Advertisement

ಚೇತರಿಕೆಯತ್ತ ಧಾರ್ಮಿಕ ಪ್ರವಾಸೋದ್ಯಮ

12:35 AM Jun 19, 2020 | Sriram |

ವಿಶೇಷ ವರದಿ- ಮಹಾನಗರ: ಲಾಕ್‌ಡೌನ್‌ ಸಡಿಲಿಕೆಯ ಬಳಿಕ ದ.ಕ. ಜಿಲ್ಲೆ ಸಹಿತ ಕರಾವಳಿ ಭಾಗದಲ್ಲಿ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದ ಧಾರ್ಮಿಕ ಕೇಂದ್ರಗಳು ತೆರೆದುಕೊಂಡಿವೆ. ದೇವಸ್ಥಾನಗಳಿಗೆ ಭೇಟಿ ನೀಡುವ ಭಕ್ತರ ಸಂಖ್ಯೆ ನಿಧಾನವಾಗಿ ಹೆಚ್ಚುತ್ತಿರುವುದು ಜಿಲ್ಲೆಯ ಧಾರ್ಮಿಕ ಪ್ರವಾಸೋದ್ಯಮದ ಮಟ್ಟಿಗೆ ಆಶಾವಾದ ಮೂಡಿಸಿದೆ.

Advertisement

ದ.ಕ., ಉಡುಪಿ ಜಿಲ್ಲೆಗಳು ಸಹಿತ ಕರಾವಳಿ ಭಾಗದ ಪ್ರವಾಸೋದ್ಯಮದಲ್ಲಿ ಧಾರ್ಮಿಕ ಕೇಂದ್ರಗಳು, ಧಾರ್ಮಿಕ ಶ್ರದ್ಧಾ ಕೇಂದ್ರಗಳದು ಹೆಚ್ಚಿನ ಪಾಲು. ಇದು ಹೊರತುಪಡಿಸಿದರೆ, ಬೀಚ್‌ ಟೂರಿಸಂ ಹೆಸರಿನಲ್ಲಿ ಈ ಭಾಗಕ್ಕೆ ಹೊರ ಜಿಲ್ಲೆ, ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಇದೀಗ ಲಾಕ್‌ಡೌನ್‌ ಸಡಿಲಿಕೆಗೊಂಡಿದ್ದರೂ ಮಳೆಗಾಲದ ಹಿನ್ನೆಲೆಯಲ್ಲಿ ಬೀಚ್‌ ಪ್ರವಾಸೋದ್ಯಮ ಬಹುತೇಕ ಸ್ತಬ್ಧಗೊಂಡಿದೆ.

ಏತನ್ಮಧ್ಯೆ, ಕೋವಿಡ್-19 ಪರಿಸ್ಥಿತಿಯ ನಡುವೆಯೂ ಧಾರ್ಮಿಕ ಪ್ರವಾಸೋದ್ಯಮ ರಂಗಕ್ಕೆ ಚೇತರಿಕೆ ನೀಡುವ ಅವಕಾಶವಾಗಿ ಗೋಚರಿಸಿದೆ. ಜೂನ್‌ 1ರಿಂದ ಧಾರ್ಮಿಕ ಕ್ಷೇತ್ರಗಳಿಗೆ ಭಕ್ತರು ಭೇಟಿ ನೀಡಲಾರಂಭಿಸಿದ್ದು, ಮುಂದಿನ ದಿನಗಳಲ್ಲಿ ಇದು ಹೆಚ್ಚಳವಾಗುವ ನಿರೀಕ್ಷೆ ಇದೆ.

ಪ್ರವಾಸೋದ್ಯಮ ಇಲಾಖೆಯ ಅಂಕಿ- ಅಂಶದಂತೆ ಜಿಲ್ಲೆಯಲ್ಲಿ ಯಾತ್ರಿಗಳ ಭೇಟಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಮೊದಲ ಸ್ಥಾನದಲ್ಲಿದ್ದು, 2019ರಲ್ಲಿ ಒಟ್ಟು 72,87,803 ಮಂದಿ ಕ್ಷೇತ್ರಕ್ಕೆ ಯಾತ್ರಾರ್ಥಿಗಳಾಗಿ ಆಗಮಿಸಿದ್ದರು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ 53,16, 704 ಮಂದಿ ಭೇಟಿ ನೀಡಿದ್ದರು. ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಾಲಯಕ್ಕೆ 35,50,988 ಭಕ್ತರು ಆಗಮಿಸಿದ್ದರು.

2020ರ ಜನವರಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ 7,50,000 ಹಾಗೂ ಫೆಬ್ರವರಿಯಲ್ಲಿ 6,55,138, ಶ್ರೀ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಜನವರಿಯಲ್ಲಿ 5,55,430, ಫೆಬ್ರವರಿಯಲ್ಲಿ 6,10,000 ಭಕ್ತರು ಭೇಟಿ ನೀಡಿದ್ದರು.

Advertisement

ಸಾಮಾನ್ಯವಾಗಿ ಜನವರಿಯಿಂದ ಮೇ ವರೆಗೆ ಪ್ರವಾಸಿಗರು ಸಂಖ್ಯೆ ಹೆಚ್ಚಿದ್ದು ಜೂನ್‌ನಿಂದ ಆಗಸ್ಟ್‌ವರೆಗೆ ಮಂದಗತಿಯಲ್ಲಿರುತ್ತದೆ. ಸೆಪ್ಟಂಬರ್‌ ಬಳಿಕ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವ ಭಕ್ತರ ಸಂಖ್ಯೆಯಲ್ಲಿ ಏರಿಕೆಯಾಗಿ ಇದು ಮೇ ತಿಂಗಳ ವರೆಗೆ ಮುಂದುವರಿಯುತ್ತದೆ.

ಜಿಲೆಯಲ್ಲಿ ಕದ್ರಿ ಶ್ರೀ ಮಂಜುನಾಥ ಕ್ಷೇತ್ರ, ಶ್ರೀ ಮಂಗಳಾದೇವಿ ಕ್ಷೇತ್ರ, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ, ಶ್ರೀಕ್ಷೇತ್ರ ಶರವು, ಮೂಡುಬಿದಿರೆ ಸಾವಿರಕಂಬಗಳ ಬಸದಿ ಕೂಡ ಪ್ರಮುಖ ಧಾರ್ಮಿಕ ಕ್ಷೇತ್ರಗಳಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ.

 ಧಾರ್ಮಿಕ ಪ್ರವಾಸೋದ್ಯಮಕ್ಕೆ ಅವಕಾಶ
ಕೋವಿಡ್-19ದಿಂದಾಗಿ ದ.ಕ. ಜಿಲ್ಲೆಯಲ್ಲಿ ಈ ಬಾರಿ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೆಚ್ಚಿನ ಹಿನ್ನಡೆಯಾಗಿದೆ. ಜಿಲ್ಲೆಯ ಪ್ರವಾಸೋದ್ಯಮದಲ್ಲಿ ಶೇ.70ರಿಂದ 80 ಭಾಗ ಧಾರ್ಮಿಕ ಪ್ರವಾಸವನ್ನು ಒಳಗೊಂಡಿದೆ. ಪ್ರಸ್ತುತ ದೇವಾಲಯಗಳು ತೆರೆದಿರವುದರಿಂದ‌ ಧಾರ್ಮಿಕ ಪ್ರವಾಸೋದ್ಯಮಕ್ಕೆ ಅವಕಾಶವಾಗಿದೆ.
– ಉದಯ ಕುಮಾರ್‌ ಶೆಟ್ಟಿ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರು

Advertisement

Udayavani is now on Telegram. Click here to join our channel and stay updated with the latest news.

Next