ಜಮಖಂಡಿ: ಡಾ| ವೀರೇಂದ್ರ ಹೆಗ್ಗಡೆಯವರ ಧರ್ಮಸ್ಥಳ ಸಂಸ್ಥೆಯವರು ಧಾರ್ಮಿಕತೆ ಎತ್ತಿ ಹಿಡಿದು ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದು ಶ್ಲಾಘನೀಯ ಕಾರ್ಯವಾಗಿದೆ ಎಂದು ಮುತ್ತಿನಕಂತಿ ಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯರು ಹೇಳಿದರು. ನಗರದ ಬಸವಭವನದಲ್ಲಿ ಬುಧವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ವಿವಿಧ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸಾಮೂಹಿಕ ಸತ್ಯನಾರಾಯಣ ಪೂಜಾ ಕಾರ್ಯಕ್ರಮ ಹಾಗೂ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.
ಎಲ್ಲ ವರ್ಗದ ಜನರ ಹಿತವನ್ನು ಬಯಸುವ ಮಠಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಆದರೆ ಧರ್ಮಸ್ಥಳ ಸಂಸ್ಥೆ ಎಲ್ಲ ವರ್ಗದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ನಿರ್ವಹಿಸುತ್ತಿದೆ. ಧರ್ಮಸ್ಥಳ ಸಂಸ್ಥೆಯ ಮೂಲಕ ಇಂದಿನ ಮಹಿಳೆಯರು ಮನೆಯಿಂದ ಹೊರಬಂದು ಉದ್ಯೋಗ, ವ್ಯಾಪಾರದಲ್ಲಿ ತೊಡಗಿಕೊಂಡಿದ್ದಾರೆ ಎಂದರು.
ತ್ಯಾಗ ಮಾಡುವ ಮನೋಭಾವನೆ ಹೊಂದಿರುವ ಹೆಣ್ಣು ನಮ್ಮ ದೇಶದ ಭೂತಾಯಿ. ಜಗತ್ತಿನಲ್ಲಿರುವ ಎಲ್ಲ ದೇಶಗಳು ಭಾರತೀಯ ಸಂಸ್ಕೃತಿಗೆ ಮಾರು ಹೋಗುತ್ತಿವೆ ಎಂದು ಹೇಳಿದರು. ಧರ್ಮಸ್ಥಳ ಸಂಸ್ಥೆಯ ಜಿಲ್ಲಾ ನಿರ್ದೇಶಕ ಎಂ.ಡಿ. ಮಹೇಶ, ನಿರಾಣಿ ಫೌಂಡೇಶನ್ ನಿರ್ದೇಶಕ ಐ.ಜಿ. ನ್ಯಾಮಗೌಡ, ಒಕ್ಕೂಟ ಅಧ್ಯಕ್ಷೆ ಪ್ರೇಮಾ ಶಿಂಧೆ, ಕುಶಾಲ ವಾಘಮೋರೆ, ಪ್ರಶಾಂತ ಚರಕಿ, ಶ್ರೀಶೈಲ ರಾಂಬಳ್ಳಿ, ಯಮನೂರ ಮೂಲಂಗಿ, ರೋಹಿತ್ ಜೈನ್, ಸಂತೋಷ ಮಾನೆ, ಮಂಜುನಾಥ ಭೋವಿ, ಸೇವಾ ಪ್ರತಿನಿಧಿಗಳಾದ ಗಾಯತ್ರಿ ಬಿದರಿ, ತನುಜಾ ದೊಡಮನಿ, ಲಕ್ಷ್ಮೀ ಜುಮನಾಳ, ವೈಶಾಲಿ ಉಪ್ಪಾರ, ಸರೋಜನಿ ಕರಣಿ, ಪ್ರೇಮಾ ಹಿರೇಮಠ, ಲಕ್ಷ್ಮೀ ಬೊಬ್ಬಲೆಕರ, ನಂದಾ ಪನಾಳಕರ, ವಸುಂದರಾ ಲಾತುರಕರ, ಶಶಿಕಲಾ, ಕೌಸರ, ರೇಣುಕಾ, ಶಾಂತಾ, ಹಂಪವ್ವ, ಹಸೀನಾ ಇದ್ದರು.
ಬುಧವಾರ ಬೆಳಗ್ಗೆ 8 ಗಂಟೆಗೆ 250ಕ್ಕೂ ಹೆಚ್ಚು ದಂಪತಿ ವೃತಧಾರಿಗಳಿಂದ ಪೂಜಾ ಸಂಕಲ್ಪ ಆರಂಭ, 8:30ಗಂಟೆಗೆ ಶಾಸ್ತ್ರೋಕ್ತವಾಗಿ ಸತ್ಯ ನಾರಾಯಣ ಪೂಜೆಗೆ ಚಾಲನೆ, 9:30ಕ್ಕೆ ಸತ್ಯ ನಾರಾಯಣ ಪೂಜಾ ವೃತಕಥೆ ಆರಂಭ, 10 ಗಂಟೆಗೆ ಮಹಾಪೂಜೆ, 11 ಗಂಟೆಗೆ ಧಾರ್ಮಿಕ ಸಭೆ, ಮಹಾಪ್ರಸಾದ ವಿತರಣೆ ಜರುಗಿತು.