Advertisement

ಷಷ್ಠಿ: ವಿವಿಧೆಡೆ ಅದ್ದೂರಿ ರಥೋತ್ಸವ, ಜಾತ್ರೆ

12:46 PM Dec 10, 2021 | Team Udayavani |

ರಾಮನಾಥಪುರ: ದಕ್ಷಿಣ ಕಾಶಿ ಎಂದೇ ಗುರ್ತಿಸುವ ಅರಕಲಗೂಡು ತಾಲೂಕು ರಾಮನಾಥಪುರದಲ್ಲಿ ಶ್ರೀ ಪ್ರಸನ್ನ ಸುಬ್ರಹ್ಮಣ್ಯಸ್ವಾಮಿ ಮಹಾ ರಥೋತ್ಸವ ಷಷ್ಠಿಯ ದಿನವಾದ ಗುರುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

Advertisement

ಧಾರ್ಮಿಕ ವಿಧಿ-ವಿಧಾನ: ಅಭಿಜನ್‌ ಮೂಹೂರ್ತದಲ್ಲಿ ಉತ್ಸವ ಮೂರ್ತಿಯನ್ನು ರಥದಲ್ಲಿ ಕೂರಿಸಿದ ನಂತರ ಆಗಸದಲ್ಲಿ ಗರುಡಗಳು ಹಾರಾಡಿದವು. ನಂತರ ದೇವಸ್ಥಾನದ ದಿವಾನರಾದ ಸುದರ್ಶನ್‌ಜೋಯಿಸ್‌, ಮುಖ್ಯ ಪರಿಚರಕರಾದ ಭಾರತಿ ರಮಣಾಚಾರ್‌, ಪಾರುಪತ್ತೇದಾರ್‌ ರಮೇಶ್‌ ಭಟ್‌ ಮುಖಂಡತ್ವದಲ್ಲಿ ಧಾರ್ಮಿಕ ವಿಧಿ- ವಿಧಾನಗಳು ಸಾಂಗವಾಗಿ ನಡೆದವು.

ದವನ ಎಸೆದು ಭಕ್ತಿ ಭಾವ: ಉತ್ಸವ ಮೂರ್ತಿ ಹೊತ್ತ ದೊಡ್ಡ ರಥವನ್ನು ಭಕ್ತರು ಜಯ ಘೋಷದೊಂದಿಗೆ ಎಳೆಯಲು ಪ್ರಾರಂಭಿಸಿದ ವೇಳೆ ಚಂಡೆ ಮದ್ದಳೆಯ ನಾದ ಮೊಳಗಿತು. ವೇಷಧಾರಿ ಆಕರ್ಷಕ ಬೊಂಬೆ ಕುಣಿತ ಮೆರವಣಿಗೆಯಲ್ಲಿ ಸಾಗಿದರೆ ವಿಪ್ರರು, ಸುಮಂಗಲಿಯರು ವೇದ- ಮಂತ್ರ ಪಠಿಸಿ ರಥ ಹಿಂಬಾಲಿಸಿದರು.

ಇದನ್ನೂ ಓದಿ: ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್‌ ಪೂರೈಸಲು ಮನವಿ

ಬೀದಿಯಲ್ಲಿ ರಥದ ಮೆರೆವಣಿಗೆ ಸಾಗುತ್ತಿದ್ದಂತೆ ರಥದ ಮೇಲೆ ಬಾಳೆ ಹಣ್ಣು ದವನ ಎಸೆದು ಭಕ್ತರು ಭಕ್ತಿಭಾವ ಮೆರೆದರು. ಕಾವೇರಿ ನದಿಯ ಸೇತುವೆ ತನಕ ತೆರಳಿದ ತೇರು ಪುನಃ ಅದೇ ಮಾರ್ಗವಾಗಿ ಸೂಸೂತ್ರವಾಗಿ ಸಾಗಿ ಸ್ವಸ್ಥಾನಕ್ಕೆ ಮರಳಿತು.

Advertisement

ವಧು-ವರರಿಂದ ದರ್ಶನ: ಸಂಪ್ರದಾಯದಂತೆ ಈ ವರ್ಷವೂ ನೂತನ ವಧು-ವರರು ರಥೋತ್ಸವಕ್ಕೆ ಆಗಮಿಸಿ, ವಿಶೇಷ ಪೂಜೆ ಸಲ್ಲಿಸಿದರು. ಜೀವನದಿ ಕಾವೇರಿಯಲ್ಲಿ ಸ್ನಾನ ಮಾಡಿ ದೇವಸ್ಥಾನದಲ್ಲಿ ಹಲವಾರು ಭಕ್ತರು ಉರುಳು ಸೇವೆ ಮಾಡಿದರು.

ಇನ್ನೂ ಕೆಲವು ಭಕ್ತರು ನದಿಯ ವಹ್ನಿಪುಷ್ಕರಣಿ, ಗಾಯತ್ರೀ ಶಿಲೆ, ಗೋಗರ್ಭ, ಗೌತಮ ಶಿಲೆ, ಕುಮಾರಧಾರಾ ತೀರ್ಥಚಾತು ರ್ಯುಗ ಶ್ರೀರಾಮೇಶ್ವರ, ಅಗಸ್ತ್ಯೇಶ್ವರ, ಅಂಜನೇಯಸ್ವಾಮಿ, ಪಟ್ಟಾಭಿರಾಮ ಮುಂತಾದ ದೇವಾಲಯಗಳಲ್ಲಿ ಭಕ್ತರು ಪೂಜೆ ಸಲ್ಲಿಸಿದರು.

ಪ್ರಸಾದ ವ್ಯವಸ್ಥೆ: ಸುಬ್ರಹ್ಮಣ್ಯಸ್ವಾಮಿ ಮಠ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಕಾವೇರಿ ನದಿ ಸ್ವತ್ಛತಾ ಆಂದೋಲನ ಸಮಿತಿ, ಶ್ರೀ ಪ್ರಸನ್ನ ಸುಬ್ರಹ್ಮಣ್ಯ ಸ್ವಾಮಿ ವರ್ತಕರ ಸಂಘ, ಸತ್ಯ ಸಾಯಿಬಾಬಾ ಸೇವಾ ಸಂಸ್ಥೆ, ರಾಮೇಶ್ವರಸ್ವಾಮಿ, ಅಭಿವೃದ್ಧಿ ಸಮಿತಿ, ಗ್ರಾಮದ ಮುಖಂಡರು ಸೇರಿ ವಿವಿಧ ಕಡೆ ಪ್ರಸಾದ ವ್ಯವಸ್ಥೆ, ಮಜ್ಜಿಗೆ, ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದರು. ಮಾಜಿ ಸಚಿವ ಎಚ್‌ .ಡಿ.ರೇವಣ್ಣ, ಭವಾನಿರೇವಣ್ಣ, ಬಿಜೆಪಿ ಮುಖಂಡ ಯೋಗರಮೇಶ್‌ ಮತ್ತಿತರರು ಇದ್ದರು.

ಭಕ್ತರಿಂದ ವಿವಿಧ ದೇಗುಲಗಳಲ್ಲಿ ವಿಶೇಷ ಪೂಜೆ

ಹಾಸನ: ಹೇಮಾವತಿ ನಗರದ ಶ್ರೀ ಸುಬ್ರಮಣ್ಯ ದೇವಾಲಯ, ಸಾಲಗಾಮೆ ರಸ್ತೆ ಬಳಿ ಇರುವ ಸರಸ್ವತಿ ದೇವಸ್ಥಾನ ಸೇರಿ ಸ್ಕಂಧ ಷಷ್ಠ ಹಬ್ಬದ ಅಂಗವಾಗಿ ವಿವಿಧ ದೇವಾಲಯಗಳಲ್ಲಿ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು. ಸಾಲಗಾಮೆ ರಸ್ತೆಯ ಸರಸ್ವತಿ ದೇವಸ್ಥಾನದ ವಾರ್ಷಿಕೋತ್ಸವ ಹಾಗೂ ಷಷ್ಠಿ ಹಿನ್ನೆಲೆ ಹೋಮ ಮತ್ತು ವಿಶೇಷ ಪೂಜೆ ನೆರವೇರಿತು. ದಾನಿಗಳು ಉತ್ಸಹ ಮೂರ್ತಿಯನ್ನು ಕೊಡುಗೆ ನೀಡದರು. ಮಹಾಮಂಗಳಾರತಿ ನಂತರ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next