ಕೆ.ಆರ್.ನಗರ: ಮಠಗಳನ್ನು ಆರ್ಥಿಕವಾಗಿ ಸದೃಢಗೊಳಿಸಲು ಮಾತ್ರ ಸೀಮಿತಗೊಳ್ಳದೆ ಸಮಾಜಕ್ಕೆ ಅನುಕೂಲವಾಗುವಂತಹ ಧಾರ್ಮಿಕ ಕಾರ್ಯಕ್ರಮಗಳನ್ನು ಮಠಾಧೀಶರು ಹಮ್ಮಿಕೊಂಡಾಗ ಸಮುದಾಯ ಸರಿದಾರಿಯಲ್ಲಿ ನಡೆಯಲು ಸಾಧ್ಯ ಎಂದು ಅರಣ್ಯ ಸಚಿವ ಆರ್.ಶಂಕರ್ ಹೇಳಿದರು.
ಪಟ್ಟಣದ ಕನಕ ಗುರು ಪೀಠದಲ್ಲಿ ದಸರಾ ಮಹೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿ, ಮಠಗಳು ಧಾರ್ಮಿಕ ಭಾವನೆ, ಭಾವೈಕ್ಯತೆಯನ್ನು ಬೆಳೆಸುವ ಕೇಂದ್ರವಾಗಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಮಠಗಳು ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿ ಕೇವಲ ಹಣ ಸಂಪಾದಿಸುವ ಕಾರ್ಯದಲ್ಲಿ ನಿರತವಾಗಿವೆ ಎಂದರು.
ಕಾಗಿನೆಲೆ ಮಹಾ ಸಂಸ್ಥಾನವನ್ನು ಎಲ್ಲಾ ರೀತಿಯಲ್ಲಿಯೂ ಅಭಿವೃದ್ಧಿಪಡಿಸಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಅವರ ಕೊಡುಗೆ ಅಪಾರವಾಗಿದ್ದು, ನಾನೂ ಕೂಡ ಮಠದ ಏಳಿಗೆಗೆ ಸಹಕಾರ ನೀಡುತ್ತೇನೆ ಎಂದು ತಿಳಿಸಿದರು.
ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಮಾತನಾಡಿ, ಕುರುಬ ಸಮುದಾಯದವರು ರಾಜ್ಯದ 224 ಕ್ಷೇತ್ರಗಳಲ್ಲೂ ಇದ್ದು, ಅವರು ಬೆಂಬಲಿಸುವ ಶಾಸಕರು ಚುನಾಯಿತರಾಗುತ್ತಿದ್ದು, ಸಮಾಜದ ಬೆಂಬಲದಿಂದ ಎರಡು ಬಾರಿ ನಾನು ಶಾಸಕನಾಗಿ ಆಯ್ಕೆಯಾಗಲು ಸಾಧ್ಯವಾಗಿತ್ತು ಎಂದರು.
ಸಚಿವ ಆರ್.ಶಂಕರ್, ಮಾಜಿ ಶಾಸಕ ಎಚ್.ಪಿ.ಮಂಜುನಾಥ್‌ರನ್ನು ಮಠದ ವತಿಯಿಂದ ಸನ್ಮಾನಿಸಲಾಯಿತು. ತಿಥಣಿ ಮಠದ ಸಿದ್ದರಾಮಾನಂದಪುರಿಸ್ವಾಮೀಜಿ, ಶಿವಾನಂದಪುರಿಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಸಮಾಜದ ಮುಖಂಡರಾದ ಅಪ್ಪಾಜಿಗೌಡ, ಶ್ರೀನಿವಾಸ್, ಕೃಷ್ಣಮೂರ್ತಿ, ಸಿದ್ದೇಗೌಡ, ಕೃಷ್ಣೇಗೌಡ, ಮಹದೇವ್ ಇತರರು ಇದ್ದರು.