ಬಾದಾಮಿ (ಬಾಗಲಕೋಟೆ): ನಿಮಗೆ ಕಾಳಜಿ ಇದ್ದರೆ ವೀರಶೈವ-ಲಿಂಗಾಯತ ಧರ್ಮ ಮಾಡಿ. ಆಗದಿದ್ದರೆ ಧರ್ಮ ಒಡೆಯುವ ಕೆಲಸ ಮಾಡಬೇಡಿ. ಒಂದು ವೇಳೆ ಧರ್ಮ ಒಡೆಯುವ ಕೆಲಸ ಮಾಡಿದರೆ ಇಡೀ ರಾಜ್ಯದ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಹೋರಾಟ ನಡೆಸುತ್ತೇವೆ…
-ಇದು ಬಾದಾಮಿ ತಾಲೂಕು ಶಿವ ಯೋಗ ಮಂದಿರದಲ್ಲಿ ಮಂಗಳವಾರ ಸೇರಿದ್ದ ವೀರಶೈವ ಮಠಾಧೀಶರು ಹಾಗೂ ವಿವಿಧ ಜಗದ್ಗುರುಗಳು ಕೈಗೊಂಡ ಪ್ರಮುಖ ನಿರ್ಣಯ. ಬಾಲೆ ಹೊಸೂರಿನ ದಿಂಗಾಲೇಶ್ವರ ಶ್ರೀ, ಕಾಶಿ ಪೀಠದ ಜಗದ್ಗುರು
ಡಾ| ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ತಜ್ಞರು ನೀಡಿದ ವರದಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡಬಾರದು. ಈ ಕುರಿತು ಮಾ. 14ರಂದು ನಡೆಯುವ ಸಂಪುಟ ಸಭೆ ಯಲ್ಲಿ ತಜ್ಞರ ಸಮಿತಿ ವರದಿ ತಿರಸ್ಕರಿಸ ಬೇಕು. ಸಂಪುಟ ಸಭೆಗೂ ಮುನ್ನ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಮಾಡುತ್ತೇವೆ ಎಂದರು.
ಸಿಎಂ ಅವರನ್ನು ಭೇಟಿ ಮಾಡಿ ಲಿಂಗಾಯತ ಪ್ರತ್ಯೇಕ ಧರ್ಮ ಹೆಸರಿನಲ್ಲಿ ಧರ್ಮ ಒಡೆಯಬೇಡಿ ಎಂದು ಮನವಿ ಮಾಡುತ್ತೇವೆ. ಅದಕ್ಕೂ ಸ್ಪಂದಿಸ ದಿದ್ದರೆ ರಾಜ್ಯದ ಎಲ್ಲ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಕಾಂಗ್ರೆಸ್ ಸರಕಾರ, ಲಿಂಗಾಯತ ಪ್ರತ್ಯೇಕ ಧರ್ಮ ಮಾಡುತ್ತೇವೆ ಎಂದು ಹೊರಟಿರುವ ರಾಜಕೀಯ ಮುಖಂಡರು, ಸ್ವಾಮೀಜಿ ಗಳ ವಿರುದ್ಧ ಹೋರಾಟ ನಡೆಸುತ್ತೇವೆ ಎಂದರು.
ಗದಗ ತೋಂಟದಾರ್ಯ ಮಠದ ಡಾ| ಸಿದ್ದಲಿಂಗ ಶ್ರೀಗಳು, ವೀರಶೈವ ಹೆಸರಿನ ಮಠದ ಆಸ್ತಿ ಮಾರಾಟ ಮಾಡಿದ್ದಾರೆ. ತೋಂಟದ ಶ್ರೀ ಹಾಗೂ ಪ್ರತ್ಯೇಕ ಲಿಂಗಾಯತ ಧರ್ಮ ಹೆಸರಿ ನಲ್ಲಿ ವೀರಶೈವ ಅವಹೇಳನ ಮಾಡು ತ್ತಿರುವ ಮಾತೆ ಮಹಾದೇವಿ ವಿರುದ್ಧ ಕಾನೂನು ಹೋರಾಟ ನಡೆಸಲಾಗು ವುದು ಎಂದು ಎಚ್ಚರಿಕೆ ನೀಡಿದರು.
ನಾವು ಕಾಂಗ್ರೆಸ್ ವಿರೋಧಿಗಳಲ್ಲ. ಹಾಗೆಯೇ ಬಿಜೆಪಿ ಅಭಿಮಾನಿಗಳೂ ಅಲ್ಲ. ಯಾವುದೇ ಪಕ್ಷದ ಚಿಹ್ನೆ ಹಿಡಿದು ಕೊಂಡು ನಮ್ಮ ಹೋರಾಟದಲ್ಲಿ ಭಾಗವಹಿಸಲು ಬಂದರೆ ಅವಕಾಶ ಕೊಡಲ್ಲ. ಸರಕಾರಕ್ಕೆ ನಿಜವಾಗಿಯೂ ಕಾಳಜಿ ಇದ್ದರೆ ವೀರಶೈವ ಲಿಂಗಾಯತ ಧರ್ಮ ಮಾಡಲಿ. ಅಲ್ಪಸಂಖ್ಯಾಕ ಸ್ಥಾನ ಮಾನವೂ ಕೊಡಲಿ. ಅದನ್ನು ಬಿಟ್ಟು ವೀರಶೈವ ಮತ್ತು ಲಿಂಗಾಯತ ಎಂದು ಧರ್ಮವನ್ನು ಒಡೆದರೆ ಸಹಿಸಲು ಸಾಧ್ಯವಿಲ್ಲ. ವೀರಶೈವ ಲಿಂಗಾಯತರಿಗೆ ಅಲ್ಪಸಂಖ್ಯಾಕ ಸ್ಥಾನಮಾನ ನೀಡಲು ನಮ್ಮ ವಿರೋಧವಿಲ್ಲ. ಧರ್ಮ ಒಡೆಯುವ ಕೆಟ್ಟ ಸಾಹಸಕ್ಕೆ ಹೊರ ಟಿರುವುದಕ್ಕೆ ನಮ್ಮ ವಿರೋಧವಿದೆ ಎಂದು ಸ್ಪಷ್ಟಪಡಿಸಿದರು.
ಇಂದು ಸಂಪುಟ ಸಭೆಯಲ್ಲಿ ಪ್ರತ್ಯೇಕ ಧರ್ಮ ಚರ್ಚೆ
ಲಿಂಗಾಯತ ಸ್ವತಂತ್ರ ಧರ್ಮ ವಿಚಾರವಾಗಿ ಬುಧವಾರ ನಡೆಯುವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಮಂಗಳವಾರ ಹಾವೇರಿಯ ಹೆಲಿಪ್ಯಾಡ್‌ನಲ್ಲಿ ಪತ್ರಕರ್ತರ ಜತೆ ಮಾತನಾಡಿದ ಅವರು, ನ್ಯಾ| ನಾಗಮೋಹನ ದಾಸ್ ವರದಿ ಕೊಟ್ಟಿದ್ದಾರೆ. ಹಿಂದಿನ ಸಭೆಯಲ್ಲಿ ಈ ಬಗೆಗಿನ ಚರ್ಚೆ ಅಪೂರ್ಣವಾಗಿದೆ. ಬುಧವಾರದ ಸಭೆಯಲ್ಲಿ ಈ ಬಗ್ಗೆ ಸಮಗ್ರವಾಗಿ ಚರ್ಚಿಸಲಾಗುವುದು ಎಂದರು.
ಸಂಪುಟ ಸಭೆ ಬಳಿಕ ಮುಂದಿನ ನಿರ್ಧಾರ
ಬಳ್ಳಾರಿ, ಮಾ. 13: ಪ್ರತ್ಯೇಕ ಲಿಂಗಾಯತ ಧರ್ಮ ಮಾನ್ಯತೆ ವಿಚಾರವಾಗಿ ಬುಧವಾರದ ಸಂಪುಟ ಸಭೆಯ ನಿರ್ಣಯ ಆಧರಿಸಿ ಮುಂದಿನ ನಿರ್ಧಾರ ಪ್ರಕಟಿಸುತ್ತೇವೆ ಎಂದು ಕೂಡಲ ಸಂಗಮ ಬಸವಧರ್ಮ ಪೀಠದ ಡಾ| ಮಾತೆ ಮಹಾದೇವಿ ಹೇಳಿದರು.