Advertisement

ಧರ್ಮಾಧಾರಿತ ರಾಷ್ಟ್ರಗಳು ಉದ್ಧಾರವಾಗೊಲ್ಲ; ಪ್ರೊ|ರಾಚಪ್ಪ

06:51 PM Mar 28, 2022 | Nagendra Trasi |

ಶಿವಮೊಗ್ಗ: ಧರ್ಮ ಆಧಾರಿತ ರಾಷ್ಟ್ರಗಳು ಉದ್ಧಾರವಾಗುವುದಿಲ್ಲ ಎಂದು ಡಿವಿಎಸ್‌ ಕಾಲೇಜು ನಿವೃತ್ತ ಉಪನ್ಯಾಸಕ ಪ್ರೊ|ರಾಚಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ನಗರದ ಕರ್ನಾಟಕ ಸಂಘದಲ್ಲಿ ಜನಪರ ಚಳವಳಿ, ಸಂಘಟನೆ ಮತ್ತು ವ್ಯಕ್ತಿಗಳ ವೇದಿಕೆ ವತಿಯಿಂದ ಭಾನುವಾರ ಆಯೋಜಿಸಿದ್ದ “ಧರ್ಮ ಸಮನ್ವಯ-ಕುವೆಂಪು ವಿಚಾರಧಾರೆ’ ಕುರಿತ ಸಂವಾದ ಮತ್ತು ಚಿಂತನ ಮಂಥನ ಗೋಷ್ಠಿಯಲ್ಲಿ ಅವರು ಮಾತನಾಡಿದರು.

ಧರ್ಮ ಆಧಾರಿತ ಚಟುವಟಿಕೆಗಳು ದೇಶದಲ್ಲಿ ಕಂಡುಬಂದರೆ ಸರಕಾರ ಅದನ್ನು ಮೊಳಕೆಯಲ್ಲಿಯೇ ಚಿವುಟಬೇಕು. ಇಲ್ಲದಿದ್ದರೆ ಇಡೀ ದೇಶವೇ ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ರಾಷ್ಟ್ರ ಕವಿ ಕುವೆಂಪು ಅವರು ದೇವರಿಗಿಂತ “ದೇಶ’ಕ್ಕೆ ಹಾಗೂ ಧರ್ಮಕ್ಕಿಂತ “ಲೋಕದ ಹಿತ’ಕ್ಕೆ ಒತ್ತು ನೀಡಿದ್ದರು. ಅವರೂ ಸಹ ಹಿಂದೂ ಅನುಯಾಯಿಯೇ ಆಗಿದ್ದರು ಎಂದು ತಿಳಿಸಿದರು.

ಭಾರತ ವಿಶಿಷ್ಟ ರಾಷ್ಟ್ರವಾಗಿದೆ. ಬಹುತ್ವ ಭಾರತ ನಿರ್ಮಾಣ ಮಾಡದಿದ್ದರೆ ದೇಶಕ್ಕೆ ಭವಿಷ್ಯವೇ ಇಲ್ಲ. ಪಾಕಿಸ್ತಾನ ಸೇರಿದಂತೆ ಕೆಲವು ರಾಷ್ಟ್ರಗಳು ಧರ್ಮ ಆಧಾರಿತವಾಗಿವೆ. ಅಲ್ಲಿಯ ರಾಜ್ಯಭಾರವೂ ಧರ್ಮ ಕೇಂದ್ರಿತವೇ ಆಗಿದೆ. ಹೀಗಾಗಿಯೇ ಆ ದೇಶಗಳು ಜಾಗತಿಕ ಮಟ್ಟದಲ್ಲಿ ತಮ್ಮನ್ನು ತಾನು ಪ್ರತಿನಿ ಧಿಸುವಲ್ಲಿ ಸಾಧ್ಯವಾಗಿಲ್ಲ. ಮನ್ನಣೆಯೂ ಇಲ್ಲ ಎಂದು ಹೇಳಿದರು.

ಧರ್ಮ ಮತ್ತು ದೇವರು ಎಲ್ಲಿರಬೇಕೋ ಅಲ್ಲಿಯೇ ಇರಲಿ. ಯಾವುದೇ ಕಾರಣಕ್ಕೂ ಧರ್ಮದ ಹೆಸರಿನಲ್ಲಿ ಬೀದಿ ರಂಪಾಟ ಮಾಡುವುದು, ಹತ್ಯೆಯಂತಹ ಘೋರ ಕೃತ್ಯಗಳು ನಡೆಯಬಾರದು ಎಂದರು. ಸಮಾಜವಾದಿ ಅಧ್ಯಯನ ಕೇಂದ್ರದ ಪ್ರಕಾಶ್‌ ಕಮ್ಮರಡಿ ಮಾತನಾಡಿ, ವಿದ್ಯಾರ್ಥಿಗಳನ್ನು ಧರ್ಮ ಮತ್ತು ಆಚರಣೆಗಳ ಹೆಸರಿನಲ್ಲಿ ಎತ್ತಿಕಟ್ಟುವ ಕೆಲಸ ಮಾಡಲಾಗುತ್ತಿದೆ. ವಿದ್ಯಾರ್ಥಿಗಳ ನಡುವೆ ಒಡಕು ಮೂಡಿಸಲಾಗುತ್ತಿದೆ. ಇದ್ಯಾವುದೇ ಕಾರಣಕ್ಕೂ ಆಗಬಾರದು ಎಂದರು.

Advertisement

ಧರ್ಮದ ಹೆಸರಿನಲ್ಲಿ ಯಾವುದೇ ಕಾರಣಕ್ಕೂ ಬರುವ ದಿನಗಳಲ್ಲಿ ತಾಯಿ ಮಗನನ್ನು ಕಳೆದುಕೊಳ್ಳಬಾರದು. ಅದಕ್ಕೆ ನಾವು ಅವಕಾಶವನ್ನೂ ನೀಡುವುದಿಲ್ಲ. ಈ ಉದ್ದೇಶದಿಂದಲೇ ಕಾರ್ಯಕ್ರಮ ಆಯೋಜಿಸಲಾಗಿದೆ. ಮಲೆನಾಡಿನ ಸಂಸ್ಕೃತಿ ಇಲ್ಲಿಯ ವಿಚಾರಧಾರೆಗಳ ಕುರಿತು ತಿಳಿಹೇಳಲಾಗುವುದು ಎಂದು ತಿಳಿಸಿದರು.

ರಾಮ ಎಲ್ಲರಿಗೂ ಆದರ್ಶ. ಆದರೆ, ನಾವು ಯಾವ ರಾಮನನ್ನು ಹಿಂಬಾಲಿಸುತ್ತಿದ್ದೇವೆ ಎಂದು ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಪ್ರತಿಯೊಬ್ಬರಿಗೂ “ಮರ್ಯಾದಾ ಪುರುಷೋತ್ತಮ ರಾಮ’ ಮಾದರಿಯಾಗಿದ್ದಾರೆ. ಕುವೆಂಪು ಅವರೂ ತಮ್ಮ ಶ್ರೀರಾಮಾಯಣ ದರ್ಶನಂ ಕೃತಿಯಲ್ಲಿ ಇದನ್ನು ಬಣ್ಣಿಸಿದ್ದಾರೆ ಎಂದು ಹೇಳಿದರು.

ಕೋಮು ಗಲಭೆಯಲ್ಲಿ ಮೃತಪಟ್ಟ ವಿಶ್ವನಾಥ್‌ ಶೆಟ್ಟಿ ಅವರ ತಾಯಿ ಮೀನಾಕ್ಷಮ್ಮ, ಬಜೀಉಲ್ಲಾ ಅವರು ಕಾರ್ಯಕ್ರಮವನ್ನು ಗುಲಾಬಿ ಹೂವುಗಳನ್ನು ನೀಡುವ ಮೂಲಕ ಉದ್ಘಾಟಿಸಿದರು. ಪ್ರಮುಖರಾದ ಬಾನು ಮುಷ್ತಾಕ್‌, ಬಿ.ಗೋಪಾಲ್‌, ದೇವುಕುಮಾರ್‌, ತೇಜಸ್ವಿ ಪಟೇಲ್‌, ಕೆ.ಟಿ.ಗಂಗಾಧರ್‌, ಚನ್ನವೀರಪ್ಪ ಗಾಮನಗಟ್ಟಿ ಇತರರಿದ್ದರು. ಕೆ.ಪಿ.ಶ್ರೀಪಾಲ್‌ ಸ್ವಾಗತಿಸಿದರು. ಪ್ರೊ| ಸಿರಾಜ್‌ ಅಹಮದ್‌ ನಿರೂಪಿಸಿದರು. ಜಿ.ಎಲ್‌.ಜನಾರ್ಧನ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next