ಥಾಣೆ: ಥಾಣೆ ನವೋದಯ ಕನ್ನಡ ಸೇವಾ ಸಂಘ ಸಂಚಾಲಕತ್ವದ ನವೋದಯ ಇಂಗ್ಲಿಷ್ ಹೈಸ್ಕೂಲ್, ಜೂನಿಯರ್ ಕಾಲೇಜು ಮತ್ತು ಮಹಿಳಾ ವಿಭಾಗದ ಸಹಯೋಗದೊಂದಿಗೆ ಭಜನ ಮಂಗಲೋತ್ಸವ ಕಾರ್ಯಕ್ರಮವು ಫೆ. 5ರಂದು ಅಪರಾಹ್ನ 1ರಿಂದ ರಾತ್ರಿ 9ರ ವರೆಗೆ ನವೋದಯ ಸದನ ಸಭಾಗೃಹದಲ್ಲಿ ನಡೆಯಿತು.
ಮುಂಬಯಿ – ಥಾಣೆ ಪರಿಸರದ ಪ್ರಸಿದ್ಧ ಭಜನ ಮಂಡಳಿಯವರ ಕೂಡುವಿಕೆಯಲ್ಲಿ ನಡೆದ ಕಾರ್ಯ ಕ್ರಮವನ್ನು ನವೋದಯ ಇಂಗ್ಲಿಷ್ ಹೈಸ್ಕೂಲ್ ಮತ್ತು ಜೂನಿಯರ್ ಕಾಲೇಜಿನ ಅಧ್ಯಕ್ಷ ಎಳತ್ತೂರುಗುತ್ತು ದಯಾನಂದ ಎಸ್. ಶೆಟ್ಟಿ, ಉಪಾಧ್ಯಕ್ಷ ಶಶಿಧರ್ ಕೆ. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಸುನಿಲ್ ಎಸ್. ಶೆಟ್ಟಿ, ಗೌರವ ಪ್ರಧಾನ ಕೋಶಾಧಿಕಾರಿ ದಯಾನಂದ್ ಹೆಗ್ಡೆ ಮತ್ತು ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ನಯನಾ ಶೆಟ್ಟಿ ಅವರು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.
ಎಳತ್ತೂರುಗುತ್ತು ದಯಾನಂದ ಎಸ್. ಶೆಟ್ಟಿ ಅವರು ಸಂಘವು ನಡೆದು ಬಂದ ದಾರಿಯನ್ನು ವಿವರಿಸಿ, ನಮ್ಮ ಸಂಸ್ಕೃತಿಯನ್ನು ಉಳಿಸಿ-ಬೆಳೆಸುವ ನಿಟ್ಟಿನಲ್ಲಿ ಭಜನೆಯ ಅರಿವನ್ನು ಮಕ್ಕಳಲ್ಲಿ ಮೂಡಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಭಜನೆಯಿಂದ ವಿಭಜನೆಯಿಲ್ಲ. ಇಂತಹ ಕಾರ್ಯಕ್ರಮಗಳು ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಮೂಡಿಸುತ್ತದೆ. ಕುಣಿತ ಭಜನೆಯನ್ನು ಕಲಿಸಿ ಮಾರ್ಗದರ್ಶನ ನೀಡಿದ ರಾಮಣ್ಣ ಅವರು ನಮ್ಮ ಶಾಲೆಯ ಭಜನ ಗುರುಗಳು ಎಂದು ಹೇಳಲು ಗೌರವವೆನಿಸುತ್ತದೆ ಎಂದು ತಿಳಿಸಿ, ಭಾಗವಹಿಸಿದ ಎಲ್ಲ ಭಜನ ತಂಡಗಳಿಗೆ ಕೃತಜ್ಞತೆ ಸಲ್ಲಿಸಿದರು.
ಭಜನ ಮಂಗಲೋತ್ಸವದ ದಿನವಿಡೀ ನಡೆದ ಪೂಜಾ ಕಾರ್ಯಗಳನ್ನು ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಸುನೀಲ್ ಶೆಟ್ಟಿ ನೆರವೇರಿಸಿಕೊಟ್ಟರು. ನವೋದಯ ಸಂಘದ ಕಾರ್ಯಕಾರಿ ಸಮಿತಿಯ ಸರ್ವಸದಸ್ಯರು, ಮಹಿಳಾ ವಿಭಾಗ ಮತ್ತು ಯುವ ವಿಭಾಗದ ಸರ್ವಸದಸ್ಯರು ಉಪಸ್ಥಿತರಿದ್ದರು. ನವೋದಯ ಭಜನ ಮಂಡಳಿ ಸಹಿತ ಶ್ರೀ ಅಯ್ಯಪ್ಪ ಸೇವಾ ಸಮಿತಿ ಕಿಸನ್ ನಗರ, ಬಿಲ್ಲವರ ಅಸೋಸಿಯೇಶನ್ ಥಾಣೆ ಸ್ಥಳೀಯ ಕಚೇರಿ, ಕನ್ನಡ ಸಂಘ ವರ್ತಕ್ ನಗರ, ಥಾಣೆ ಬಂಟ್ಸ್ ಅಸೋಸಿಯೇಶನ್, ಶ್ರೀ ದುರ್ಗಾಪರಮೇಶ್ವರೀ ಮಂದಿರ ಕೋಪ್ರಿ, ಶ್ರೀ ಆದಿಶಕ್ತಿ ಭಜನ ಮಂಡಳಿ ಮಾಜಿವಾಡಾ, ಸ್ತ್ರೀ ಶಕ್ತಿ ಮಹಿಳಾ ಮಂಡಳಿಯ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಭಜನ ಕಾರ್ಯಕ್ರಮವನ್ನು ನೀಡಿದ ತಂಡಗಳ ಪ್ರಮುಖರನ್ನು ಸಂಘದವತಿಯಿಂದ ಶಾಲು ಹೊದೆಸಿ, ಪುಷ್ಪಗುತ್ಛ, ಸ್ಮರಣಿಕೆ ನೀಡಿ ಅಭಿನಂದಿಸ ಲಾಯಿತು. ನವೋದಯ ಇಂಗ್ಲಿಷ್ ಹೈಸ್ಕೂಲಿನ ವಿದ್ಯಾರ್ಥಿಗಳು ತಮ್ಮ ಕುಣಿತ ಭಜನೆಯೊಂದಿಗೆ ಭಜನ ಮಂಗಲೋತ್ಸವಕ್ಕೆ ಮಂಗಳ ಹಾಡಿದರು.
ನವೋದಯ ವೇದಿಕೆಯಲ್ಲಿ ಪ್ರತಿಷ್ಠಾಪಿಸಿದ ಶಾರದಾ ದೇವಿಗೆ ಪೂಜೆಗೈದು, ಅತೀ ವಿಜೃಂಭಣೆ ಯೊಂದಿಗೆ ದೇವರನ್ನು ನವೋದಯ ಸದನದ ಸಭಾಂಗಣದಿಂದ ನವೋ ದಯ ಕನ್ನಡ ಸೇವಾ ಸಂಘದ ಭಜನ ಮಂದಿರದ ಮೂಲಸ್ಥಾನದಲ್ಲಿಟ್ಟು ಮಹಾ ಮಂಗಳಾರತಿಗೈದು ಬಳಿಕ ತೀರ್ಥ ಪ್ರಸಾದ ವಿತರಿಸಲಾಯಿತು. ಭಜನ ಕಾರ್ಯಕ್ರಮದಲ್ಲಿ ಭಕ್ತರು, ಸಂಘದ ಸದಸ್ಯರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.