ಬೆಂಗಳೂರು: ಕಾಯಿಲೆ ಎಂದರೆ ಏನು ಎಂದು ತಿಳಿಯದ ಆ ಮಗುವಿನ ಕಣ್ಣಲ್ಲಿ ಮುಗ್ಧತೆ, ಮೊಗದಲ್ಲಿ ಮಂದ ಹಾಸವಿತ್ತು. “ಮುಗ್ಧ ಮಗುವಿಗೆ ಮರು ಜೀವಕೊಟ್ಟು ಮಂದಹಾಸಕ್ಕೆ ಕಾರಣ ನಾನಾದೆ’ ಎಂಬ ಸಾರ್ಥಕ ಭಾವ ಯುವಕನಲ್ಲಿತ್ತು. ಪಕ್ಕದಲ್ಲೇ ನಿಂತಿದ್ದ ಪುತ್ರಿಯನ್ನು ಬದುಕಿಸಿದ ವ್ಯಕ್ತಿಯ ಸಹಾಯ ನೆನೆದು ದಂಪತಿ ಅಕ್ಷರಶಃ ಭಾವುಕವಾಗಿದ್ದು ಮಾತ್ರ ಸುಳ್ಳಲ್ಲ.
ಅವರಿಬ್ಬರದ್ದು ರಕ್ತ ಸಂಬಂಧವಲ್ಲ. ರಕ್ತಕ್ಕಾಗಿ ಕೂಡಿದ ಧರ್ಮಾತೀತ ಬಂಧ. ಇವರ ಮೊದಲ ಭೇಟಿಯ ಅಪರೂಪದ ಘಳಿಗೆಗೆ ಗ್ಲೋಬಲ್ ಬ್ಲಿಡ್ ಸ್ಟೆಮ್‌ಸೆಲ್ ದಾನಿಗಳ ನೋಂದಣಿ ಸಂಸ್ಥೆ ಡಿಕೆಎಂಎಸ್ ವೇದಿಕೆ ಒದಗಿಸಿತ್ತು. ಥಲಸ್ಸೇಮಿಯಾ ಎಂಬ ತೀವ್ರ ರಕ್ತ ಸಂಬಂಧಿ ರೋಗದಿಂದ ಬಳಲುತ್ತಿದ್ದ ಪಶ್ಚಿಮ ಬಂಗಾಳ ಮೂಲದ ಶಿಯಾ ಎಂಬ ಒಂದು ವರ್ಷದ ಚಿಕ್ಕ ಮಗುವಿಗೆ ಬೆಂಗಳೂರಿನ ಟೆಕ್ಕಿ ದೆಬೋಜ್ಯೋತಿ ಎಂಬವರು ಬ್ಲಿಡ್ ಸ್ಟೆಮ್ ಸೆಲ್’ (ರಕ್ತಕಾಂಡ ಕೋಶ) ನೀಡಿ ಜೀವ ಉಳಿಸಿದ್ದಾರೆ.
3 ವರ್ಷಗಳ ಹಿಂದೆ ತೀವ್ರ ಜ್ವರದಿಂದ ಬಳಲುತ್ತಿದ್ದ ಶಿಯಾ ವೈದ್ಯರ ಬಳಿ ಪರೀಕ್ಷೆ ಮಾಡಿಸಿದಾಗ ಥಲಸ್ಸೆಮಿಯಾ ಇರುವುದಾಗಿ ತಿಳಿದಿದೆ. ಬಾಲಕಿ ದೇಹದಲ್ಲಿ ರಕ್ತ ಕೋಶಗಳು ನಿರಂತ ರವಾಗಿ ನಾಶವಾಗುತ್ತವೆ. ಆಕೆ ಬದುಕಿರುವವರೆಗೂ ಬಾಹ್ಯವಾಗಿ ರಕ್ತ ನೀಡುತ್ತಿರಬೇಕು ಎಂದು ವೈದ್ಯರು ಹೇಳಿದ್ದರು. ಬಳಿಕ ಪೋಷಕರು ದೊಡ್ಡ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ತೆರಳಿದಾಗ, ಸ್ಟೆಮ್‌ಸೆಲ್ ಕಸಿಯಿಂದ ರೋಗ ಗುಣವಾಗಿ ಬಾಲಕಿ ದೇಹದಲ್ಲಿಯೇ ರಕ್ತ ಉತ್ಪತ್ತಿ ಆರಂಭವಾಗುತ್ತದೆ ಎಂದು ಹೇಳಿದರು. ಆ ಬಳಿಕ ದಾನಿ ಸಹಾಯಕ್ಕೆ ಗ್ಲೋಬಲ್ ಬ್ಲಿಡ್ ಸ್ಟೇಮ್ ದಾನಿಗಳ ನೋಂದಣಿ ಸಂಸ್ಥೆಯಾದ ಡಿಕೆಎಂಎಸ್ ಬಳಿ ನೋಂದಾಯಿಸಿಕೊಂಡು ಆ ಮೂಲಕ ಸೂಕ್ತ ದಾನಿಯನ್ನು ಪಡೆದಿದ್ದಾರೆ.
ದಾನಿ ದೆಬೋಜ್ಯೋತಿ ಟೆಕ್ಕಿಯಾಗಿದ್ದು, 2016ರಲ್ಲಿ ಕಾರ್ಯಕ್ರಮವೊಂದರಲ್ಲಿ ಡಿಕೆಎಂಎಸ್‌ನಲ್ಲಿ ಸ್ವಯಂ ಪ್ರೇರಿತರಾಗಿ ಸ್ಟೆಮ್‌ಸಿಲ್ಸ್ ದಾನಕ್ಕೆ ನೋಂದಣಿ ಮಾಡಿಕೊಂಡಿದ್ದರು. ಡಿಕೆಎಂಎಸ್ ಅವರನ್ನು ಸಂಪರ್ಕಿಸಿ ದಾನಕ್ಕೆ ಒಪ್ಪಿಗೆ ಪಡೆದುಕೊಂಡಿದೆ. ವೈದ್ಯರ ಸೂಚನೆ ಮೇರೆಗೆ 2017ರಲ್ಲಿ ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಕಸಿ ಚಿಕಿತ್ಸೆ ನಡೆದಿದೆ. ಈಗ, ಬಾಲಕಿ ಸಾಮಾನ್ಯರಂತಿದ್ದಾಳೆ. ಸದ್ಯ ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಡಿಕೆಎಂಎಸ್ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶಿಯಾ ಹಾಗೂ ದೆಬೋಜ್ಯೋತಿ ಪರಸ್ಪರ ಪರಿಚಯ ಮಾಡಿಕೊಂಡರು.
ರಕ್ತಕಾಂಡ ಕೋಶಗಳ ದಾನಿಗಳ ಅಗತ್ಯತೆ ಇದೆ: ಭಾರತದಲ್ಲಿ ಪ್ರತಿ ಐದು ನಿಮಿಷಕ್ಕೆ ಒಬ್ಬರಲ್ಲಿ ರಕ್ತದ ಕ್ಯಾನ್ಸರ್, ರಕ್ತ ಸಂಬಂಧಿ ರೋಗ ಕಾಣಿಸಿಕೊಳ್ಳುತ್ತಿದೆ. ಇವರಿಗೆ ರಕ್ತ ಕೋಶ ದಿನದಿಂದ ದಿನಕ್ಕೆ ನಾಶವಾಗುತ್ತವೆ. ಇಂತಹ ರೋಗಿಗಳಿಗೆ ಆರೋಗ್ಯವಂತ ವ್ಯಕ್ತಿಯ ರಕ್ತದ ಕಾಂಡ ಕೋಶ ಪಡೆದು ರೋಗಿಗೆ ಕಸಿ ಮಾಡುವ ಮೂಲಕ ರಕ್ತ ಕೋಶಗಳ ಉತ್ಪತ್ತಿ ಮಾಡಿ ಜೀವ ಉಳಿಸಬಹುದಾಗಿದೆ.
ಈ “ಬ್ಲಿಡ್ ಸ್ಟೆಮ್ ಸೆಲ್’ ದಾನಿಗಳ ನೋಂದಣಿ ಹೆಚ್ಚಿಸುವ ಹಾಗೂ ದಾನಿಗಳ ಸಂಪರ್ಕ ಸೇವೆ ಒದಗಿಸಲು ಅಂತಾರಾಷ್ಟ್ರೀಯ ಡಿಕೆಎಂಎಸ್ ಸಂಸ್ಥೆ ಹಾಗೂ ಬೆಂಗಳೂರು ಮೆಡಿಕಲ್ ಸರ್ವೀಸ್ ಟ್ರಸ್ಟ್ (ಬಿಎಂಎಸ್‌ಟಿ)ಜೊತೆಗೂಡಿ ಅಂತಾರ್ಜಾಲ ನೋಂದಣಿ ಆರಂಭಿಸಿದ್ದು
www.dkms-bmst.org/register ಭೇಟಿ ನೀಡಿ ನೋಂದಣಿ ಮಾಡಿಕೊಳ್ಳಬಹುದು ಎಂದು ಬಿಎಂಎಸ್‌ಟಿ ನಿರ್ದೇಶಕಿ ಡಾ.ಲತಾ ಜಗನ್ನಾಥನ್ ತಿಳಿಸಿದರು.
ಧರ್ಮಾತೀತ ನಡೆಗೆ ಶ್ಲಾಘನೆ: ದಾನಿ ಬಾಲಕಿಯನ್ನು ಮುದ್ದು ಮಾಡಿ, ಅವಳಿಂದ “ಥ್ಯಾಂಕ್ಯೂ’ ಎಂದು ಹೇಳಿ ಹೂ ಪಡೆದುಕೊಂಡರು. ವಿಶೇಷವೆಂದರೆ ಹಿಂದೂ ಯುವಕನೊಬ್ಬ ಮುಸ್ಲಿಂ ಬಾಲಕಿಗೆ ಅಂಗಾಂಗ ದಾನ ಮಾಡಿ ಜೀವ ಉಳಿಸಿದ್ದು, ಈ ಧರ್ಮಾತೀತ ನಡೆಗೆ ಶ್ಲಾಘನೆ ವ್ಯಕ್ತವಾಗಿದೆ. ಬಾಲಕಿ ತಂದೆ ದಾನಿಗೆ ಹಾಗೂ ಕಸಿ ಚಿಕಿತ್ಸೆಗೆ ಸಂಪರ್ಕ ಸೇತುವೆಯಾಗಿದ್ದ ಡಿಕೆಎಂಎಸ್ ಸಂಸ್ಥೆಗೆ ಧನ್ಯವಾದ ತಿಳಿಸಿದರು.