ ಸುರಕ್ಷತೆಗೆ ಮೊದಲ ಆದ್ಯತೆ ನೀಡಿ ಎಂಬ ಬಲವಾದ ಕೂಗು ನದಿ ತೀರದ ಜನರು ಮತ್ತು ಜನಪ್ರತಿನಿಧಿಗಳಿಂದ ವ್ಯಕ್ತವಾಗಿದೆ.
ಇದುವರೆಗೆ ಸ್ಥಳಾಂತರ ಬಗ್ಗೆ ಅಷ್ಟು ಗಂಭೀರವಾಗಿ ಒತ್ತಾಯ ಮಾಡದೇ ಇದ್ದ ಕೃಷ್ಣಾ, ವೇದಗಂಗಾ, ಘಟಪ್ರಭಾ ಹಾಗೂ ಮಲಪ್ರಭಾ ನದಿ ತೀರದ ಜನರು ಈಗ ಸುರಕ್ಷತೆಯ ದೃಷ್ಟಿಯಿಂದ ಹಳ್ಳಿಗಳ ಸ್ಥಳಾಂತರ ಮಾಡಿ. ಅಲ್ಲಿ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಿ ಎಂದು ಸರಕಾರದ ಮುಂದೆ ಬೇಡಿಕೆ ಮಂಡಿಸಿರುವುದು ವಾಸ್ತವ ಸ್ಥಿತಿಯ ಭೀಕರತೆಯನ್ನು ಪರಿಚಯ ಮಾಡಿಕೊಟ್ಟಿದೆ.
ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ನದಿ ತೀರದ ಹಳ್ಳಿಗಳ ಸ್ಥಳಾಂತರ ವಿಷಯ ಪ್ರಸ್ತಾಪ ಮಾಡಿರುವುದು. ಸಂತ್ರಸ್ತರು ಲಿಖೀತ ರೂಪದಲ್ಲಿ ಬರೆದುಕೊಟ್ಟರೆ ಸರಕಾರ ಇದಕ್ಕೆ ಸಿದ್ಧ ಎಂದು ಹೇಳಿರುವುದು ಹಳ್ಳಿಗಳ ಸ್ಥಳಾಂತರ ಪ್ರಸ್ತಾಪಕ್ಕೆ ಮರು ಜೀವ ನೀಡಿದೆ. ಇದರ ಜೊತೆಗೆ ಹಳ್ಳಿಗಳ ಸ್ಥಳಾಂತರಕ್ಕೆ ಜನರು ಎಷ್ಟರಮಟ್ಟಿಗೆ ಸಹಮತ ಸೂಚಿಸುತ್ತಾರೆ ಎಂಬ ಪ್ರಶ್ನೆಯನ್ನು ಸಹ ಹುಟ್ಟುಹಾಕಿದೆ. 2005 ರಲ್ಲಿ ಇದೇ ರೀತಿ ಭೀಕರ ಪ್ರವಾಹ ಬಂದೆರಗಿದಾಗ ಸರಕಾರ ಕೃಷ್ಣಾ, ಘಟಪ್ರಭಾ, ಮಲಪ್ರಭಾ ನದಿ ತೀರದ 75ಕ್ಕೂ ಹೆಚ್ಚು ಹಳ್ಳಿಗಳನ್ನು ಶಾಶ್ವತವಾಗಿ ಸ್ಥಳಾಂತರ ಮಾಡುವ ಯೋಜನೆ ರೂಪಿಸಿತ್ತು. ಆದರೆ ಆಗ ನದಿ ತೀರದ ಜನರಿಂದ ಇದಕ್ಕೆ ನಿರೀಕ್ಷಿತ ಸಹಕಾರ ಸಿಕ್ಕಿರಲಿಲ್ಲ. ಕೆಲ ಹಳ್ಳಿಗಳ ಸ್ಥಳಾಂತರ ಮಾಡುವ ಪ್ರಕ್ರಿಯೆ ಆರಂಭಿಸಿ ಸುರಕ್ಷಿತ ಸ್ಥಳಗಳಲ್ಲಿ ಹೊಸ ಮನೆಗಳನ್ನು ನಿರ್ಮಾಣ ಮಾಡಿದರೂ ಬಹುತೇಕ ಜನ ಅಲ್ಲಿಗೆ ಹೋಗಲೇ ಇಲ್ಲ. ಇದರಿಂದ ಹಳ್ಳಿಗಳ ಸ್ಥಳಾಂತರ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣವಾಗಲೇ ಇಲ್ಲ. ಕೆಲ ಹಳ್ಳಿಗಳಲ್ಲಿ ಸೇತುವೆಗಳನ್ನು ಎತ್ತರಮಾಡಿ ಸ್ಥಳಾಂತರ ಪಟ್ಟಿಯಿಂದ ಅವುಗಳನ್ನು ಕೈಬಿಡಲಾಯಿತು.
ಈ ಬಾರಿ ಕೃಷ್ಣಾ, ವೇದಗಂಗಾ ನದಿಗಳ ಭಾರೀ ಪ್ರವಾಹದ ಜೊತೆಗೆ ಘಟಪ್ರಭಾ ಹಾಗೂ ಮಲಪ್ರಭಾ ನದಿಗಳು ಸಹ ಅಪಾರ ಹಾನಿ ಮಾಡಿವೆ. ಜಿಲ್ಲಾಡಳಿತದ ಸಮೀಕ್ಷೆ ಪ್ರಕಾರ ಅತಿಯಾದ ಮಳೆ ಹಾಗೂ ನದಿಗಳ ಪ್ರವಾಹದಿಂದ 872 ಗ್ರಾಮಗಳು ತೊಂದರೆಗೆ ತುತ್ತಾಗಿವೆ. ಕೃಷ್ಣಾ ಹಾಗೂ ವೇದಗಂಗಾ ನದಿಗಳು ಚಿಕ್ಕೋಡಿ, ಅಥಣಿ ಹಾಗೂ ರಾಯಬಾಗ ತಾಲೂಕುಗಳಲ್ಲಿ ತೀವ್ರ ತೊಂದರೆ ಉಂಟುಮಾಡಿದ್ದರೆ ಘಟಪ್ರಭಾ ನದಿಯ ದಾಖಲೆಯ ಪ್ರಮಾಣದ ನೀರಿನಿಂದ ಗೋಕಾಕ ತಾಲೂಕು ಬಹಳ ಹಾನಿ ಅನುಭವಿಸಿತು. ನಾಲ್ಕೈದು ಹಳ್ಳಿಗಳು ಸಂಪೂರ್ಣ ಮುಳುಗಡೆಯಾಗಿದ್ದವು. ಗೋಕಾಕ
ಪಟ್ಟಣದ ಅರ್ಧಭಾಗ ನೀರಿನಲ್ಲಿತ್ತು. ಅದೇ ರೀತಿ ಮಲಪ್ರಭಾ ನದಿಯೂ ಈ ಬಾರಿ ದಾಖಲೆಯ ಪ್ರಮಾಣದಲ್ಲಿ ನೀರು ಕಂಡಿದ್ದರಿಂದ ರಾಮದುರ್ಗ ತಾಲೂಕು ಹಿಂದೆಂದೂ ಕಂಡಿರದಂತಹ ಅನಾಹುತಕ್ಕೆ ಸಾಕ್ಷಿಯಾಯಿತು. ನದಿ ತೀರದ ಗೊಣಗನೂರು, ಸುನ್ನಾಳ, ಕಿಲಬನೂರ, ಹಂಪಿಹೊಳಿ, ಬೆನ್ನೂರ ಗ್ರಾಮಗಳು ಅಕ್ಷರಶಃ ನದಿಗಳಂತೆ ಕಂಡುಬಂದಿದ್ದವು. ಇದೇ ಭಯದಲ್ಲಿ ಈಗ ನದಿ ಪಾತ್ರದ ಜನರು ಸ್ಥಳಾಂತರದ ಬೇಡಿಕೆ ಇಟ್ಟಿದ್ದಾರೆ. ಹಳ್ಳಿಗಳ ಸ್ಥಳಾಂತರ ಅಷ್ಟು ಸರಳವಾದ ಕೆಲಸ ಆಲ್ಲ. 2005 ರಲ್ಲಿ ಸ್ಥಳಾಂತರ ಪ್ರಕ್ರಿಯೆ ಆರಂಭಿಸಿದರೂ ಯಾವ ಹಳ್ಳಿಯೂ ಪೂರ್ಣ ಪ್ರಮಾಣದಲ್ಲಿ ಸ್ಥಳಾಂತರವಾಗಲೇ ಇಲ್ಲ.
ಆಗ 95 ಹಳ್ಳಿಗಳು ಪ್ರವಾಹಕ್ಕೆ ಸಿಲುಕಿ ಬಹಳ ನಲುಗಿದ್ದವು. ಇದರಲ್ಲಿ 58 ಹಳ್ಳಿಗಳು ಪೂರ್ಣವಾಗಿ ಮುಳುಗಿದ್ದರೆ 37 ಗ್ರಾಮಗಳು ಭಾಗಶಃ ಮುಳುಗಡೆಯಾಗಿದ್ದವು. ಕೃಷ್ಣಾ ನದಿ ತೀರದ ಚಿಕ್ಕೋಡಿ, ಅಥಣಿ ಹಾಗೂ ರಾಯಬಾಗ ತಾಲೂಕುಗಳಲ್ಲೇ 80 ಹಳ್ಳಿಗಳು ಪ್ರವಾಹದ ಸುಳಿಗೆ ಸಿಲುಕಿದ್ದವು. ಆಗ ಅಥಣಿ ತಾಲೂಕಿನ ಜುಗೂಳ ಮಂಗಾವತಿ, ಕೃಷ್ಣಾ ಕಿತ್ತೂರ, ಕಾತ್ರಾಳ, ಜನವಾಡ, ಚಿಕ್ಕೋಡಿ ತಾಲೂಕಿನಲ್ಲಿ ಯಡೂರ, ಕಲ್ಲೋಳ, ಯಡೂರವಾಡಿ, ಮಾಂಜರಿ ಹಳ್ಳಿಗಳ ಸ್ಥಳಾಂತರ ಪ್ರಸ್ತಾಪವಾಗಿತ್ತು.
2005 ರ ಪ್ರವಾಹಕ್ಕಿಂತ ಈ ಬಾರಿ ಪರಿಸ್ಥಿತಿ ಭೀಕರವಾಗಿತ್ತು ಎಂಬುದು ನದಿ ತೀರದ ಜನರ ಆತಂಕ. ಪ್ರತಿ ವರ್ಷದ ಈ ಪ್ರವಾಹ ನೋಡಿ ನದಿ ತೀರದ ಜನರು ಈಗ ಸುರಕ್ಷತೆಯ ದೃಷ್ಟಿಯಿಂದ ಸ್ಥಳಾಂತರವಾಗಲು ತುದಿಗಾಲ ಮೇಲೆ ನಿಂತಿದ್ದಾರೆ. ಆದರೆ ಅವರಲ್ಲಿ ಹಳ್ಳಿಗಳ ಸ್ಥಳಾಂತರ ಮಾಡಿದರೆ ತಮಗೆ ಬರುವ ಪರಿಹಾರ ಹಾಗೂ ಪುನರ್ವಸತಿಯ ಬಗ್ಗೆ ಆತಂಕ ಹಾಗೂ ಗೊಂದಲ ಇದೆ. ಸಂತ್ರಸ್ತರಿಗೆ ಯಾವ ರೀತಿ ಪರಿಹಾರ ನೀಡಲಾಗುವುದು. ಪುನರ್ವಸತಿ ಎಲ್ಲಿ ಮತ್ತು ಯಾವ ರೀತಿ ಎಂಬ ಬಗ್ಗೆ ಸರಕಾರದ ಸ್ಪಷ್ಟತೆ ಇಲ್ಲ. ಇದರಿಂದ ದೊಡ್ಡ ರೈತರು ಹಾಗೂ ಆರ್ಥಿಕವಾಗಿ ಸಬಲರಾದವರು ಸ್ಥಳಾಂತರಕ್ಕೆ ಹಿಂದೇಟು ಹಾಕುತ್ತಿದ್ದಾರೆ.
-ಕೇಶವ ಆದಿ