Advertisement

ಧಾರ್ಮಿಕ ಸ್ಥಳ, ಶಾಲೆಗಳು ತೆರೆಯುವ ಸಾಧ್ಯತೆ?

12:58 AM Nov 09, 2020 | mahesh |

ಮುಂಬಯಿ: ರಾಜ್ಯದಲ್ಲಿ ದೀಪಾವಳಿ ಬಳಿಕ ಶಾಲೆ, ಧಾರ್ಮಿಕ ಪೂಜಾ ಸ್ಥಳಗಳನ್ನು ಪುನಃ ತೆರೆಯುವ ಬಗ್ಗೆ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರು ರವಿವಾರ ಸುಳಿವು ನೀಡಿದ್ದು, ಜನಸಂದ ಣಿಯನ್ನು ತಪ್ಪಿಸಲು ಮತ್ತು ದೈಹಿಕ ಅಂತರವನ್ನು ಖಚಿತಪಡಿಸಿಕೊಳ್ಳಲು ಪ್ರಮಾಣಿತ ಕಾರ್ಯಾಚರಣ ವಿಧಾನವನ್ನು (ಎಸ್‌ಒಪಿ) ದೀಪಾವಳಿಯ ಅನಂತರ ರಚಿಸಲಾಗುವುದು ಎಂದು ತಿಳಿಸಿದ್ದಾರೆ.

Advertisement

ವೆಬ್‌ಕಾಸ್ಟ್‌ ಮೂಲಕ ಮಾತನಾಡಿದ ಸಿಎಂ ಅವರು, ಧಾರ್ಮಿಕ ಪೂಜಾ ಸ್ಥಳಗಳನ್ನು ಪುನಃ ತೆರೆಯುವ ವಿಚಾರದಲ್ಲಿ ನಿಧಾನ ಧೋರಣೆಯನ್ನು ಅನುಸರಿಸುತ್ತಿರುವುದಕ್ಕಾಗಿ ಹಲವರಿಂದ ಟೀಕೆಗಳನ್ನು ಎದುರಿಸುತ್ತಿದ್ದೇನೆ ಎಂದು ತಿಳಿಸಿದರು. ನಾವು ಪ್ರಾರ್ಥನೆ ಸಲ್ಲಿಸುವಲ್ಲಿ ತುಂಬಾ ತೊಡಗಿಸಿಕೊಂಡಿದ್ದೇವೆ. ಇದು ಕೋವಿಡ್‌-19 ಸುರಕ್ಷತ ಶಿಷ್ಟಾಚಾರಗಳ ನಿರ್ಲಕ್ಷ್ಯಕ್ಕೆ ಕಾರಣವಾಗಬಹುದು. ಒಂದು ವೇಳೆ ಕೊರೊನಾ ಪಾಸಿಟಿವ್‌ ವ್ಯಕ್ತಿಯು ಪೂಜಾ ಸ್ಥಳಗಳಿಗೆ ಭೇಟಿ ನೀಡಿದರೆ, ಅಲ್ಲಿಗೆ ತೆರಳಿದ ನಮ್ಮ ಕುಟುಂಬಗಳ ಹಿರಿಯರಿಗೆ ಸೋಂಕು ಹರಡಿದರೆ ಯಾರು ಹೊಣೆ ಎಂದು ಪ್ರಶ್ನಿಸಿದ್ದಾರೆ.

ನಾಗರಿಕರ ಉತ್ತಮ ಆರೋಗ್ಯ ಮತ್ತು ಸುರಕ್ಷತೆಯನ್ನು ಖಾತ್ರಿಪಡಿಸಿದರೆ ನಾನು ಧಾರ್ಮಿಕ ಪೂಜಾ ಸ್ಥಳಗಳನ್ನು ತೆರೆಯಲು ಅನುಮತಿ ನೀಡಲು ಸಿದ್ಧನಾಗಿದ್ದೇನೆ. ಪೂಜಾ ಸ್ಥಳಗಳಲ್ಲಿ ಜನಸಂದಣಿಯನ್ನು ತಪ್ಪಿಸುವುದು ಮತ್ತು ದೈಹಿಕ ಅಂತರವನ್ನು ಖಚಿತಪಡಿಸಿಕೊಳ್ಳುವುದು ಹೇಗೆ ಎಂಬ ಬಗ್ಗೆ ದೀಪಾವಳಿಯ ಅನಂತರ ಪ್ರಮಾಣಿತ ಕಾರ್ಯಾಚರಣೆ ವಿಧಾನವನ್ನು ರಚಿಸಲಾಗುವುದು ಎಂದರು. ಪೂಜಾ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಾಗಲಿದೆ ಎಂದು ಸಿಎಂ ಹೇಳಿದ್ದಾರೆ.

ಇದೇ ವೇಳೆ, ಸಾರ್ವಜನಿಕ ಸ್ಥಳಗಳಲ್ಲಿ ಪಟಾಕಿ ಸಿಡಿಸದಿರುವಂತೆಯೂ ಅವರು ಜನರಿಗೆ ಮನವಿ ಮಾಡಿದ್ದಾರೆ. ನಾನು ಪಟಾಕಿ ನಿಷೇಧವನ್ನು ಜಾರಿಗೆ ತರಲು ಬಯಸುವುದಿಲ್ಲ. ನಾವು ಪರಸ್ಪರ ನಂಬಿಕೆ ಮತ್ತು ವಿಶ್ವಾಸವನ್ನು ಹೊಂದೋಣ ಎಂದು ಠಾಕ್ರೆ ನುಡಿದರು. ದಿಲ್ಲಿಯಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿವೆ. ಮಾಲಿನ್ಯವೇ ಇದಕ್ಕೆ ಕಾರಣ ಎಂದು ಹೇಳಲಾಗಿದೆ. ನಾವು ಸ್ವಯಂ ನಿಯಂತ್ರಣವನ್ನು ಹೊಂದಿದ್ದೇವೆ. ಆದ್ದರಿಂದ ಮಾಲಿನ್ಯಕ್ಕೆ ಕಾರಣ ವಾಗುವ ಪಟಾಕಿಗಳನ್ನು ಸಿಡಿಸುವುದನ್ನು ತಡೆಯೋಣ. ಸಾಂಕ್ರಾಮಿಕ ರೋಗದ ವಿರುದ್ಧದ ಒಂಬತ್ತು ತಿಂಗಳ ಕಠಿನ ಪರಿಶ್ರಮವು ದೀಪಾವಳಿ ಆಚರಣೆಯ ನಾಲ್ಕು ದಿನಗಳಲ್ಲಿ ವ್ಯರ್ಥವಾಗದಂತೆ ನೋಡಿಕೊಳ್ಳೋಣ ಎಂದು ಕರೆಯನ್ನಿತ್ತರು.

Advertisement

Udayavani is now on Telegram. Click here to join our channel and stay updated with the latest news.

Next