Advertisement

ಆಚಾರ-ವಿಚಾರಗಳಿಂದ ಮನೆ-ಮನಸ್ಸು ಪವಿತ್ರ

02:14 PM Mar 18, 2020 | Suhan S |

ಅಕ್ಕಿಆಲೂರು: ನಮ್ಮ ಮನೆ ಮನಸ್ಸುಗಳು ಪವಿತ್ರವಾಗುವಂತೆ ಆಚಾರ ವಿಚಾರಗಳು ರೂಢಿಗೊಳ್ಳುವ ಜ್ಞಾನ ದಾಸೋಹ ಈ ಶತಮಾನದ ಅಗತ್ಯವಾಗಿದ್ದು, ಚಿತ್ತವನ್ನು ತಿದ್ದಿಕೊಳ್ಳುವ ಕಾಲ ಇದಾಗಿದೆ ಎಂದು ಅಕ್ಕಿಆಲೂರು ಶ್ರೀ ಚನ್ನವೀರೇಶ್ವರ ವಿರಕ್ತಮಠದ ಪೀಠಾಧಿಪತಿ ಶಿವಬಸವ ಶ್ರೀಗಳು ಕರೆ ನೀಡಿದರು.

Advertisement

ಪಟ್ಟಣದ ಗುರುಪುತ್ರಪ್ಪ ಮುಚ್ಚಂಡಿ ಅವರ ನಿವಾಸದಲ್ಲಿ ಅಖೀಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಮನೆಯಲ್ಲಿ ಮಹಾಮನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬರೂ ಮನೋ ವೈಕಲ್ಯಗಳನ್ನು ನಿವಾರಿಸಿಕೊಂಡು, ಶುಚಿ-ರುಚಿಯಾದ ಜೀವನ ಸಿದ್ಧಾಂತಗಳನ್ನು ಉಳ್ಳವರಾಗಬೇಕು. ಶುದ್ಧ ನೀರು, ಅನ್ನ, ಒಳ್ಳೆಯ ಮಾತುಗಳೇ ಈಗಿನ ನಿಜವಾದ ರತ್ನಗಳು. ಜ್ಞಾನಕ್ಕೆ ಬೆಲೆ ಕೊಡುವ ಮೂಲಕ ಅಜ್ಞಾವನ್ನು ನಿವಾರಿಸುವ ಸಂಕಲ್ಪ ನಮ್ಮೆಲ್ಲರದಾಗಲಿ. ಮನೆಯಲ್ಲಿ ಮಹಾಮನೆ ಕಾರ್ಯಕ್ರಮಗಳು ಊರ ತುಂಬೆಲ್ಲ ನಡೆದು ಸದಾಚಾರಕ್ಕೆ ಸಾಕ್ಷಿಯಾಗಲಿ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷ ಪ್ರೊ| ಮಾರುತಿ ಶಿಡ್ಲಾಪೂರ, ಕಾಯಕ ಧರ್ಮ ನಮ್ಮ ನಡುವಳಿಕೆಯನ್ನು ಅವರಿಸಬೇಕು. ಮೋಸ ಮಸಲತ್ತುಗಳ ವಂಚಕ ಜೀವನಕ್ಕೆ ತಿಲಾಂಜಲಿ ಹಾಡಬೇಕು. ಸ್ವಚ್ಛ ಶುದ್ಧ ಜೀವನ ಸಿದ್ಧಾಂತಗಳು ಎಲ್ಲ ರೀತಿಯ ಆರೋಗ್ಯ ಸೂತ್ರಗಳಾಗಿವೆ. ನಮ್ಮ ಆಹಾರ ಅಚಾರಗಳು ಪ್ರಸಾದಮಯವಾಗಬೇಕು. ಸ್ವರ್ಗ ನರಕದ ನಿಜಾರ್ಥ ಅರಿತರೆ ಬದುಕು ಬಂಗಾರವಾಗುತ್ತದೆ ಎಂದರು.

ಶರಣ ಚಿಂತನೆಯ ಉಪನ್ಯಾಸ ನೀಡಿದ ಶಿಕ್ಷಕ ಶ್ರೀಕಾಂತ ಹುಲ್ಮನಿ, ಜೀವನ ವಿಕಾಸದ ಶಿಕ್ಷಣ ಈಗ ಬೇಕಾಗಿದ್ದು, ಅದು ವಚನಗಳಲ್ಲಿ ಶಕ್ತಿಯುತವಾಗಿ ಅಭಿವ್ಯಕ್ತವಾಗಿದೆ. ನಾಳೆಯ ಬದುಕಿನ ಹಿತಕ್ಕೆ ಈಗಲೇ ಚಿಂತನೆ ಬೇಕಾಗಿದ್ದು, ಒಳಿತನ್ನು ಸ್ವಾಗತಿಸುವ, ಅಲ್ಲದ್ದನ್ನು ತಿರಸ್ಕರಿಸುವ ಸ್ವಚ್ಛ ಚಿಂತನೆಗಳು ರೂಢಿಗತವಾಗಬೇಕು ಎಂದರು.

ಶರಣ ಸಾಹಿತ್ಯ ಪರಿಷತ್‌ ತಾಲೂಕು ಘಟಕದ ಅಧ್ಯಕ್ಷ ಎಸ್‌.ಸಿ. ಕಲ್ಲನಗೌಡರ, ನಿಕಟಪೂರ್ವ ಅಧ್ಯಕ್ಷ ವಿ.ಪಿ.ಗುರಪ್ಪನವರ, ಕಾರ್ಯದರ್ಶಿ ಎಸ್‌.ವಿ.ಹೊಸಮನಿ, ನಿವೃತ್ತ ಶಿಕ್ಷಕ ಗುರುಪುತ್ರಪ್ಪ ಮುಚ್ಚಂಡಿ, ಮುಖ್ಯೋಪಾಧ್ಯಾಯ ವಸಂತ ಚಿಕ್ಕಣ್ಣನವರ, ಶಿವಬಸಯ್ಯ ಚಿಲ್ಲೂರಮಠ, ಸೂರ್ಯನಾರಾಯಣ, ನೇಮಣ್ಣ ಸವಣೂರ, ಬಸಣ್ಣ ಮೋಟಗಿ, ಜಿ.ಎಂ.ಪಾಟೀಲ, ಪಿ.ಎಂ. ಮಡಿವಾಳರ, ಕಿರಣ ನಾಯಕ, ಶೋಭಾ ಪಾಟೀಲ, ಗಿರಿಜಮ್ಮ ವಿರುಪಣ್ಣನವರ, ಕಾಂಚನಾ ಮೋಟಗಿ, ಸಾಧನಾ ಕುಂಬಾರ, ಸುಜಾತಾ ಕೊಲ್ಲಾವರ, ಪ್ರಿಯಾ ಬೂದಿಹಾಳ, ಗೌರಮ್ಮ ಬೆಲ್ಲದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಶಿಲ್ಪಾ ಮುಚ್ಚಂಡಿ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next