Advertisement

ಸಿಎಂರಿಂದ ಧರ್ಮ ವಿಭಜನೆ ಹುನ್ನಾರ

05:26 PM Sep 15, 2017 | Team Udayavani |

ಚಿತ್ರದುರ್ಗ: ರಾಜ್ಯ ಸರ್ಕಾರ ಕೆರೆ ಕಟ್ಟೆಗಳನ್ನು ಅಚ್ಚುಕಟ್ಟು ಮಾಡಿಲ್ಲ. ಹಾಗಾಗಿ ಮಳೆ ನೀರು ವ್ಯರ್ಥವಾಗುತ್ತಿದೆ. ರಾಜ್ಯದಲ್ಲಿ ಬರಗಾಲ ತಾಂಡವವಾಡುತ್ತಿದ್ದು, ದೇಶಕ್ಕೆ ಅನ್ನ ನೀಡುವ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ. ಇದ್ಯಾವುದಕ್ಕೂ ಕಿವಿಗೊಡದ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಧರ್ಮವನ್ನು ವಿಭಜಿಸಲು ಹೊರಟಿದ್ದು ನಾಚಿಕೆಗೇಡು ಎಂದು ಬಿಜೆಪಿ ರೈತ ಮೋರ್ಚಾ ರಾಷ್ಟ್ರೀಯ ಉಪಾಧ್ಯಕ್ಷ ಶಂಕರ ಗೌಡ ಪಾಟೀಲ್‌ ಹೇಳಿದರು.

Advertisement

ಇಲ್ಲಿನ ಕ್ರೀಡಾಭವನದಲ್ಲಿ ಗುರುವಾರ ನಡೆದ ಬಿಜೆಪಿ ರೈತ ಮೋರ್ಚಾ ಕಾರ್ಯಕಾರಿಣಿ ಸಭೆಯಲ್ಲಿ ಅವರು ಮಾತನಾಡಿದರು. ಧಾರ್ಮಿಕ ಕೆಲಸ ಮಾಡಲು ಧರ್ಮಗುರುಗಳಿದ್ದಾರೆ. ಧರ್ಮ, ಜಾತಿಗಳ ನಡುವೆ ಒಡಕು ಮೂಡಿಸುವ ಕೆಲಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಬಾರದು. ಜಾತಿ ಬಗ್ಗೆ ಅಷ್ಟು ಕಾಳಜಿ ಇದ್ದರೆ ಮೊದಲು ಹಿಮಾಲಯ ಪರ್ವತಕ್ಕೆ ಹೋಗಿ ತಪಸ್ಸು ಮಾಡಿ ನಂತರ ಬಂದು ಧರ್ಮ ಪ್ರಚಾರ ಮಾಡಲಿ ಎಂದು ಸಲಹೆ ನೀಡಿದರು. 

ರಾಜ್ಯ ಕಾಂಗ್ರೆಸ್‌ ಸರ್ಕಾರ ಅನ್ನದಾತರಿಗೆ ಮಾಡಿರುವ ಅನ್ಯಾಯವನ್ನು ರೈತನ ಮನೆಗೆ ತಲುಪಿಸುವ ಕೆಲಸವನ್ನು
ಬಿಜೆಪಿ ಕಾರ್ಯಕರ್ತರು ಮಾಡಬೇಕು. ಕಾಂಗ್ರೆಸ್‌ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ 1300 ಕೋಟಿ ರೂ.ಗಳನ್ನು
ಖರ್ಚು ಮಾಡಿರುವುದಾಗಿ ಹೇಳುತ್ತಿದೆ. ಆದರೆ ಕಾಮಗಾರಿ ಎಲ್ಲಿದೆಯೋ ಅಲ್ಲಿಯೇ ಇದೆ ಎಂದು ವ್ಯಂಗ್ಯವಾಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಎಸ್‌. ನವೀನ್‌ ಮಾತನಾಡಿ, ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಭದ್ರಾ
ಮೇಲ್ದಂಡೆ ಯೋಜನೆಗೆ ಚಾಲನೆ ನೀಡಿ ಹಣ ಬಿಡುಗಡೆ ಮಾಡಿದರು. ಆದರೆ ಸಿದ್ದರಾಮಯ್ಯ ಸರ್ಕಾರದಲ್ಲಿ ನೀರಾವರಿ
ಯೋಜನೆಗೆ ಹೆಚ್ಚಿನ ಹಣ ನೀಡುತ್ತಿಲ್ಲ. ಹಾಗಾಗಿ ಕಾಮಗಾರಿ ಆಮೆ ನಡಿಗೆಯಲ್ಲಿ ಸಾಗುತ್ತಿದೆ ಎಂದು ಆರೋಪಿಸಿದರು.

ಜಿಲ್ಲೆಯ ಕೆಲವೆಡೆ ನಿರ್ಮಿಸಿರುವ ಚೆಕ್‌ಡ್ಯಾಂಗಳು ಕಳಪೆಯಾಗಿರುವುದರಿಂದ ಮಳೆ ಬಂದರೂ ನೀರು ಸಂಗ್ರಹವಾಗುತ್ತಿಲ್ಲ. ಎಲ್ಲೆಂದರಲ್ಲಿ ನೀರು ಹರಿದು ಹೋಗಿ ರೈತರ ಹೊಲಗಳಲ್ಲಿನ ಬೆಳೆ ಹಾಗೂ ಫಲವತ್ತಾದ ಮಣ್ಣು ಕೊಚ್ಚಿ ಹೋಗುತ್ತಿದೆ. ಭದ್ರಾ ಯೋಜನೆಗೆ ಮೀಸಲಿಟ್ಟಿರುವ ಹಣದಲ್ಲಿ ಅರ್ಧ ಹಣವನ್ನು ಎತ್ತಿನಹೊಳೆಗೆ ಬಳಸಿರುವುದರಿಂದ ಭದ್ರಾ ಮೇಲ್ದಂಡೆ ಯೋಜನೆ ನಿಧಾನವಾಗಲು ಕಾರಣವಾಗಿದೆ ಎಂದು ಆಕ್ಷೇಪಿಸಿದರು.

Advertisement

ತಾಲೂಕಿನ ಕಲ್ಲಹಳ್ಳಿ, ದ್ಯಾಮವ್ವನಹಳ್ಳಿ ಮೊದಲಾದ ಕಡೆ ಕಳಪೆ ಚೆಕ್‌ಡ್ಯಾಂಗಳನ್ನು ನಿರ್ಮಾಣ ಮಾಡಲಾಗಿದೆ. ಇಂತಹ ಹಲವಾರು ಹಗರಣಗಳನ್ನು ಬಯಲಿಗೆಳೆದು ಕಾಂಗ್ರೆಸ್‌ ಸರ್ಕಾರದ ವಿರುದ್ದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ರಾಜ್ಯ ಸರ್ಕಾರ ಬರ ಪರಿಹಾರಕ್ಕೆ ಕೋಟ್ಯಂತರ ರೂ. ಬಳಸುತ್ತಿದೆ. ಆದರೆ ಒಂದು ಕೆರೆಯೂ ಅಚ್ಚುಕಟ್ಟಾಗಿಲ್ಲ. ಕೇಂದ್ರ ಸರ್ಕಾರ ಕಳೆದ ವರ್ಷ ರಾಜ್ಯಕ್ಕೆ 60 ಕೋಟಿ ರೂ. ಬಿಡುಗಡೆ ಮಾಡಿದೆ. ಫಸಲ್‌ ಬಿಮಾ ಯೋಜನೆ ಏನಾಯಿತು, ಮಣ್ಣು ಆರೋಗ್ಯ ಕಾರ್ಡ್‌ ನಿಜವಾಗಿಯೂ ರೈತರಿಗೆ ತಲುಪಿದೆಯೇ ಎಂದು ರಾಜ್ಯ ಸರ್ಕಾರವನ್ನು ಕೇಳುವುದಕ್ಕಾಗಿ ಅಕ್ಟೋಬರ್‌ ಕೊನೆ ವಾರ ಇಲ್ಲವೇ ನವೆಂಬರ್‌ ಮೊದಲ ವಾರದಲ್ಲಿ ಹೋರಾಟ ಮಾಡಲಾಗುವುದು ಎಂದರು.

ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಶಿವಪ್ರಸಾದ್‌ ಮಾತನಾಡಿ, ಪಂಚಾಯತಕ್ಕೆ ಒಂದರಂತೆ ಆರಂಭಿಸಿರುವ ರೈತ ಪಹರಿಗಳು ರೈತರ ನೈಜ ಸಮಸ್ಯೆಯನ್ನು ಅರ್ಥ ಮಾಡಿಕೊಂಡು ಹೋರಾಟ ರೂಪಿಸಬೇಕು. ರಾಜ್ಯಾದ್ಯಂತ ಮಳೆ ಬೆಳೆಯಿಲ್ಲದೆ 2-3 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಾಗಾಗಿ ಪಹರಿಗಳು ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದು ತಿಳಿಸಿದರು.

ರೈತ ಮೋರ್ಚಾ ಜಿಲ್ಲಾಧ್ಯಕ್ಷ ಡಿ. ರಮೇಶ್‌ ಮಾತನಾಡಿದರು. ಸ್ಲಂ ಮೋರ್ಚಾ ರಾಜ್ಯ ಉಪಾಧ್ಯಕ್ಷ ಸಿದ್ದೇಶ್‌ ಯಾದವ್‌,
ರೇಷ್ಮೆ ಪ್ರಕೋಷ್ಠದ ಸಹಪ್ರಭಾರಿ ತಿಪ್ಪೇಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ್‌, ಮುರಳಿ,
ರತ್ನಮ್ಮ, ಜೈಪಾಲ್‌, ಶ್ರೀರಾಮ ರೆಡ್ಡಿ, ಮಾಧ್ಯಮ ವಕ್ತಾರ ದಗ್ಗೆ ಶಿವಪ್ರಕಾಶ್‌, ನಾಗರಾಜ ಬೇದ್ರೆ, ಪಿ. ಲೀಲಾಧರ್‌ ಠಾಕೂರ್‌, ಶಂಭು, ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸ್ವಾಮಿ ಇದ್ದರು.

ರೈತರು ಕೃಷಿಯಿಂದ ವಿಮುಖರಾಗುತ್ತಿರುವುದರಿಂದ ಆಹಾರ ಉತ್ಪಾದನೆ ಕಡಿಮೆಯಾಗುತ್ತಿದೆ. ರೈತ ಆತ್ಮಹತ್ಯೆಗೆ ಶರಣಾಗುತ್ತಿದ್ದಾನೆ. ಇಷ್ಟಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರಿಗೆ ಯಾವುದೇ ಯೋಜನೆ ನೀಡದೆ ವಂಚಿಸಿದ್ದಾರೆ. ಇದು ರಾಜ್ಯ ಸರ್ಕಾರಕ್ಕೆ ಶೋಭೆ ತರುವುದಿಲ್ಲ.
ಶಿವಪ್ರಸಾದ್‌ 
ಬಿಜೆಪಿ ರೈತ ಮೋರ್ಚಾ ರಾಜ್ಯ   ಉಪಾಧ್ಯಕ್ಷ.

Advertisement

Udayavani is now on Telegram. Click here to join our channel and stay updated with the latest news.

Next