ಮಂಗಳೂರು: ನಾಲ್ಕುದಶಕ ಹಿಂದೆ ಹಿಂದೂ ಧರ್ಮದಿಂದ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದ ಕುಟುಂಬವೊಂದು ಗುರುಪುರದ ವಜ್ರದೇಹಿ ಮಠದಲ್ಲಿ ಸೋಮವಾರ ಹಿಂದೂ ಧರ್ಮಕ್ಕೆ ಮರಳಿದೆ. ಹಿಂದೂ ಜಾಗರಣ ವೇದಿಕೆಯ ಮುಖಂಡರ ನೇತೃತ್ವದಲ್ಲಿ ಸೀಮಿತ ಜನರ ಸಮಕ್ಷಮದಲ್ಲಿ ಜರಗಿದ ಪೂರಕ ವಿಧಿವಿಧಾನಗಳಿಗೆ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಮತಾಂತರ ಬಳಿಕ ಅರುಣ್ ಮೊಂತೆರೋ ತನ್ನ ಹೆಸರನ್ನು ಅರುಣ್ ಪೂಜಾರಿ ಎಂದು, ಪತ್ನಿ ಸುನೀತಾ ಸಂಗೀತಾ ಆಗಿ, ಆವರ ತಾಯಿ ಐಡಾ ಥಾಮಸ್ ಗೌರಿ ಪೂಜಾರ್ತಿಯಾಗಿ, ಅರುಣ್ ಅವರ ಇಬ್ಬರು ಪುತ್ರರು ಅಜಯ್ ಹಾಗೂ ಅನೀಶ್ ಪೂಜಾರಿ ಎಂದು ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಅರುಣ್ ಬೆಂಗಳೂರಿನಲ್ಲಿ ಉದ್ಯಮಿಯಾಗಿದ್ದು, ತಮ್ಮ ಕುಟುಂಬದೊಂದಿಗೆ ಮಂಗಳೂರಿನ ಪದವಿನಂಗಡಿಯಲ್ಲಿ ನೆಲೆಸಿದ್ದಾರೆ. ಮಾತೃಧರ್ಮಕ್ಕೆ ಮರಳಿದ ಕುಟುಂಬದ ಸದಸ್ಯರಿಗೆ ಶುದ್ಧಿ ಕಲಶ ಪ್ರೋಕ್ಷಣೆ ನಡೆಯಿತು. ಭವಿಷ್ಯದಲ್ಲಿ ಪವಮಾನ ಪ್ರಾಯಶ್ಚಿತ ಹೋಮ ಹಾಗೂ ಗಣಪತಿ ಹೋಮ ನಡೆಯಲಿದೆ. ಜತೆಗೆ ಕಾನೂನಾತ್ಮಕ ತೊಡಕುಗಳ ನಿವಾರಣೆಗೆ ಕೂಡ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಶ್ರೀ ರಾಜಶೇಖರಾನಂದ ಸ್ವಾಮೀಜಿ ತಿಳಿಸಿದ್ದಾರೆ.
‘ಕ್ರೈಸ್ತ ಧರ್ಮಕ್ಕೆ ಮತಾಂತರದ ಬಳಿಕ ಅರುಣ್ ಕುಟುಂಬ ಹಲವಾರು ಸಮಸ್ಯೆ ಎದುರಿಸಬೇಕಾಗಿ ಬಂತು. ಮೂರು ತಿಂಗಳ ಹಿಂದೆ ಅರುಣ್ ಹಿಂದೂ ಜಾಗರಣ ವೇದಿಕೆಯ ಸದಸ್ಯರನ್ನು ಸಂಪರ್ಕಿಸಿದ್ದು, ಸಂಘಟನೆ ಮುಖಂಡರು ನನ್ನಲ್ಲಿ ವಿಷಯ ತಿಳಿಸಿದ್ದರು. ಯಾವುದೇ ಕಾರಣಕ್ಕೂ ಬಲವಂತದ ಮತಾಂತರಕ್ಕೆ ಅವಕಾಶ ನೀಡಬಾರದು, ಅವರ ಇಚ್ಛೆಯಂತೆ ಆಗುವುದಾದರೆ ಆಗಲಿ ಎಂದು ಸಂಘಟನೆ ಮುಖಂಡರಿಗೆ ನಾನು ತಿಳಿಸಿದ್ದೆ’ ಎಂದು ವಿವರಿಸಿದ್ದಾರೆ. ಅರುಣ್ ಮೊಂತೆರೋ ಅವರು ಕಳೆದ ಸುಮಾರು 10 ವರ್ಷಗಳಿಂದ ಗುರುಪುರ ಮಠದ ಜತೆ ಸಂಪರ್ಕ ಇರಿಸಿಕೊಂಡಿದ್ದಾರೆ. ಹಿಂದೂ ಜಾಗರಣ ವೇದಿಕೆ ಪದವಿನಂಗಡಿ ಘಟಕದ ಜತೆ ಕೂಡ ಅವರು ಉತ್ತಮ ಸಂಬಂಧ ಹೊಂದಿದ್ದು, ಅವರ ಜತೆ ತಾನು ಮತ್ತೆ ಹಿಂದೂ ಧರ್ಮಕ್ಕೆ ಮರಳುವ ಇಚ್ಛೆ ವ್ಯಕ್ತಪಡಿಸಿದ್ದರು.
ಅರುಣ್ ಅವರ ತಾಯಿ ಐಡಾ ಥಾಮಸ್ ಮೂಲತಃ ಕಾಸರಗೋಡಿನವರಾಗಿದ್ದು ಹಿಂದೂ ಕುಟುಂಬದಲ್ಲಿ ಜನಿಸಿದ್ದು, 40 ವರ್ಷ ಹಿಂದೆ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದರು. ಮೂರು ತಿಂಗಳ ಹಿಂದೆ ಅರುಣ್ ತಮ್ಮ ಸಂಘಟನೆ ಸಂಪರ್ಕಿಸಿ ಹಿಂದೂ ಆಗುವ ಹಂಬಲ ವ್ಯಕ್ತಪಡಿಸಿದ್ದರು. ಸದ್ಯದ ಪರಿಸ್ಥಿತಿ ಸರಿ ಇಲ್ಲ ಎಂಬ ಕಾರಣಕ್ಕೆ ಒಂದಷ್ಟು ಕಾಲ ನಾವು ಮುಂದೂಡಿದರೂ ಪದೇ ಪದೇ ಅವರ ಮನವಿಯಿಂದಾಗಿ ವಜ್ರದೇಹಿ ಸ್ವಾಮೀಜಿಯವರನ್ನು ಸಂಪರ್ಕಿಸಿ ಅವರ ಮಾರ್ಗದರ್ಶನದಂತೆ ಅರುಣ್ ಕುಟುಂಬವನ್ನು ಮರಳಿ ಹಿಂದೂ ಧರ್ಮಕ್ಕೆ ಸ್ವೀಕರಿಸಲಾಗಿದೆ ಎಂದು ಹಿಂ.ಜಾ.ವೇ. ಜಿಲ್ಲಾ ಕಾರ್ಯದರ್ಶಿ ಶರತ್ ತಿಳಿಸಿದ್ದಾರೆ.