ಬೆಂಗಳೂರು: ಕಾಂಗ್ರೆಸ್ ಪಕ್ಷ ಚುನಾವಣಾ ತಂತ್ರಗಾರಿಕೆಯಲ್ಲಿ ಧರ್ಮವನ್ನು ಒಡೆದು ಮತಗಳಿಸುವ ವಾಮಮಾರ್ಗ ಅನುಸರಿಸುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಡಾ.ಸಂಬೀತ್ ಪಾತ್ರ ಆರೋಪಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಾಸಕ ಹಾಗೂ ಕಾಂಗ್ರೆಸ್‌ನ ಅಭ್ಯರ್ಥಿ ಜಮೀರ್ ಅಹಮ್ಮದ್ ಖಾನ್ ಮುಸ್ಲಿಂ ಸಮುದಾಯದ ಮುಖಂಡರ ಸಭೆ ಕರೆದು ಬೆದರಿಕೆ ಹಾಕಿದ್ದಾರೆ. ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಮುಸ್ಲಿಮರು ಕಾಂಗ್ರೆಸ್‌ಗೆ ಮತ ಹಾಕಬೇಕು ಎಂದಿದ್ದಾರೆ. ಚುನಾವಣೆಯಲ್ಲಿ ಕಾಂಗ್ರೆಸ್ ರಾಜಕೀಯ ಯುದ್ಧ ಮಾಡುವುದನ್ನು ಬಿಟ್ಟು ಧರ್ಮ ಒಡೆಯುವ ಯುದ್ಧ ಮಾಡುತ್ತಿದ್ದಾರೆ ಎಂದು ದೂರಿದರು.
ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಪ್ರಾನ್ಸಿಸ್ ಅವರು ದೇವಸ್ಥಾನದ ಮೇಲಿರುವ ಕೇಸರಿ ಬಾವುಟ ತೆರವಿಗೆ ಆದೇಶ ನೀಡಿದ್ದಾರೆ. ಚುನಾವಣೆ, ಬಿಜೆಪಿ ಹಾಗೂ ಕೇಸರಿ ಬಾವುಟಕ್ಕೆ ಯಾವ ಸಂಬಂಧ ಇಲ್ಲ. ದೇವಸ್ಥಾನಗಳ ಮೇಲೆ ತಲೆಮಾರುಗಳಿಂದಲೂ ಕೇಸರಿ ಬಾವುಟ ಹಾರಾಡುತ್ತಿದೆ. ಏಕಾಏಕಿ ಇದನ್ನು ತೆರವು ಗೊಳಿಸಲು ನೀಡಿರುವ ಆದೇಶ ರಾಜಕೀಯ ಕುಮ್ಮಕ್ಕಿನಿಂದ ಕೂಡಿದೆ ಎಂದು ಆರೋಪಿಸಿದರು.
ನಾಡಿನ ಶ್ರೇಷ್ಠ ಕಲೆಗಳಲ್ಲಿ ಒಂದಾದ ಕರಾವಳಿಯ ಯಕ್ಷಗಾನ ಕಾರ್ಯಕ್ರಮವನ್ನು ರದ್ದುಪಡಿಸಿ ಆದೇಶ ಹೊರಡಿಸಿದ್ದಾರೆ. ಯಕ್ಷಗಾನ ಕರಾವಳಿ ಮತ್ತು ಕರ್ನಾಟಕದ ಸಂಪ್ರದಾಯ, ಸಂಸ್ಕೃತಿಯ ಪ್ರತಿಬಿಂಬವಾಗಿದೆ. ಅದನ್ನು ರದ್ದು ಪಡಿಸಿದ್ದು ಏಕೆ ಎಂಬುದಕ್ಕೆ ಕಾಂಗ್ರೆಸ್ ಸರ್ಕಾರ ಉತ್ತರ ನೀಡಬೇಕು ಎಂದು ಆಗ್ರಹಿಸಿದರು. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ದೇಶದ ಜನರನ್ನು ನಂಬುವುದಿಲ್ಲ, ಪ್ರಧಾನಿಯವರನ್ನು ನಂಬುತ್ತಿಲ್ಲ.
ಕೇಂಬ್ರಿಡ್ಜ್ ಅನಾಲಿಟಿಕಾ ಸಂಸ್ಥೆ ನೀಡುವ ಸುಳ್ಳು ಮಾಹಿತಿಯನ್ನು ಮಾತ್ರ ನಂಬುತ್ತಿದ್ದಾರೆ. ಕರ್ನಾಟಕಕ್ಕೆ ಮೋದಿ ಸರ್ಕಾರ ನೀಡಿರುವ ಅನುದಾನ ಮತ್ತು ಯೋಜನೆಯನ್ನು ತಿಳಿಯಲು ರಾಹುಲ್‌ಗಾಂಧಿಯವರು ಮೋದಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಲಿ ಎಂದು ಸಲಹೆ ನೀಡಿದರು. ಬಿಜೆಪಿ ವಕ್ತಾರ ಅಶ್ವತ್ಥ್ ನಾರಾಯಣ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್, ಸಹ ವಕ್ತಾರೆ ಮಂಜುಳಾ, ಬಿಜೆಪಿ ಮುಖಂಡ ಅನ್ವರ್ ಮಾಣಿಪ್ಪಾಡಿ ಸುದ್ದಿಗೋಷ್ಠಿಯಲ್ಲಿದ್ದರು.
ರಾಜ್ಯ ಬಿಜೆಪಿ ಕರ್ನಾಟಕದ ಜನತೆಯ ಸಹಕಾರದೊಂದಿಗೆ ಪೂರ್ಣ ಬಹುಮತ ಪಡೆದು ಸ್ವಂತ ಬಲದಲ್ಲಿ ಸರ್ಕಾರ ರಚನೆ ಮಾಡಲಿದೆ. ಕಾಂಗ್ರೆಸ್, ಜೆಡಿಎಸ್, ಪಿಎಫ್ಐ ಹಾಗೂ ಎಸ್‌ಡಿಪಿಐ ಮೊದಲಾದ ಪಕ್ಷಗಳು ಬೇರೆ ಪಕ್ಷಗಳ ಸಹಾಯ ಕೇಳಿತ್ತಿವೆ. ಅಭಿವೃದ್ಧಿ ಮತ್ತು ವಿಕಾಸದ ಮಾನದಂಡದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ.
-ಡಾ.ಸಂಬೀತ್ ಪಾತ್ರ, ಬಿಜೆಪಿ ರಾಷ್ಟ್ರೀಯ ವಕ್ತಾರ