Advertisement

ದೈವಸ್ಥಾನಗಳ ವಿಧಿ-ವಿಧಾನಗಳಲ್ಲಿ ಧಾರ್ಮಿಕ ಪರಿಷತ್‌ ಹಸ್ತಕ್ಷೇಪ ಸಲ್ಲದು: ರಮಾನಾಥ ರೈ

06:05 PM Oct 01, 2021 | Team Udayavani |

ಮಂಗಳೂರು: ದೈವಸ್ಥಾನಗಳ ವಿಧಿ-ವಿಧಾನಗಳಲ್ಲಿ ಧಾರ್ಮಿಕ ಪರಿಷತ್‌ ಹಸ್ತಕ್ಷೇಪ ಮಾಡಬಾರದು ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.

Advertisement

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತುಳುನಾಡಿನಲ್ಲಿ ದೈವದ ಭಂಡಾರವನ್ನು ದೈವಸ್ಥಾನದಲ್ಲಿ ಇಡುವ ಸಂಪ್ರದಾಯವಿಲ್ಲ. ಆದರೆ ಧಾರ್ಮಿಕ ಪರಿಷತ್‌ನವರ ಹಸ್ತಕ್ಷೇಪದಿಂದಾಗಿ ಬಂಟ್ವಾಳ ತಾಲೂಕಿನ ಮೊಗರ್ನಾಡು ಸೀಮೆಯ ದೈವಸ್ಥಾನದ ಭಂಡಾರವನ್ನು ಭಂಡಾರದ ಮನೆಯ ಬದಲು ದೈವಸ್ಥಾನದಲ್ಲೇ ಇಡಲು ತೀರ್ಮಾನಿಸಿರುವುದು ತುಳುನಾಡಿನ ಧಾರ್ಮಿಕ ನಂಬಿಕೆಗೆ ಮಾಡುತ್ತಿರುವ ಅಪಚಾರ ಎಂದು ಹೇಳಿದರು.

ದೈವರಾಧನೆಗೆ ಅನಾದಿ ಕಾಲದಿಂದ ನಡೆದುಕೊಂಡು ಬಂದ ಕಟ್ಟುಕಟ್ಟಳೆ ಇದೆ. ಅದರಂತೆ ದೈವಸ್ಥಾನದ ಭಂಡಾರವನ್ನು ಸಂಬಂಧಿಸಿದ ಬೀಡು, ಗುತ್ತು ಇತ್ಯಾದಿ ಭಂಡಾರದ ಮನೆಯಲ್ಲಿಯೇ ಇಡಬೇಕು. ಅಲ್ಲಿ ಅದಕ್ಕೆ ನಿತ್ಯ ಪೂಜೆಯಾಗುತ್ತದೆ. ಸಂಕ್ರಮಣ ಮತ್ತು ಉತ್ಸವಗಳ ಸಂದರ್ಭ ಅಲ್ಲಿಂದ ದೈವಸ್ಥಾನಕ್ಕೆ ತರಲಾಗುತ್ತದೆ. ಮತ್ತೆ ಅಲ್ಲಿಗೆ ವಾಪಸ್‌ ಕೊಂಡೊಯ್ಯಲಾಗುತ್ತದೆ. ಅದರಲ್ಲಿ ದೈವದ ಚಿನ್ನಾಭರಣ ಮತ್ತಿತರ ಅಮೂಲ್ಯ ವಸ್ತುಗಳಿಂರುವುದರಿಂದ ಅದರ ರಕ್ಷಣೆಯ ಜವಾಬ್ದಾರಿಯೂ ಇರುತ್ತದೆ ಎಂದು ಹೇಳಿದರು.

ಇದನ್ನೂ ಓದಿ:ಪಕ್ಷದಿಂದ ಪಕ್ಷಕ್ಕೆ ಹಾರುವ ಗೋವಾದ ರಾಜಕಾರಣಿಗಳಿಗೆ ರೋಗ ಬಂದಿದೆ: ಸಂಜಯ್ ರಾವುತ್

ಇಲಾಖೆಯಿಂದ ಹೊರಗಿಡಿ
ದೈವರಾಧನೆಯ ಕಟ್ಟುಕಟ್ಟಳೆಯಲ್ಲಿ ಧಾರ್ಮಿಕ ಪರಿಷತ್‌ನವರು ಹಸ್ತಕ್ಷೇಪ ಮಾಡುವುದನ್ನು ತುಳುನಾಡಿನ ಎಲ್ಲರೂ ವಿರೋಧಿಸಬೇಕು. ಮುಂದೆ ಎಲ್ಲಿಯೂ ಈ ರೀತಿ ಆಗಬಾರದು. ದೈವಾರಾಧನೆ ಪ್ರವಾಸೋದ್ಯಮ ಕೇಂದ್ರವಲ್ಲ. ಅದೊಂದು ಭಕ್ತಿಯ ಕೇಂದ್ರ. ಅಲ್ಲಿ ಪರಂಪರೆಯ ಆಧಾರದಲ್ಲಿ ದೈವರಾಧನೆ ನಡೆಯುತ್ತಿದೆ. ದೈವಸ್ಥಾನಗಳನ್ನು ಧಾರ್ಮಿಕ ದತ್ತಿ ಇಲಾಖೆಯಿಂದ ಹೊರಗಿಡಬೇಕು ಎಂದು ರಮಾನಾಥ ರೈ ಹೇಳಿದರು.

Advertisement

ಮಾಜಿ ಮೇಯರ್‌ಗಳಾದ ಶಶಿಧರ ಹೆಗ್ಡೆ, ಹರಿನಾಥ್‌, ಸಿಟಿ ಬಸ್‌ ಮಾಲಕರ ಸಂಘದ ಅಧ್ಯಕ್ಷ ಜಯಶೀಲ ಅಡ್ಯಂತಾಯ, ಮನಪಾ ಮಾಜಿ ಸದಸ್ಯ ಅಶೋಕ್‌ ಡಿ.ಕೆ., ಧಾರ್ಮಿಕ ಪರಿಷತ್‌ ಮಾಜಿ ಸದಸ್ಯ ಪದ್ಮನಾಭ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next