Advertisement
ಮಳೆಗಾಲ ಬಂದಾಗ, ಜಲಾಶಯಗಳ ನೀರಿನ ಮಟ್ಟ ಅಪಾಯದ ಮಟ್ಟ ತಲುಪಿದಾಗ ಸ್ಥಳಾಂತರದ ವಿಷಯ ಆದ್ಯತೆಯ ಮೇಲೆ ಪ್ರಸ್ತಾಪವಾಗುತ್ತದೆ. ಹೋರಾಟ ನಡೆಯುತ್ತವೆ. ಶಾಸಕರಾದಿಯಾಗಿ ಎಲ್ಲರೂ ಒತ್ತಾಯ ಮಾಡುತ್ತಾರೆ. ಆದರೆ ಜಲಾಶಯಗಳ ಒಳಹರಿವಿನ ಪ್ರಮಾಣ ಕಡಿಮೆಯಾಗುತ್ತಿದ್ದಂತೆ ಈ ಮಾತು ಅಲ್ಲಿಗೇ ನಿಲ್ಲುತ್ತದೆ. ಹೋರಾಟಗಳು ಮೌನವಾಗುತ್ತವೆ.
ಗ್ರಾಮಸ್ಥರು ರೂಢಿಸಿಕೊಂಡಿದ್ದಾರೆ. ಇದುವರೆಗೆ ಸ್ಥಳಾಂತರ ಬಗ್ಗೆ ಅಷ್ಟು ಗಂಭೀರವಾಗಿ ಒತ್ತಾಯ ಮಾಡದೇ ಇದ್ದ ಕೃಷ್ಣಾ, ವೇದಗಂಗಾ, ಘಟಪ್ರಭಾ ಹಾಗೂ ಮಲಪ್ರಭಾ ನದಿ ತೀರದ ಜನರು ಸುರಕ್ಷತೆಯ ದೃಷ್ಟಿಯಿಂದ ಹಳ್ಳಿಗಳನ್ನು ಸ್ಥಳಾಂತರ ಮಾಡಿ. ಅಲ್ಲಿ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಿ ಎಂದು ಸರಕಾರದ ಮುಂದೆ ಬೇಡಿಕೆ ಮಂಡಿಸಿದ್ದು ಅಲ್ಲಿಯ ವಾಸ್ತವ ಸ್ಥಿತಿಯ ಭೀಕರತೆಯನ್ನು ಪರಿಚಯ ಮಾಡಿಕೊಟ್ಟಿತ್ತು. ಆಗ ಮುಖ್ಯಮಂತ್ರಿಗಳಾಗಿದ್ದ ಬಿ ಎಸ್ ಯಡಿಯೂರಪ್ಪ ಅವರೇ ಸ್ವತಃ ನದಿ ತೀರದ ಹಳ್ಳಿಗಳ ಸ್ಥಳಾಂತರ ವಿಷಯ ಪ್ರಸ್ತಾಪ ಮಾಡಿದ್ದಲ್ಲದೆ ಸಂತ್ರಸ್ತರು ಲಿಖೀತ ರೂಪದಲ್ಲಿ ಬರೆದುಕೊಟ್ಟರೆ ಸರಕಾರ ಇದಕ್ಕೆ ಸಿದ್ದ ಎಂದು ಹೇಳಿ ನದಿ ಪಾತ್ರದ ಜನರ ಆತಂಕದ ಜೀವನಕ್ಕೆ ಶಾಶ್ವತ ಪರಿಹಾರ ದೊರಕಿಸಿಕೊಡುವ ಹೆಜ್ಜೆ ಇಟ್ಟಿದ್ದರು. ಆದರೆ ಎಲ್ಲವೂ ಅಂದುಕೊಂಡಂತೆ ಆಗಲೇ ಇಲ್ಲ. ನದಿ ನೀರಿನ ಅಬ್ಬರ ಇಳಿಯುತ್ತಿದ್ದಂತೆ ಹಳ್ಳಿಗಳ ಸ್ಥಳಾಂತರದ ಬಿಸಿಯೂ ಆರಿತು. ಪ್ರವಾಹದ ಆತಂಕಕ್ಕೆ ಸ್ಥಳಾಂತರವೇ ಪರಿಹಾರ ಎಂದು ಹೇಳಿದ್ದ ಜನಪ್ರತಿನಿಧಿಗಳು ಸಹ ಆನಂತರ ಸುಮ್ಮನಾದರು.ಸಾಲದ್ದಕ್ಕೆ ಕೊರೊನಾ ಹೆಮ್ಮಾರಿ ಸಹ ಎಲ್ಲ ಕಾರ್ಯಗಳಿಗೆ ಅಡ್ಡಿಯಾಯಿತು.
Related Articles
ದಾಖಲೆಯ ಪ್ರಮಾಣದ ನೀರಿನಿಂದ ಗೋಕಾಕ ತಾಲೂಕು ಬಹಳ ಹಾನಿ ಅನುಭವಿಸಿತು. ನಾಲ್ಕೈದು ಹಳ್ಳಿಗಳು ಸಂಪೂರ್ಣ ಮುಳುಗಡೆಯಾಗಿದ್ದವು.ಗೋಕಾಕ ಪಟ್ಟಣದ ಅರ್ಧಭಾಗ ನೀರಿನಲ್ಲಿತ್ತು.
Advertisement
ಅದೇ ರೀತಿ ಮಲಪ್ರಭಾ ನದಿಯೂ ಸಹ ದಾಖಲೆಯ ಪ್ರಮಾಣದಲ್ಲಿ ನೀರು ಕಂಡಿದ್ದರಿಂದ ರಾಮದುರ್ಗ ತಾಲೂಕು ಹಿಂದೆಂದೂ ಕಂಡಿರದಂತಹ ಅನಾಹುತಕ್ಕೆ ಸಾಕ್ಷಿಯಾಯಿತು. ನದಿ ತೀರದ ಗೊಣಗನೂರು, ಸುನ್ನಾಳ, ಕಿಲಬನೂರ, ಹಂಪಿಹೋಳಿ, ಬೆನ್ನೂರ ಗ್ರಾಮಗಳು ಅಕ್ಷರಶಃ ನದಿಗಳಂತೆ ಕಂಡುಬಂದಿದ್ದವು.
ಈ ಹಿಂದೆ 2005 ರಲ್ಲಿ ಕೃಷ್ಣಾ ನದಿಗೆ ಇದೇ ರೀತಿ ಭೀಕರ ಪ್ರವಾಹ ಬಂದಾಗ ನದಿ ತೀರದ ಹಳ್ಳಿಗಳನ್ನು ಸ್ಥಳಾಂತರ ಮಾಡಬೇಕು ಎಂದು ಆಗಿನ ಸರಕಾರ ನಿರ್ಧಾರ ಮಾಡಿ ಪ್ರಕ್ರಿಯೆ ಸಹ ಆರಂಭಿಸಲಾಗಿತ್ತು. ಅನೇಕ ಹಳ್ಳಿಗಳಿಗೆ ಪರಿಹಾರ ನೀಡಲಾಗಿತ್ತು. ಆದರೆ ಯಾವ ಹಳ್ಳಿಯೂ ಪೂರ್ಣ ಪ್ರಮಾಣದಲ್ಲಿ ಸ್ಥಳಾಂತರವಾಗಲೇ ಇಲ್ಲ. ಹೀಗಾಗಿ ಸ್ಥಳಾಂತರಕ್ಕೆ ಬಹಳ ಆಲೋಚನೆ ಮಾಡಿ ನಿರ್ಧಾರ ಕೈಗೊಳ್ಳಬೇಕಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.2005 ರಲ್ಲಿ ಉಂಟಾದ ಪ್ರವಾಹದಿಂದ 95 ಹಳ್ಳಿಗಳು ಪ್ರವಾಹಕ್ಕೆ ಸಿಲುಕಿ ಬಹಳ ನಲುಗಿದ್ದವು.
ಇದರಲ್ಲಿ 58 ಹಳ್ಳಿಗಳು ಪೂರ್ಣವಾಗಿ ಮುಳುಗಿದ್ದರೆ 37 ಗ್ರಾಮಗಳು ಭಾಗಶಃ ಮುಳುಗಡೆಯಾಗಿದ್ದವು. ಕೃಷ್ಣಾ ನದಿ ತೀರದ ಚಿಕ್ಕೋಡಿ, ಅಥಣಿ ಹಾಗೂ ರಾಯಬಾಗ ತಾಲೂಕುಗಳಲ್ಲೇ 80 ಹಳ್ಳಿಗಳು ಪ್ರವಾಹದ ಸುಳಿಗೆ ಸಿಲುಕಿದ್ದವು. ಆಗ ಅಥಣಿ ತಾಲೂಕಿನ ಜುಗೂಳ ಮಂಗಾವತಿ, ಕೃಷ್ಣಾ ಕಿತ್ತೂರ, ಕಾತ್ರಾಳ, ಜನವಾಡ, ಚಿಕ್ಕೋಡಿ ತಾಲೂಕಿನಲ್ಲಿ ಯಡೂರ, ಕಲ್ಲೋಳ, ಯಡೂರವಾಡಿ, ಮಾಂಜರಿ ಮೊದಲಾದ ಹಳ್ಳಿಗಳ ಸ್ಥಳಾಂತರ ಪ್ರಸ್ತಾಪವಾಗಿತ್ತು.
ಮೇಲಿಂದ ಮೇಲೆ ಪ್ರವಾಹ ನೋಡಿ ನದಿ ತೀರದ ಜನರು ಈಗ ಸುರಕ್ಷತೆಯ ದೃಷ್ಟಿಯಿಂದ ಸ್ಥಳಾಂತರವಾಗಲು ತುದಿಗಾಲ ಮೇಲೆ ನಿಂತಿದ್ದಾರೆ. ಆದರೆ ಅವರಲ್ಲಿ ಹಳ್ಳಿಗಳ ಸ್ಥಳಾಂತರ ಮಾಡಿದರೆ ತಮಗೆ ಬರುವ ಪರಿಹಾರ ಹಾಗೂ ಪುನರ್ವಸತಿಯ ಬಗ್ಗೆ ಆತಂಕ ಹಾಗೂ ಗೊಂದಲ ಇದೆ. ಸಂತ್ರಸ್ತರಿಗೆ ಯಾವ ರೀತಿ ಪರಿಹಾರ ನೀಡಲಾಗುವದು. ಪುನರ್ವಸತಿ ಎಲ್ಲಿ ಮತ್ತು ಯಾವ ರೀತಿ ಎಂಬುದರ ಬಗ್ಗೆ ಸರಕಾರದ ಸ್ಪಷ್ಟತೆ ಇಲ್ಲ. ಇದರಿಂದ ದೊಡ್ಡ ರೈತರು ಹಾಗೂ ಆರ್ಥಿಕವಾಗಿ ಸದೃಢರಾದವರು ಸ್ಥಳಾಂತರಕ್ಕೆ ಹಿಂದೇಟು ಹಾಕುತ್ತಿದ್ದಾರೆ.
ಸ್ಥಳಾಂತರ ಅನಿವಾರ್ಯ. ಆದರೆ ಇಲ್ಲಿ ತಾಂತ್ರಿಕ ಸೇರಿದಂತೆ ಸಾಕಷ್ಟು ಅಡೆತಡೆಗಳಿವೆ. ಆನೇಕ ಕಡೆ ಜಾಗದ ಸಮಸ್ಯೆ ಬಹಳಷ್ಟಿದೆ. ಜಾಗ ಇದ್ದರೂ ಅದು ಹಳೆಯ ಗ್ರಾಮಗಳಿಂದ 10 ಕಿಲೋಮೀಟರ್ ದೂರ ಇರುವುದರಿಂದ ಗ್ರಾಮಸ್ಥರು ಅಲ್ಲಿಗೆ ಹೋಗಲು ಒಪ್ಪುತ್ತಿಲ್ಲ. ಇನ್ನು ಕೆಲವು ಕಡೆ ಜಾಗ ಗುರುತಿಸಿ ಮನೆಗಳನ್ನು ನಿರ್ಮಾಣ ಮಾಡಿದ್ದರೂ ಮೂಲಭೂತ ಸೌಲಭ್ಯಗಳು ಇರದ ಕಾರಣ ಜನರು ಅಲ್ಲಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಮೂಲಭೂತ ಸೌಲಭ್ಯಗಳನ್ನು ಕಲ್ಪಿಸದ ಹೊರತು ಮನೆಗಳ ಹಕ್ಕುಪತ್ರ ನೀಡುವಂತಿಲ್ಲ. ಈ ಎಲ್ಲ ಕಾರಣಗಳಿಂದ ಹಳ್ಳಿಗಳ ಸ್ಥಳಾಂತರ ಸುಲಭವಾಗಿ ಆಗುತ್ತಿಲ್ಲ. ಬಹಳ ಗೊಂದಲ ಇದೆ. ಹೀಗಾಗಿ ಪ್ರತಿವರ್ಷಪ್ರವಾಹದಿಂದ ಜನರು ಸಂಕಷ್ಟ ಎದುರಿಸಬೇಕಾಗಿದೆ.ಮಹೇಶ ಕುಮಟಳ್ಳಿ, ಶಾಸಕರು, ಅಥಣಿ. ಜನರ ಸುರಕ್ಷತೆ ದೃಷ್ಟಿಯಿಂದ ಭವಿಷ್ಯದಲ್ಲಿ ನದಿ ತೀರದ ಹಳ್ಳಿಗಳ ಸ್ಥಳಾಂತರ ಮಾಡಲೇಬೇಕು. ಪ್ರತಿ ವರ್ಷ ಪರಿಹಾರ ಕೊಡುವದರಿಂದ ಸಮಸ್ಯೆ ನಿವಾರಣೆಯಾಗುವುದಿಲ್ಲ. ಆದರೆ ಹಳ್ಳಿಗಳನ್ನು ಸ್ಥಳಾಂತರ ಮಾಡಿದರೂ ಜನರು ಅಲ್ಲಿಗೆ ಹೋಗುವದಿಲ್ಲ. ಇದರಿಂದ ಸಮಸ್ಯೆಯಾಗಿದೆ. ಅರಭಾವಿ ವಿಧಾನಸಭಾ ಕ್ಷೇತ್ರವೊಂದರಲ್ಲೇ ಸುಮಾರು 30 ಹಳ್ಳಿಗಳು ನದಿ ದಂಡೆಯ ಮೇಲಿವೆ. ಸರಕಾರ ಇದರ ಬಗ್ಗೆ ಆಲೋಚನೆ ಮಾಡಬೇಕು.
ಬಾಲಚಂದ್ರ ಜಾರಕಿಹೊಳಿ, ಶಾಸಕರು ಕೇಶವ ಆದಿ