Advertisement

ಎಲ್ಲಾ ಧರ್ಮ-ಜಾತಿ ಒಂದಾಗಬೇಕು: ಗೌಡ

11:34 AM Jan 13, 2017 | |

ಬೆಂಗಳೂರು: ದೇಶದಲ್ಲಿರುವ ಸಮಸ್ಯೆಗಳಿಂದಾಗಿಯೇ ದೇಶದ ಭವಿಷ್ಯ ಕವಲು ಹೊಡೆಯುತ್ತಿದ್ದು, ಒಂದೇ ತಾಯಿಯ ಮಕ್ಕಳಾಗಿ ಜೀವಿಸಬೇಕಿರುವವರಲ್ಲಿ ದ್ವೇಷಗಳು ಹುಟ್ಟಿಕೊಂಡಿವೆ. ದೇಶದಲ್ಲಿ ಸುಖ ಶಾಂತಿ ನೆಲೆಸಬೇಕಾದರೆ ಎಲ್ಲಾ ಧರ್ಮ-ಜಾತಿಗಳು ಒಂದಾಗಬೇಕು ಎಂದು ಮಾಜಿ ಪ್ರಧಾನಮಂತ್ರಿ ಎಚ್‌.ಡಿ. ದೇವೇಗೌಡ ಹೇಳಿದ್ದಾರೆ. ಗುರುವಾರ ಕೆಂಗೇರಿ- ಉತ್ತರಹಳ್ಳಿ ಮುಖ್ಯರಸ್ತೆಯ ಬಿಜಿಎಸ್‌ ಆಸ್ಪತ್ರೆ ಸಭಾಂಗಣದಲ್ಲಿ ನಡೆದ ಬಿಜಿಎಸ್‌ ಸಂಸ್ಥಾಪನಾ ದಿನ ಮತ್ತು ಬಿಜಿಎಸ್‌ ಉತ್ಸವ-2017ರಲ್ಲಿ ಭಾಗವಹಿಸಿ ಅವರು ಮಾತನಾಡಿದರು.

Advertisement

ಬಾಲಗಂಗಾಧರ ನಾಥ ಸ್ವಾಮೀಜಿ ಅವರು ಬಹಳ ಕಷ್ಟದ ಹಾದಿಯಲ್ಲಿ ನಡೆದು ಬಂದಿದ್ದರೂ ಕೊನೆಯ ದಿನದವರೆಗೂ ಹೋರಾಡಿ ಸಮಾಜಕ್ಕೆ ಆಸ್ತಿ ಮಾಡಿಟ್ಟಿದ್ದಾರೆ. ಅವರ ಪರಿಶ್ರಮದಿಂದ ಹುಟ್ಟಿದ ಶಿಕ್ಷಣ ಸಂಸ್ಥೆಗಳು ಹಾಗೂ ಆಸ್ಪತ್ರೆಗಳು ವಿಶ್ವಮಟ್ಟದಲ್ಲಿ ಖ್ಯಾತಿ ಪಡೆದಿವೆ. ಅದನ್ನು ಜೋಪಾನವಾಗಿ ಕಾಡಪಾಡುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದರು. 

ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಅನಂತಕುಮಾರ್‌, ಬಾಲಗಂಗಾಧರನಾಥ ಸ್ವಾಮೀಜಿ ಅವರು ಬಡವರಿಗೆ, ನೊಂದವರಿಗೆ ಅನ್ನ, ಅಕ್ಷರ ದಾಸೋಹದ ಮೂಲಕ “ದರಿದ್ರ ನಾರಾಯಣೋ ಹರಿಹೀಃ’ ಎಂಬ ಮಾತನ್ನು ಅಕ್ಷರಶಃ ಆಚರಣೆಗೆ ತಂದಿದ್ದಾರೆ. ಬಡವರಲ್ಲಿ ದೇವರನ್ನು ಕಂಡ, ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯವನ್ನು ಗ್ರಾಮೀಣ ಭಾಗಕ್ಕೆ ಕೊಂಡೊಯ್ದು ದೇಶದ 1.25 ಲಕ್ಷ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದ ಶ್ರೀಗಳು ನಮ್ಮೆಲ್ಲರಿಗೂ ಸ್ಫೂರ್ತಿ ಆಗಬೇಕು ಎಂದು ಹೇಳಿದರು.

ಆಶೀರ್ವಚನ ನೀಡಿ ಮಾತನಾಡಿದ ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ನಿರ್ಮಾಲಾನಂದನಾಥ ಸ್ವಾಮೀಜಿ, ಸ್ವಾಮಿ ವಿವೇಕಾನಂದ ಆದರ್ಶಗಳನ್ನು ಮೈಗೂಡಿಸಿಕೊಂಡಿದ್ದ ಬಾಲಗಂಗಾಧರನಾಥ ಶ್ರೀಗಳಿಗೂ ಮತ್ತು ಸ್ವಾಮಿ ವಿವೇಕಾನಂದರಿಗೂ ಸಾಕಷ್ಟು ಸಾಮ್ಯತೆ ಇದೆ. ವಿವೇಕಾನಂದರು 39 ವರ್ಷಗಳ ಬದುಕಿದ್ದರು, ಆದಿಶ್ರೀಗಳು 39 ವರ್ಷ ಧರ್ಮಾಧಿಕಾರಿಯಾಗಿದ್ದರು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ನಟ ಪುನೀತ್‌ ರಾಜಕುಮಾರ್‌, ಬಿಜಿಎಸ್‌ ಗ್ರೂಪ್ಸ್‌ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶನಾಥ ಸ್ವಾಮೀಜಿ, ಶಾಸಕ ಎಸ್‌.ಟಿ, ಸೋಮಶೇಖರ್‌ ಹಾಜರಿದ್ದರು.

ಕಾವೇರಿ ಸಮಸ್ಯೆಗೆ ಸ್ಪಂದಿಸಿ
ಕಾವೇರಿ ವಿಷಯದಲ್ಲಿ ರಾಜ್ಯಕ್ಕೆ ಪ್ರತಿ ಬಾರಿಯೂ ಅನ್ಯಾಯವಾಗುತ್ತಿದೆ. ನಾನೊಬ್ಬ ರೈತನ ಮಗನಾಗಿ ಕೇಳಿಕೊಳ್ಳುತ್ತಿದ್ದೇನೆ. ಕಾವೇರಿ ಸಮಸ್ಯೆಗಳನ್ನು ಬಗೆಹರಿಸಲು ಕೇಂದ್ರ ಸಚಿವರಾದ ಅನಂತಕುಮಾರ್‌ ಅವರು ಕೈಜೋಡಿಸಬೇಕು. ಕಾವೇರಿ ಸಮಸ್ಯೆ ಹಾಗೂ ರಾಜ್ಯದ ಸಮಸ್ಯೆಗೆ ಸ್ಪಂದಿಸಬೇಕು.
-ಎಚ್‌.ಡಿ. ದೇವೇಗೌಡ, ಮಾಜಿ ಪ್ರಧಾನಿ

Advertisement
Advertisement

Udayavani is now on Telegram. Click here to join our channel and stay updated with the latest news.

Next