ದಾವಣಗೆರೆ: ವೀರಶೈವ ಲಿಂಗಾಯತ ಯುವ ವೇದಿಕೆ ಆಶ್ರಯದಲ್ಲಿ ಜು.21 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಶ್ರೀಮದ್ ರಂಭಾಪುರಿ ಜಗದ್ಗುರು ಡಾ| ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಬೆಳ್ಳಿ ಅಡ್ಡಪಲ್ಲಕ್ಕಿ ಮಹೋತ್ಸವ ಮತ್ತು ಧರ್ಮ ಜಾಗೃತಿ ಸಮ್ಮೇಳನ ನಡೆಯಲಿದೆ ಎಂದು ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.
ರಾಜ್ಯದ ಕೇಂದ್ರ ಬಿಂದು ಬೆಂಗಳೂರಿನಲ್ಲಿ ಪಂಚಪೀಠದ ಹಲವಾರು ಧಾರ್ಮಿಕ ಕಾರ್ಯಕ್ರಮ ನಡೆದಿವೆ. ಇದೇ ಮೊದಲ ಬಾರಿಗೆ ಅರಮನೆ ಮೈದಾನದಲ್ಲಿ ರಂಭಾಪುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಮತ್ತು ಧರ್ಮ ಜಾಗೃತಿ ಸಮ್ಮೇಳನ ನಡೆಯುತ್ತಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಂದು ಬೆಳಗ್ಗೆ 10ಕ್ಕೆ ನಡೆಯುವ ಬೆಳ್ಳಿ ಅಡ್ಡಪಲ್ಲಕ್ಕಿ ಮಹೋತ್ಸವ ಮತ್ತು ಧರ್ಮ ಜಾಗೃತಿ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಗಂಗಾಬಿಕೆ ಮಲ್ಲಿಕಾರ್ಜುನ್ ಒಳಗೊಂಡಂತೆ ಸಮಾಜದ ಗಣ್ಯರು, ಹಿರಿಯ ಮುತ್ಸದ್ದಿಗಳು ಭಾಗವಹಿಸುವರು. ನೂರಕ್ಕೂ ಹೆಚ್ಚಿನ ಹರ-ಗುರುಚರಮೂರ್ತಿಗಳು ಸಾನ್ನಿಧ್ಯ ವಹಿಸುವರು ಎಂದು ತಿಳಿಸಿದರು.
ಕೆಲವಾರು ದಿನಗಳ ಹಿಂದೆ ವೀರಶೈವ-ಲಿಂಗಾಯತ ಬೇರೆ ಎಂದಿದ್ದವರಲ್ಲಿ ಸಾಕಷ್ಟು ಜನರು ಬೆಂಗಳೂರಿನಲ್ಲಿ ಇದ್ದಾರೆ. ಅವರಿಗೆ ವೀರಶೈವ-ಲಿಂಗಾಯತ ಬೇರೆ ಬೇರೆ ಅಲ್ಲ. ವೀರಶೈವ-ಲಿಂಗಾಯತ ಎಂದೆಂದಿಗೂ ಒಂದೇ ಎಂಬ ಮಹತ್ತರ ಸಂದೇಶವನ್ನು ಇಡೀ ನಾಡಿಗೆ ಸಾರುವ ಉದ್ದೇಶದೊಂದಿಗೆ ವೀರಶೈವ ಲಿಂಗಾಯತ ಯುವ ವೇದಿಕೆ ಈ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ತಿಳಿಸಿದರು.
ವೀರಶೈವ ಲಿಂಗಾಯತ ಯುವ ವೇದಿಕೆ ರಾಜ್ಯ ಉಪಾಧ್ಯಕ್ಷ ಅನ್ನದಾನಿ ಹಿರೇಮಠ ಮಾತನಾಡಿ, ರಂಭಾಪುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಮತ್ತು ಧರ್ಮ ಜಾಗೃತಿ ಸಮ್ಮೇಳನದಲ್ಲಿ 100ಕ್ಕೂ ಹೆಚ್ಚು ಗುರು ಪರಂಪರೆ ಸ್ವಾಮೀಜಿಯವರು, 125ಕ್ಕೂ ಹೆಚ್ಚು ವಿರಕ್ತ ಸ್ವಾಮೀಜಿಗಳು ಭಾಗವಹಿಸುವರು. ವೀರಶೈವ ಮತ್ತು ಲಿಂಗಾಯತ ಬೇರೆ ಅಲ್ಲವೇ ಅಲ್ಲ ಎಂಬುದನ್ನು ತಿಳಿಸುವ ಜೊತೆಗೆ ಇನ್ನೂ ಹೆಚ್ಚಿನ ಒಗ್ಗೂಡಿಕೆಯ ದೃಷ್ಟಿಯಿಂದ ಧಾರ್ಮಿಕ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸರ್ಕಾರ ಸಣ್ಣ ಪುಟ್ಟ ಸಮಾಜಗಳ ಸಮಗ್ರ ಅಭಿವೃದ್ಧಿಗಾಗಿ ನಿಗಮ ಪ್ರಾರಂಭಿಸಿದೆ. ಅತಿ ಹೆಚ್ಚಿನ ಸಂಖ್ಯೆಯಲ್ಲಿರುವ ವೀರಶೈವ-ಲಿಂಗಾಯತ ಸಮಾಜದ ಸಮಗ್ರ ಅಭಿವೃದ್ಧಿಗಾಗಿ ನಿಗಮ ಪ್ರಾರಂಭಿಸಬೇಕು ಎಂದು ಸಮ್ಮೇಳನದ ಮೂಲಕ ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದು ತಿಳಿಸಿದರು.
ವೀರಶೈವ ಲಿಂಗಾಯತ ಯುವ ವೇದಿಕೆ ಮುಖಂಡರಾದ ಬಸವರಾಜ್ ಚಟ್ನಾಡ್, ಡಾ| ಮಹೇಶ್ ಪಾಟೀಲ್, ಮಾಜಿ ಮೇಯರ್ ಶೋಭಾ ಪಲ್ಲಾಗಟ್ಟೆ, ಅಖೀಲ ಭಾರತ ವೀರಶೈವ ಮಹಾಸಭಾ ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷೆ ವಿನುತಾ ರವಿ, ಅಜ್ಜಂಪುರಶೆಟ್ರಾ ಮೃತ್ಯುಂಜಯ, ಶಿವನಗೌಡ ಪಾಟೀಲ್, ಟಿಂಕರ್ ಮಂಜಣ್ಣ ಸುದ್ದಿಗೋಷ್ಠಿಯಲ್ಲಿದ್ದರು.