ಡಾ| ಬಿ.ಆರ್. ಅಂಬೇಡ್ಕರ್ ಜಯಂತಿ, ಗುಡ್ ಫ್ರೈಡೇ, ಮೂರನೇ ಶನಿವಾರ ಮತ್ತು ರವಿವಾರದ ಸಾಲು ರಜೆಯಿಂದಾಗಿ ಸೋಮವಾರದ ತನಕವೂ ಉಭಯ ಜಿಲ್ಲೆಗಳ ಪ್ರವಾಸಿ ತಾಣ ಮತ್ತು ಧಾರ್ಮಿಕ ಕೇಂದ್ರದಲ್ಲಿ ಜನಸಂದಣಿ ಇರುವ ನಿರೀಕ್ಷೆ ಇದೆ.
Advertisement
ಉಡುಪಿ ಶ್ರೀಕೃಷ್ಣ ಮಠ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ, ಜೀರ್ಣೋದ್ಧಾರಗೊಳ್ಳುತ್ತಿರುವ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವ ಸ್ಥಾನ, ಕುಂಭಾಶಿ ಆನೆಗುಡ್ಡೆ ದೇವಸ್ಥಾನ, ದಕ್ಷಿಣ ಕನ್ನಡದ ಶ್ರೀ ಸುಬ್ರಹ್ಮಣ್ಯ, ಶ್ರೀಕ್ಷೇತ್ರ ಧರ್ಮಸ್ಥಳ, ಶ್ರೀ ಕಟೀಲು ಕ್ಷೇತ್ರ ಸಹಿತ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಭಕ್ತಜನರು ಭಾರೀ ಸಂಖ್ಯೆಯಲ್ಲಿ ಕಂಡುಬಂದರು. ಇದಲ್ಲದೆ ಕರಾವಳಿಯ ಪ್ರವಾಸಿ ತಾಣಗಳಾದ ಮಲ್ಪೆ, ಮರವಂತೆ, ಕಾಪು, ಸಸಿಹಿತ್ಲು, ಪಣಂಬೂರು ಬೀಚ್‌ಗಳಲ್ಲಿ ಪ್ರವಾಸಿಗರು ಅಪಾರ ಸಂಖ್ಯೆಯಲ್ಲಿ ಸೇರಿದ್ದರು. ನಾಲ್ಕು ದಿನ ಒಟ್ಟಿಗೆ ರಜೆ ಬಂದಿರುವುದರಿಂದ ಹೊರಜಿಲ್ಲೆ ಮಾತ್ರವಲ್ಲದೆ ಸ್ಥಳೀ ಯರು ಕೂಡ ಕುಟುಂಬ ಸಮೇತರಾಗಿ ಪ್ರವಾಸ, ಧಾರ್ಮಿಕ ಕೇಂದ್ರಗಳಿಗೆ ಬಂದಿದ್ದಾರೆ. ಶನಿವಾರ ಮತ್ತು ರವಿವಾರ ಪ್ರವಾಸಿಗರ ಸಂಖ್ಯೆಯಲ್ಲಿ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ.
ಸುಬ್ರಹ್ಮಣ್ಯ: ಸರಣಿ ರಜೆ ಮತ್ತು ಬಿಸು ರಥೋತ್ಸವ ವಿಶೇಷ ದಿನವಾದ ಹಿನ್ನೆಲೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಶುಕ್ರವಾರ ಹೆಚ್ಚಿನ ಸಂಖ್ಯೆಯ ಭಕ್ತರು ಭೇಟಿ ನೀಡಿದರು. ಭಕ್ತರು ಕ್ಷೇತ್ರಕ್ಕೆ ಆಗಮಿಸಿ, ದೇವರ ದರುಶನ ಪಡೆದು ಸೇವೆ ನೆರವೇರಿಸಿ ದರು. ಅಲ್ಲದೆ ಕ್ಷೇತ್ರದಲ್ಲಿ ಶುಕ್ರವಾರ ಸೌರಮಾನ ಯುಗಾದಿ ಪ್ರಯುಕ್ತ ಶ್ರೀ ದೇವರ ರಥೋತ್ಸವ ನೆರವೇರಿತು.
Related Articles
ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಸಹಿತ ಎಲ್ಲೆಡೆ ಪ್ರಮುಖ ದೇವಸ್ಥಾನ ಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದರು.
Advertisement
ವಿಷು ಹಬ್ಬದ ಹಿನ್ನೆಲೆ ದೇವಸ್ಥಾನ ಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ವಿಷು ಜಾತ್ರೆ ಎ. 13ರಿಂದ ಆರಂಭಗೊಂಡಿದ್ದು ಎ. 24ರಂದು ರಥೋತ್ಸವ ನಡೆಯಲಿದೆ. ಈ ಪ್ರಯುಕ್ತ ಪ್ರತೀ ದಿನ ಬಲಿ ಉತ್ಸವ ನಡೆಯಲಿದೆ.
ಶುಕ್ರವಾರ ಶ್ರೀ ಕ್ಷೇತ್ರ ಧರ್ಮಸ್ಥಳ, ಸುರ್ಯ ದೇವಸ್ಥಾನ, ಸೌತಡ್ಕ ಕ್ಷೇತ್ರ ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವರ ದರ್ಶನ ಪಡೆದರು.
ಇದನ್ನೂ ಓದಿ:ಅಂಜನಾದ್ರಿ ಮೆಟ್ಟಿಲು ಹತ್ತುವ ವೇಳೆ ಹೃದಯಾಘಾತ : ಮುಂಬೈ ಮೂಲದ ಪ್ರವಾಸಿಗ ಸಾವು
ಕಿಕ್ಕಿರಿದ ಮಲ್ಪೆ ಬೀಚ್ ಮಲ್ಪೆ: ಗುರುವಾರದಿಂದ ರವಿವಾರದ ವರೆಗೆ ಸರಣಿ ರಜೆಯ ಹಿನ್ನೆಲೆಯಲ್ಲಿ ಮಲ್ಪೆ ಬೀಚ್‌ಗೆ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಬೆಳಗ್ಗಿನಿಂದಲೇ ಪ್ರವಾಸಿಗರ ವಾಹನಗಳ ಸಾಲು ಬೀಚ್ ಕಡೆಗೆ ಬರುತ್ತಿದ್ದು, ಬೀಚಿನ ಎಲ್ಲ ಪಾರ್ಕಿಂಗ್ ಸ್ಥಳಗಳು ಭರ್ತಿಯಾಗಿವೆ. ಕೆಲವರು ತಮ್ಮ ವಾಹನಗಳನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದು, ಬೀಚಿನ ದಕ್ಷಿಣದ ಹನುಮಾನಗರದ ವರೆಗೂ ವಾಹನದ ಸಾಲು ಕಂಡುಬಂತು. ಮಲ್ಪೆ ನಗರದ ಮುಖ್ಯ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗಿದ್ದು, ಸ್ಥಳೀಯ ವಾಹನ ಚಾಲಕರಿಗೆ ಮತ್ತು ಪಾದಚಾರಿಗಳಿಗೆ ತೀವ್ರ ಸಮಸ್ಯೆ ಆಗಿತ್ತು. ಪೊಲೀಸರು ಸುಗಮ ಸಂಚಾರಕ್ಕೆ ಹರಸಾಹಸ ಪಟ್ಟರು.