Advertisement

 ಪ್ರಕೃತಿ ನಡುವಿನ ಸುಂದರ ಪಯಣ : ‘ಉಳವಿ ಬಸವಣ್ಣ’ನ ಧಾರ್ಮಿಕ ತಾಣ   

07:46 PM Apr 24, 2021 | Team Udayavani |

ಉತ್ತರ ಕನ್ನಡ ಜಿಲ್ಲೆಯಲ್ಲಿ ಧಾರ್ಮಿಕ ಶೃದ್ಧೆಯುಳ್ಳ ಭಕ್ತರಿಗೆ ಸಂತೃಪ್ತಕರ ಭಾವ ನೀಡಲು ಗುಡಿ ದೇಗುಲಗಳಿಗೇನೂ ಕಮ್ಮಿಯಿಲ್ಲ. ಅಂತಹ ಕ್ಷೇತ್ರಗಳಲ್ಲೊಂದಾದ ಉಳವಿ ಚೆನ್ನಬಸವೇಶ್ವರ ಕ್ಷೇತ್ರವು ರಾಜ್ಯದ ಪ್ರಮುಖ ಧಾಮಿಕ ತಾಣಗಳ ಪೈಕಿ ಒಂದಾಗಿದೆ.

Advertisement

ಕಾರವಾರ ಜಿಲ್ಲೆಯಲ್ಲಿ ನೆಲೆಸಿರುವ ಈ ಕ್ಷೇತ್ರವು ಧಾರವಾಡ ಹಾಗು ಬೆಳಗಾವಿ ಜಿಲ್ಲೆಗಳಿಂದ ಸುತ್ತುವರೆದಿದೆ. ಈ ಯಾತ್ರಾ ಸ್ಥಳವು ಹುಬ್ಬಳ್ಳಿ ಹಾಗು ಬೆಳಗಾವಿ ನಗರಗಳಿಂದ 140 ಕಿ.ಮೀ, ಧಾರವಾಡದಿಂದ 120 ಕಿ.ಮೀ, ಕಾರವಾರದಿಂದ 70 ಕಿ.ಮೀ, ದಾಂಡೇಲಿಯಿಂದ 50 ಕಿ.ಮೀ ಹಾಗು ಗೋವಾದಿಂದ 150 ಕಿ.ಮೀ ಗಳಷ್ಟು ದೂರದಲ್ಲಿದೆ. ಪ್ರತಿ ವರ್ಷ ಫೆಬ್ರುವರಿ ತಿಂಗಳಿನ ಸಮಯದಲ್ಲಿ ಅದ್ದೂರಿಯಾದ ವಾರ್ಷಿಕ ಜಾತ್ರೆ ಮಹೋತ್ಸವವನ್ನು ಈ ಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗುತ್ತದೆ. ಈ ಸಮಯದಲ್ಲಿ ರಾಜ್ಯದ ಅನೇಕ ಮೂಲೆ ಮೂಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು, ಪ್ರವಾಸಿಗರು ಇಲ್ಲಿಗೆ ಬರುತ್ತಾರೆ.

ಈ ಹಿಂದೆ ಕಲ್ಯಾಣದ ಬಿಜ್ಜಳ ದೊರೆ ಆಸ್ಥಾನದಲ್ಲಿ ಬಸವೇಶ್ವರನು(ಸಂತ ಹಾಗು ವಚನಕವಿ ಬಸವಣ್ಣನವರು) ಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದನು. ಗಣ್ಯ ಕುಲದಲ್ಲಿ ಜನ್ಮಿಸಿದ್ದರೂ ಬಸವೇಶ್ವರನು ಸಮಾನತೆಯಲ್ಲಿ ನಂಬಿಕೆಯಿಟ್ಟವನಾಗಿದ್ದರಿಂದ ಮೇಲು, ಕೀಳು ಎಂಬ ಭಾವನೆಗಳನ್ನು ವಿರೋಧಿಸಿದ್ದನು. ಇದನ್ನು ತಡೆಯಲಾಗದ ಆಸ್ಥಾನದ ಇತರೆ ಕೆಲವು ಕುಹುಕ ಅಧಿಕಾರಿಗಳು ದೊರೆಯ ಕಿವಿಯಲ್ಲಿ ಇಲ್ಲ ಸಲ್ಲದ ಮಾತುಗಳನ್ನು ತುಂಬಿ ದೊರೆಯು ಬಸವೇಶ್ವರನ ವಿರುದ್ಧ ತಿರುಗುವಂತೆ ಮಾಡಿದರು. ನಂತರ ತಾನು ಹಿಡಿದ ಮಾರ್ಗವನ್ನು ಬಿಡದೆ ಬಸವೇಶ್ವರನು ಮುಂದುವರೆದು ಪರಮ ಪೂಜ್ಯರಾಗಿ, ಸಂತರಾಗಿ ಕೊನೆಗೆ ಕೂಡಲ ಸಂಗಮದಲ್ಲಿ ಐಕ್ಯರಾದರು. ಈ ಸಂದರ್ಭದಲ್ಲೆ ಬಸವೇಶ್ವರರ ಸಾವಿರಾರು ಭಕ್ತರು ಅವರನ್ನು ಪರಿ ಪಾಲಿಸುತ್ತಿದ್ದರು. ಅವರಲ್ಲಿ ಮುಖ್ಯವಾಗಿದ್ದವರು ಬಸವೇಶ್ವರರ ಸೋದರಳಿಯನಾದ ಚೆನ್ನಬಸವ ಹಾಗು ಅವನ ತಾಯಿಯಾದ ಅಕ್ಕ ನಾಗಮ್ಮ. ಬಿಜ್ಜಳ ದೊರೆಯ ಸೈನಿಕರ ಕೈಯಿಂದ ತಪ್ಪಿಸಿಕೊಳ್ಳುತ್ತ, ಬಹುಮೂಲ್ಯವುಳ್ಳ ವಚನಗಳನ್ನು ರಕ್ಷಿಸಿಕೊಳ್ಳುತ್ತ ಚೆನ್ನಬಸವನು ಇತರೆ ಭಕ್ತವೃಂದದೊಂದಿಗೆ ಕಾಡು ಮೇಲುಗಳಲ್ಲಿ ಅಲೆಯುತ್ತ ಕೊನೆಗೆ ಉಳವಿ ಕ್ಷೇತ್ರಕ್ಕೆ ಬಂದು ನೆಲೆಸಿದನು. ಕಾಲಕ್ರಮೇಣ ವಚನಗಳನ್ನು ಜನಸಾಮಾನ್ಯರಿಗೆ ಭೋದಿಸುತ್ತ, ಸರಳ ಜೀವನಕ್ಕೆ ಮಾರ್ಗದರ್ಶನ ನೀಡುತ್ತ ಚೆನ್ನಬಸವೇಶ್ವರರು ಪೂಜ್ಯರಾದರು. ಪ್ರಸ್ತುತ, ಉಳವಿ ಕ್ಷೇತ್ರವು ಪ್ರಸಿದ್ಧವಾಗಿರುವುದು ಚೆನ್ನಬಸವೇಶ್ವರ ದೇವಾಲಯದಿಂದಾಗಿ.

ಈ ಕ್ಷೇತ್ರವು ತನ್ನಲ್ಲಿರುವ ಅದ್ಭುತ ಪ್ರಕೃತಿ ಸೌಂದರ್ಯದಿಂದಾಗಿಯೂ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿ ಹೊರಹೊಮ್ಮಿದೆ. ಪಶ್ಚಿಮ ಘಟ್ಟಗಳ ಸುಂದರ ವನ್ಯ ಸಂಪತ್ತಿನಲ್ಲಿ ನೆಲೆಸಿರುವ ಈ ತಾಣವು ಆಕರ್ಷಕ ಗುಹೆಗಳು ಹಾಗು ನೀರ್ಗೋಲುಗಳಿಂದ (stalactites) ಕಂಗೊಳಿಸುತ್ತದೆ.

Advertisement

ಇಲ್ಲಿರುವ ಪ್ರಮುಖ ಪ್ರವಾಸಿ ತಾಣಗಳು :

ಅಕ್ಕನಾಗಮ್ಮನ ಗುಹೆ

ಆಕಳ ಕೆಚ್ಚಲು

ಹರಳಯ್ಯನ ಚಿಲುಮೆ

ರುದ್ರಾಕ್ಷಿ ಮಂಟಪ

ತಲುಪುವ ಬಗೆ:

ದಾಂಡೇಲಿಯಿಂದ ಕಾಳಿ ನದಿಯನ್ನು ದಾಟುವುದರ ಮೂಲಕ ಉಳವಿಗೆ ಭೇಟಿ ನೀಡಬಹುದು. ದಾಂಡೇಲಿಯಿಂದ 11 ಕಿ.ಮೀ ಚಲಿಸಿದನಂತರ ಪಟೋಲಿ ಕ್ರಾಸ್ ಸಿಗುತ್ತದೆ. ಈ ಕ್ರಾಸ್ ನಿಂದ ಉಳವಿಗೆ ತೆರಳಲು ಎರಡು ಆಯ್ಕೆಗಳಿವೆ. ಮೊದಲನೆಯದು ಸಾಮಾನ್ಯವಾದ ಕುಂಬಾರವಾಡಾ ಹಾಗು ಜೋಯಿಡಾದ ಮೂಲಕ. ಎರಡನೆಯದು ರೋಮಾಂಚನಕಾರಿ ಅನುಭೂತಿ ನೀಡುವ ಗೂಂಧ್ ಹಾಗು ಸಿಂಥೇರಿ ಬಂಡೆಗಳ ಮೂಲಕ. ಎರಡನೆಯ ಮಾರ್ಗವು ಅತ್ಯುತ್ಸಾಹದ ಮಾರ್ಗವಾಗಿದ್ದು ಹಲವು ಪ್ರಾಕೃತಿಕ ವಿಶೇಷತೆಗಳನ್ನು ಕಾಣುತ್ತ ಸಾಗಬಹುದು. ಈ ಪ್ರಯಾಣವು ಸದಾ ನೆನಪಿನಳ್ಳುಳಿಯುವ ಪ್ರವಾಸವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next