ಮೈಸೂರು: ಕೆ.ಎಸ್.ಭಗವಾನ್ ಎಂದಿನಂತೆ ಸಮ್ಮೇಳನಕ್ಕೂ ವಿವಾದದ ಮಾತುಗಳನ್ನು ಹೊತ್ತುತಂದಿದ್ದರು. ವಿಶೇಷವಾಗಿ ಉಡುಪಿಯಲ್ಲಿ ನಡೆಯುತ್ತಿರುವ ಧರ್ಮ ಸಂಸದ್ ಮೇಲೆ ಅವರ ಮಾತಿನ ದಾಳಿ ಇತ್ತು.
83ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನವಾದ ಶನಿವಾರ ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ನಡೆಯುತ್ತಿರುವ ಸಮಾನಾಂತರ ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
“ಉಡುಪಿಯಲ್ಲಿ ರಾಮಮಂದಿರ ನಿರ್ಮಾಣದ ವಿಚಾರವಾಗಿ ಹಿಂದೂಗಳು ಸಮಾವೇಶ ನಡೆಸುತ್ತಿದ್ದಾರೆ. ಕನ್ನಡ ಸಮ್ಮೇಳನ ನಡೆಯುವ ಸಂದರ್ಭದಲ್ಲೇ ಆ ಸಮಾವೇಶ ಕೈಗೊಂಡಿರುವುದರ ಉದ್ದೇಶ, ಕನ್ನಡ ಸಮ್ಮೇಳನದ ಮಹತ್ವ ಕುಗ್ಗಿಸಲು ಕೆಲವು ಜನರು ಸೇರಿದ್ದಾರೆ. ಜನರು ಇದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ಕಿಡಿಕಾರಿದರು.
“ನಮ್ಮಲ್ಲಿ ಮೇಲು-ಕೀಳೆಂಬ ಅಸಮಾನತೆ ತುಂಬಿ ತುಳುಕುತ್ತಿದೆ. ನೀವು ಯಾರಾದರೂ ಈ ಕುರಿತು ಹೋರಾಟ ಮಾಡಿದ್ದೀರಾ?’ ಎಂದು ಪ್ರಶ್ನಿಸಿದ ಅವರು, “ನಾವು ಹೋರಾಟ ಮಾಡಿದರೆ, ಪಟ್ಟಭದ್ರ ಹಿತಾಸಕ್ತಿಗಳು ನಮ್ಮ ಮೇಲೆ ದಾಳಿ ಮಾಡುತ್ತವೆ. ಎಲ್ಲ ಜನಾಂಗದಲ್ಲೂ ಮತಾಂಧತೆ ತುಂಬಿ ತುಳುಕುತ್ತಿದೆ. ಭವಿಷ್ಯದ ದೃಷ್ಟಿಯಿಂದ ಈಗಿರುವ ಮೀಸಲಾತಿ ಸಮರ್ಪಕವಾಗಿಲ್ಲ.
ಶೇ.50ರಷ್ಟು ಮೀಸಲಾತಿಯಂತೆ, ಇನ್ನುಳಿದದ್ದು ಮೆರಿಟ್ ಎಂಬುದು ಶುದ್ಧ ಅಸಂಬದ್ಧ. ಎಲ್ಲ ಜನ, ಜನಾಂಗದ ಅನುಗುಣವಾಗಿ ಮೀಸಲಾತಿ ನಿರ್ಧಾರವಾಗಬೇಕಿದೆ’ ಎಂದರು. “ನಮ್ಮ ದೇಶದಲ್ಲಿ ಡಾ.ಬಿ.ಆರ್. ಅಂಬೇಡ್ಕರ್‌ಗಿಂತ ಬುದ್ಧಿವಂತರು ಬೇರಾರೂ ಇಲ್ಲ. ವಿಶ್ವಸಂಸ್ಥೆ ಅವರ ಬುದ್ಧಿಶಕ್ತಿಯನ್ನು ಗುರುತಿಸಿ, ಇಂಟಲೆಕುcವಲ್ ಡೇ ಆಚರಣೆ ಘೋಷಿಸಿತು. ಆದರೆ, ಇಲ್ಲಿನವರಿಗೆ ಅಂಬೇಡ್ಕರ್ ಅವರ ಜಾತಿ ಕಾಣಿಸಿತೇ ವಿನಃ ಬುದ್ಧಿವಂತಿಕೆ ಕಾಣಲಿಲ್ಲ’ ಎಂದರು.
“ಮನುಸ್ಮತಿಯಲ್ಲಿ ಶೂದ್ರರು ಅಂದರೆ ವೇಶ್ಯೆಗೆ ಹುಟ್ಟಿದವರು ಎಂದರ್ಥವಿದೆ. ಎಲ್ಲರೂ ಜನಿವಾರ ತೊಟ್ಟವರಿಗೆ ಸೇವೆ ಮಾಡಲು ಇರುವ ಗುಲಾಮರು ಎಂದು ಚತುವರ್ಣವನ್ನು ಮನುಸ್ಮತಿ ಹೇಳಿದೆ. ಅದನ್ನು ಓದಿ ತಿಳಿದುಕೊಳ್ಳುವ ಮನಸ್ಥಿತಿ ನಮ್ಮವರಿಗಿಲ್ಲ.
ತುಂಬು ಗರ್ಭಿಣಿಯನ್ನು ಕಾಡಿಗೆ ಅಟ್ಟಿದ, ಶೂದ್ರ ಶಂಬೂಕನ ತಲೆ ಕಡಿದ ರಾಮನನ್ನು ದೇವರೆಂದು ಪೂಜಿಸುವುದು ದೊಡ್ಡಸ್ಥಿಕೆಯೇ?’ ಎಂದು ಪ್ರಶ್ನಿಸಿದ ಅವರು, “ದೇವಸ್ಥಾನಕ್ಕೆ ಹೋದರೆ ಬುದ್ಧಿವಂತರಾಗಲ್ಲ. ದಡ್ಡರಾಗುತ್ತೀರಿ. ನಾನು ಕುವೆಂಪು ಅವರ ಪುಸ್ತಕ ಓದುವುದನ್ನು ಆರಂಭಿಸಿದ ಮೇಲೆ ದೇವಸ್ಥಾನಕ್ಕೆ ಹೋಗುವುದನ್ನೇ ಬಿಟ್ಟಿದ್ದೇನೆ’ ಎಂದು ಹೇಳಿದರು.
* ಸಂಪತ್ ತರೀಕೆರೆ