ಬೆಂಗಳೂರು: ಧರ್ಮ ಜೀವನ ಪಥ ಜಾತಿ-ಪಂಥದ ಎಲ್ಲೆ ಮೀರಿದ್ದು ಎಂದು 125 ವರ್ಷಗಳ ಹಿಂದೆ ಸ್ವಾಮಿ ವಿವೇಕಾನಂದರು ವಿಶ್ವಧರ್ಮ ಸಮ್ಮೇಳನದಲ್ಲಿ ಹೇಳಿದ್ದು ನಮಗೆ ಸದಾ ಆದರ್ಶ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಅಮೆರಿಕ ಪ್ರವಾಸದಲ್ಲಿರುವ ಅವರು, ನ್ಯೂಜೆರ್ಸಿಯ ಸೋಮರ್ಸೆಟ್‌ನಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನದ ಕಾಲಭೈರವೇಶ್ವರ ದೇವಾಲಯ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಸ್ವಾಮಿ ವಿವೇಕಾನಂದರು ಮನುಕುಲಕ್ಕೆ ಧರ್ಮ ಜಾಗೃತಿ ಮೂಡಿಸಿ ವಿಶಾಲ ತತ್ವ ಸಾರಿದ್ದು ಅದನ್ನು ನಾವು ಪಾಲಿಸಬೇಕು ಎಂದು ಹೇಳಿದರು.
ಇಲ್ಲಿ ನಿರ್ಮಾಣವಾಗುತ್ತಿರುವ ಕಾಲಭೈರವೇಶ್ವರ ದೇವಾಲಯವು ಸಹ ಕನ್ನಡಿಗರಿಗೆ ಶ್ರದ್ಧಾ ಕೇಂದ್ರವಾಗಿ ಸಾಂಸ್ಕೃತಿಕ ಕೇಂದ್ರವಾಗಿ ರೂಪುಗೊಳ್ಳಲಿದೆ ಎಂದರು. ಹಿಂದಿನ ಪೀಠಾಧ್ಯಕ್ಷರಾದ ಬಾಲಗಂಗಾಧರನಾಥ ಸ್ವಾಮೀಜಿಯವರು ಆದಿಚುಂಚನಗಿರಿ ಮಹಾಸಂಸ್ಥಾನಕ್ಕೆ ವಿಶ್ವಮಾನ್ಯತೆ ದೊರಕಿಸಲು 50 ವರ್ಷಗಳ ಕಾಲ ಶ್ರಮಿಸಿದ್ದರು. ಈ ದೇವಾಲಯ ನಿರ್ಮಾಣ ಅವರ ಕನಸಾಗಿತ್ತು.
ಅದು ಇಂದು ನನಸಾಗುತ್ತಿರುವುದು ಸಂತೋಷದ ಸಂಗತಿ ಎಂದರು. ಆದಿಚುಂಚನಗಿರಿ ದೇವಾಸ್ಥಾನ ಗೋಪುರ ನಿರ್ಮಾಣಕ್ಕೆ ನನ್ನ ಕೈಯಿಂದ ಚಾಲನೆ ನೀಡಬೇಕು ಎನ್ನುವುದು ಶ್ರೀಗಳ ಅಭಿಲಾಷೆಯಾಗಿತ್ತು. ಆ ಅವಕಾಶ ನನಗೆ ದೊರೆತಿರುವುದು ಗೌರವದ ವಿಷಯ ಎಂದು ಹೇಳಿದರು.
ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಮುಖ್ಯಮಂತ್ರಿಯವರು ತಮ್ಮ ಕೆಲಸಗಳ ಒತ್ತಡದ ನಡುವೆಯೂ ಒಳ್ಳೆಯ ಕಾರ್ಯಕ್ಕೆ ಆಮೆರಿಕಕ್ಕೆ ಆಗಮಿಸಿದ್ದಾರೆ. ಇದಕ್ಕೆ ಯಾರೇ ಕುಹಕವಾಡಿದರೂ ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.
ಮೈಸೂರಿನ ಸಚ್ಚಿದಾನಂದ ಗಣಪತಿ ಸ್ವಾಮೀಜಿ, ಸಚಿವರಾದ ಸಿ.ಎಸ್.ಪುಟ್ಟರಾಜು, ಸಾ.ರಾ.ಮಹೇಶ್, ವಿಧಾನಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ, ಆಮೆರಿಕದ ಕನ್ನಡಿಗರು ಭಾಗವಹಿಸಿದ್ದರು.