Advertisement

Religious tourist destination ; ಮುರ್ಡೇಶ್ವರದಲ್ಲಿ ಅಗತ್ಯ ಮೂಲ ಸೌಕರ್ಯ ಮರೀಚಿಕೆ

07:22 PM Aug 14, 2023 | Team Udayavani |

ಭಟ್ಕಳ: ಪುರಾಣ ಪ್ರಸಿದ್ಧ ಮುರ್ಡೇಶ್ವರ ಧಾರ್ಮಿಕ ಕೇಂದ್ರವಾಗಿ ಬೆಳೆದಿದ್ದಲ್ಲದೇ ವಿಶ್ವವಿಖ್ಯಾತ ಪ್ರವಾಸಿ ತಾಣವಾಗಿಯೂ ಬೆಳೆದಿದೆಯಾದರೂ ಅಗತ್ಯ ಮೂಲ ಸೌಕರ್ಯ ಮಾತ್ರ ಮರೀಚಿಕೆಯಾಗಿದೆ ಎಂದು ಮುರ್ಡೇಶ್ವರ ನಾಗರೀಕ ಸೇವಾ ಟ್ರಸ್ಟ್ ಅಧ್ಯಕ್ಷ ಎಸ್. ಎಸ್. ಕಾಮತ್ ಬೇಸರ ವ್ಯಕ್ತಪಡಿಸಿದ್ದಾರೆ.

Advertisement

ಮುರ್ಡೇಶ್ವರವು ಅನೇಕ ವರ್ಷಗಳಿಂದ ಪ್ರವಾಸಿ ಕೇಂದ್ರವಾಗಿ, ಪುರಾಣ ಪ್ರಸಿದ್ಧ ಧಾರ್ಮಿಕ ಕೇಂದ್ರವಾಗಿ ದಿನಾಲೂ ಸಾವಿರಾರು ಸಂಖ್ಯೆಯಲ್ಲಿ ದೇಶ ವಿದೇಶಿಗರು ಆಗಮಿಸುತ್ತಿದ್ದರೂ ಕೂಡಾ ಮೂರ್ಡೇಶ್ವದ ಮೂಲ ಸೌಕರ್ಯ ಅಭಿವೃದ್ಧಿಗೆ ಯಾವ ಇಲಾಖೆಯೂ ಕೂಡಾ ಮನಸ್ಸು ಮಾಡಿಲ್ಲ ಎಂದು ಹೇಳಿದ ಅವರು ಮೂಲಭೂತ ಸೌಕರ್ಯಗಳ ಕೊರತೆ ಅನುಭವಿಸುತ್ತಿರುವ ಮುರ್ಡೇಶ್ವರಕ್ಕೆ ಬರುವ ಭಕ್ತರು, ಪ್ರವಾಸಿಗರು ಸರಕಾರದ ಕ್ರಮವನ್ನು ದೂಷಣೆ ಮಾಡುವಂತಾಗಿದೆ.

ಮುರ್ಡೇಶ್ವರದ ಮೂಲಭೂತ ಸೌಕರ್ಯಗಳನ್ನು ವೃದ್ಧಿಸಲು ಕಳೆದ 5-6 ವರ್ಷಗಳಿಂದಲೂ ಪ್ರವಾಸೋದ್ಯಮ ಇಲಾಖೆ, ಕಂದಾಯ ಇಲಾಖೆ, ಬಂದರು ಇಲಾಖೆ, ಪೋಲೀಸ್ ಇಲಾಖೆಗಳಿಗೆ ಮನವಿ ಸಲ್ಲಿಸುತ್ತಾ ಬಂದಿದ್ದರೂ ಕೂಡಾ ಯಾವುದೇ ಇಲಾಖೆ ಗಮನ ಹರಿಸದೇ ಇರುವುದು ಸರಕಾರದ ನಿರ್ಲಕ್ಷಕ್ಕೆ ಉದಾಹರಣೆಯಾಗಿದೆ. ಸ್ಥಳೀಯವಾಗಿ ದೊರೆಯುವ ಅಗತ್ಯ ಸಂಪನ್ಮೂಲಗಳನ್ನು ಬಳಸಿಕೊಂಡು ಅಭಿವೃದ್ಧಿ ಪಡಿಸಬಹುದಾಗಿದ್ದರೂ ಕೂಡಾ ಸ್ಥಳೀಯ ಅಧಿಕಾರಿಗಳೂ ನಿರಾಸಕ್ತಿ ತೋರುತ್ತಿರುವುದು ಪ್ರವಾಸಿ ತಾಣದಲ್ಲಿ ಪ್ರವಾಸಿಗರು ಇಲಾಖೆಗಳನ್ನೇ ದೂರುವುದಕ್ಕೆ ಕಾರಣವಾಗಿದೆ.

ಮುರ್ಡೇಶ್ವರದಲ್ಲಿ ಸ್ಥಳೀಯಾಡಳಿತವಾಗಲೀ, ಜಿಲ್ಲಾಡಳಿತವಾಗಲೀ ಮೂಲ ಭೂತ ಸೌಕರ್ಯಗಳಾದ ಒಳಚರಂಡಿ ವ್ಯವಸ್ಥೆ, ಯೋಗ್ಯ ಚರಂಡಿ ವ್ಯವಸ್ಥೆ, ಸೂಕ್ತ ರಸ್ತೆ ವ್ಯವಸ್ಥೆ, ದಾರಿ ದೀಪದ ವ್ಯವಸ್ಥೆ, ವಾಹನ ಪಾರ್ಕಿಂಗ್‌ಗೆ ಜಾಗಾದ ವ್ಯವಸ್ಥೆ, ಪ್ರವಾಸಿಗರಿಗೆ ನೆಮ್ಮದಿಯಿಂದ ಬಂದು ಹೋಗುವುದಕ್ಕೆ ಭದ್ರತಾ ವ್ಯವಸ್ಥೆಯನ್ನು ಕಲ್ಪಸಬೇಕಾಗಿದ್ದರೂ ಸಹ ತಮಗೆ ಸಂಬಂಧವೇ ಇಲ್ಲದಂತೆ ಇಲಾಖೆಗಳು ಕಾರ್ಯ ನಿರ್ವಹಿಸುತ್ತಿರುವುದು ಮಾತ್ರ ವಿಪರ್ಯಾಸವಾಗಿದೆ. ಇದು ಆಡಳಿತ ಯಂತ್ರ ಸ್ಪಷ್ಟವಾಗಿ ಮುರ್ಡೇಶ್ವರವನ್ನು ನಿರ್ಲಕ್ಷ ಮಾಡಿರುವುದು ಕಂಡು ಬರುತ್ತದೆ.

ಮುರ್ಡೇಶ್ವರ ಅಭಿವೃದ್ಧಿಯ ಅಂಗವಾಗಿ 2016 ರಲ್ಲಿ ರಸ್ತೆ ಕಾಮಗಾರಿ ಆರಂಭವಾಯಿತಾದರೂ ಕೂಡಾ ಇನ್ನೂ ಕೂಡಾ ರಸ್ತೆ ಕಾಮಗಾರಿ ಪೂರ್ಣಗೊಂಡಿಲ್ಲ, ಸರಿಯಾದ ಚರಂಡಿ ವ್ಯವಸ್ಥೆ, ದೀಪ ವ್ಯವಸ್ಥೆಯನ್ನೇ ಮಾಡಿಲ್ಲ, ರಾಷ್ಟ್ರೀಯ ಹೆದ್ದಾರಿಯಲ್ಲಿನ ಮುಖ್ಯ ದ್ವಾರದಿಂದ ದೇವಸ್ಥಾನದ ತನಕದ ರಸ್ತೆಯನ್ನು ಮೇಲ್ದರ್ಜೆಗೇರಿಸುವುದು, ಚರಂಡಿ, ಬೀದಿ ದೀಪ ಅಳವಡಿಕೆಯನ್ನು ಕೂಡಾ ಮಾಡದೇ ಅಪೂರ್ಣಗೊಳಿಸಲಾಗಿದ್ದು ಅಧಿಕಾರಿಗಳು ಜಾಣ ಕುರುಡು ಪ್ರದರ್ಶಿಸುತ್ತಿರುವುದು ಮಾತ್ರ ನಾಗರೀಕರಿಗೆ ತೀವ್ರ ಬೇಸರ ತರಿಸಿದೆ ಎಂದೂ ಅವರು ಹೇಳಿದ್ದಾರೆ.

Advertisement

ಮುರ್ಡೇಶ್ವರಕ್ಕೆ ಪ್ರತಿ ತಿಂಗಳೂ ಲಕ್ಷಾಂತರ ಜನರು ಭೇಟಿ ನೀಡಿದರೂ ಕನಿಷ್ಟ ಸ್ವಚ್ಚತೆಗೆ ಯಾವುದೇ ಆದ್ಯತೆಯನ್ನು ಸ್ಥಳೀಯಾಡಳಿತ ನೀಡುತ್ತಿಲ್ಲ. ಅತ್ಯಂತ ಸುಂದರ ಕಡಲ ತೀರವೂ ಕೂಡಾ ತ್ಯಾಜ್ಯಗಳ ಗೂಡಾಗಿದ್ದು ನಿರ್ವಹಣೆಯಿಲ್ಲದೇ ಬೇರೆ ಬೇರೆ ರಾಜ್ಯಗಳಿಂದ, ದೇಶಗಳಿಂದ ಬರುವ ಜನತೆ ನೋಡಿ ಅಣುಕಿಸುವಂತಾಗಿದೆ.

ಶ್ರೀ ಕ್ಷೇತ್ರಕ್ಕೆ ಬರುವ ಪ್ರವಾಸಿಗರು, ದಿನದ 24ಗಂಟೆಯು, ಸಂಚಾರಿ ನಿಯಮಗಳನ್ನು ಮೀರಿ, ಬೇಕಾ ಬಿಟ್ಟಿಯಾಗಿ, ರಸ್ತೆಯುದ್ದಕ್ಕೂ, ತಮ್ಮ ವಾಹನಗಳನ್ನು ನಿಲ್ಲಿಸುವುದು ನಿಲ್ಲಿಸುವುದು ಅನಿವಾರ್ಯವಾಗಿದೆ. ಸೂಕ್ತ ಪಾರ್ಕಿಂಗ್ ಜಾಗಾ ವದಗಿಸಲು ಸ್ಥಳೀಯಾಡಳಿತ ವಿಫಲವಾಗಿರುವುದೇ ಇದಕ್ಕೆ ಕಾರಣವಾಗಿದ್ದು ಇನ್ನಾದರೂ ಸ್ಥಳೀಯಾಡಳಿತ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಬೇಕಾಗಿದೆ. ಕೆಲವೊಮ್ಮೆ ಮುಖ್ಯ ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸುವುದರಿಂದ ಬಸ್ಸುಗಳು ಬರುವುದಕ್ಕೆ ಮತ್ತು ಹೋಗುವುದಕ್ಕೆ ಕೂಡಾ ತೊಂದರೆಯಾಗುತ್ತಿದ್ದು ಪೊಲೀಸ್ ಇಲಾಖೆ ಪಾರ್ಕಿಂಗ್ ವ್ಯವಸ್ಥೆಯನ್ನು ಸುಗಮಗೊಳಿಸುತ್ತ ಗಮನ ಹರಿಸಬೇಕಾಗಿದೆ. ಒಟ್ಟಾರೆ ಜಿಲ್ಲಾ ಉಸ್ತುವಾರಿ ಸಚಿವರು ಪ್ರವಾಸೊಧ್ಯಮ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಸೂಕ್ತ ಮೂಲಭೂತ ಸೌಕರ್ಯ ವೃದ್ಧಿಸಲು ಕ್ರಮ ಕೈಗೊಳ್ಳಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next