Advertisement

ಮನೆಗಳ ಸ್ಥಳಾಂತರಕ್ಕೆ ಶೀಘ್ರ ಚಾಲನೆ

04:10 PM Mar 12, 2020 | Suhan S |

ಬಾಗಲಕೋಟೆ: ಜಿಲ್ಲೆಯ ಬಾದಾಮಿ, ಪಟ್ಟದಕಲ್ಲ ಹಾಗೂ ಐಹೊಳೆ ಪ್ರವಾಸಿ ತಾಣಗಳ ಸ್ಮಾರಕಗಳಿಗೆ ಹತ್ತಿರವಿರುವ ಮನೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಶೀಘ್ರ ಚಾಲನೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್‌ ಡಾ |ಕೆ. ರಾಜೇಂದ್ರ ಹೇಳಿದರು.

Advertisement

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡ ವಿವಿಧ ಐತಿಹಾಸಿಕ ತಾಣಗಳಲ್ಲಿನ ಸ್ಮಾರಕಗಳ ಸಂರಕ್ಷಣೆ ಕುರಿತ ಪುನರ್‌ವಸತಿ ಮತ್ತು ಪುನರ್‌ನಿರ್ಮಾಣ ಯೋಜನೆಯ ಏಕಗವಾಕ್ಷಿ ಸಮಿತಿ ಸಭೆಯಲ್ಲಿ ಮಾತನಾಡಿದರು.

ಬಾದಾಮಿ ಗುಹೆಯ ಹತ್ತಿರವಿರುವ 73 ಮತ್ತು 23 ಮನೆಗಳ ಕಟ್ಟಡಗಳ ಮೌಲ್ಯಮಾಪನ ಕಾರ್ಯ 15 ದಿನದೊಳಗಾಗಿ ಪೂರ್ಣಗೊಳಿಸುವಂತೆ ಬಾದಾಮಿ ಪುರಸಭೆ ಮುಖ್ಯಾಧಿಕಾರಿ ಗಿರೀಶ ಅವರಿಗೆ ಸೂಚಿಸಿದರು. ಈಗಾಗಲೇ 40 ಮನೆಗಳಸ್ಥಳಾಂತರಕ್ಕೆ ಒಪ್ಪಿಗೆ ನೀಡಿರುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದರು.

ಸಕ್ಕರೆ ಕಾರ್ಖಾನೆ ಹತ್ತಿರ ಜಮೀನು ಖರೀದಿಸಲು ನಿರ್ಧರಿಸಲಾಗಿದ್ದು, ಉಪವಿಭಾಗಾಧಿಕಾರಿಗಳು ಹಾಗೂ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಲು ಸೂಚಿಸಿದರು.

ಬಾದಾಮಿಯಲ್ಲಿ ಪಾರ್ಕಿಂಗ್‌ ಪ್ಲಾಜಾ ನಿರ್ಮಾಣಕ್ಕೆ ಬಾದಾಮಿ ಎಪಿಎಂಸಿ ವ್ಯಾಪ್ತಿಯ 17 ಎಕರೆ ಜಮೀನು ಲಭ್ಯವಿದ್ದು, ಈ ಬಗ್ಗೆ ಪ್ರವಾಸೋದ್ಯಮ ಸಚಿವರಿಗೆ ತಕ್ಷಣವೇ ಪ್ರಸ್ತಾವನೆ ಸಲ್ಲಿಸಲು ಹಾಗೂ ಬಾದಾಮಿಗೆ ಮೂಲಭೂತ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ 5 ಕೋಟಿ ರೂ.ಗಳ ಅನುದಾನ ನೀಡಿದ್ದು, ತಕ್ಷಣವೇ ಡಿಪಿಆರ್‌ ತಯಾರಿಸುವಂತೆ ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕರಿಗೆ ತಿಳಿಸಿದರು.

Advertisement

ಪಟ್ಟದಕಲ್ಲು ಗ್ರಾಮದಲ್ಲಿರುವ ಐತಿಹಾಸಿಕ ಸ್ಮಾರಕಗಳ ಸುತ್ತಮುತ್ತಲಿನ 920 ಮನೆಗಳ ಕಟ್ಟಡಗಳನ್ನು ಸ್ಥಳಾಂತರಿಸಲು ಬಾಚಿನಗುಡ್ಡದಿಂದ ಶಂಕರಲಿಂಗ ಗುಡಿಯ ಹತ್ತಿರ ಹೋಗುವ ಮಾರ್ಗದಲ್ಲಿ ಒಟ್ಟು 115 ಎಕರೆ ಜಮೀನನ್ನು ಗುರುತಿಸಲಾಗಿದ್ದು,

ಸ್ಥಳಾಂತಗೊಳ್ಳುವ ಮನೆಗಳ ಮಾಲಿಕರು ಹಾಗೂ ಜಮೀನು ನೀಡುವ ಮಾಲೀಕರ ಸಮಾಲೋಚನಾ ಸಭೆ ಮಾ. 27ರಂದು ನಡೆಸಲು ತೀರ್ಮಾನಿಸಲಾಗಿದೆ. ಈಗಾಗಲೇ ಪಟ್ಟದಕಲ್ಲು ಗ್ರಾಮದಲ್ಲಿರುವ ಶಾಲೆ ಪುರಾತತ್ವ ಇಲಾಖೆಯನ್ನು ಸಂಪರ್ಕಿಸಿ ಮಾದರಿ ಶಾಲಾ ಕಟ್ಟಡ ನಿರ್ಮಿಸಲು ತಿಳಿಸಿದರು.

ಐಹೊಳೆ ಪ್ರವಾಸಿ ತಾಣಗಳಲ್ಲಿರುವ ಮನೆಗಳನ್ನು ಸ್ಥಳಾಂತರಿಸಲು ಐಹೊಳೆಯಿಂದ ಸೂಳೇಭಾವಿಗೆ ಕಡೆ ಹೋಗುವ ಮದ್ಯೆ 137 ಎಕರೆ ಜಮೀನನ್ನು ಗುರುತಿಸಿ ಖರೀದಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅನುಮೋದನೆ ಹಾಗೂ ಅನುದಾನ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದರು.

ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ತರಬೇತಿ ಐಎಎಸ್‌ ಅಧಿಕಾರಿ ಗರಿಮಾ ಪನ್ವಾರ, ಉಪ ವಿಭಾಗಾಧಿಕಾರಿ ಎಂ. ಗಂಗಪ್ಪ, ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕಿ ಮೆಹಬೂಬಿ, ಪುರಾತತ್ವ ಇಲಾಖೆಯ ಅ ಧೀಕ್ಷಕ ಅನಿಲಕುಮಾರ, ಪ್ರವಾಸೋದ್ಯಮ ಸಮಾಲೋಚಕ ಅನಿಲಕುಮಾರ, ಬಾದಾಮಿ ತಹಶೀಲ್ದಾರ ಇಂಗಳೆ, ಹುನಗುಂದ ತಹಶೀಲ್ದಾರ್‌ ಬಸವರಾಜ ನಾಗರಾಳ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next