Advertisement
ವೇದದಂತಹ ಯಾವುದೇ ಒಂದು ಅಭಿಜಾತ ಪಠ್ಯ ಯಾರಿಂದ ಹೇಗೆ ರಚಿತವಾಯಿತು? ಅವತೀರ್ಣಗೊಂಡಿತು? ಅದು authorless ರಚನೆಯೇ? ಅಂದರೆ ದೈವಿಕ ರಚನೆಯೇ ಅಥವಾ ರಥದ ನಿರ್ಮಾಣದ ಹಿಂದೆ ಬಡಗಿಯೊಬ್ಬ ಇರುವ ಹಾಗೆ ಅದರ ಹಿಂದೆ ಒಬ್ಬ author ಇದ್ದಾನೆಯೇ? ಎಂಬುದು ಆ ಪಠ್ಯದ ಶ್ರೇಷ್ಠತೆ, ಗಂಭೀರತೆ ಮತ್ತು ಅದು ಪ್ರತಿಪಾದಿಸುವ ವಿಶ್ವಾತ್ಮಕ ಮಾನವೀಯ ಮೌಲ್ಯಗಳ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುತ್ತದೆಯೇ?
Related Articles
Advertisement
ಸಂಸ್ಕೃತ ಅರ್ಥವಾಗುವರಿಗೆ ಸಂಪೂರ್ಣವಾಗಿ ಸಂಸ್ಕೃತದಲ್ಲೆ ನಡೆದ ಸಮ್ಮೇಳನದ ಕಾರ್ಯಕಲಾಪಗಳನ್ನು ಸಂಸ್ಕೃತದಲ್ಲಿ ಆಲಿಸಿ ಅರ್ಥಮಾಡಿಕೊಳ್ಳುವ ಅಪೂರ್ವ ಅವಕಾಶ ಮತ್ತು ಸವಾಲು ಅದಾಗಿತ್ತು.
ಕುತೂಹಲದ ವಿಷಯವೆಂದರೆ ಉದ್ಘಾಟನಾ ಸಮಾರಂಭದಲ್ಲಿ ಭಾಷಣ ಮಾಡಿದ ನಾಲ್ವರು ವಿದ್ವಾಂಸರಲ್ಲಿ ಮೂವರು, ವೇದಗಳು ಅಪೌರುಷೇಯ ಎಂಬುದನ್ನು ಪ್ರಸ್ತಾಪಿಸಿದರು. ಹತ್ತಾರು ಶತಮಾನಗಳ ಹಿಂದೆ ಮೌಖೀಕವಾಗಿ ರಚಿತವಾದ ವೇದಗಳನ್ನು ಕಿವಿಯ ಮೂಲಕ ಕೇಳಿಸಿಕೊಂಡೇ (ಶುೃತಿ) ಇಂದಿಗೂ ಅವುಗಳ ಶಬ್ದ, ಧ್ವನಿಮಾ (phoneme), ಉಚ್ಚಾರಣೆಯ ಏರಿಳಿತ ಮತ್ತು ಮೂಲಾರ್ಥ ಸ್ವಲ್ಪವೂ ಬದಲಾಗದಂತೆ ವಿದ್ವಾಂಸರು ಅವುಗಳನ್ನು ಸಂರಕ್ಷಿಸಿಕೊಂಡು ಬಂದ ರೀತಿ ನಿಜವಾಗಿಯೂ ಅದ್ಭುತ ಅನ್ನಿಸುತ್ತದೆ. ವಿಶ್ವದ ಬೇರೆ ಯಾವ ಭಾಗದಲ್ಲೂ ಈ ರೀತಿಯಾಗಿ ಪ್ರಾಚೀನ ಜ್ಞಾನನಿಧಿಯನ್ನು ಸುಮಾರು ಒಂದೂವರೆ ಸಾವಿರ ವರ್ಷಗಳವರೆಗೆ ಲಿಪಿ ರೂಪಕ್ಕೆ ಇಳಿಸದೆ ಉಳಿಸಿಕೊಂಡುಬಂದ ಪುರಾವೆ ಇಲ್ಲ. ವಿದ್ವಾಂಸರ ಪ್ರಕಾರ ಈಗ ಲಭ್ಯವಿರುವ ಎಲ್ಲ ಲಿಖೀತ ಆವೃತ್ತಿಗಳು ಹೆಚ್ಚೆಂದರೆ ಐದು ನೂರು ವರ್ಷಗಳಷ್ಟು ಹಳೆಯದಾದ ಹಸ್ತಪ್ರತಿಗಳು(manuscripts).
ಇಂತಹ ವೇದಗಳನ್ನು ವೈಜ್ಞಾನಿಕವಾಗಿ, ಭಾಷಾವಿಜ್ಞಾನದ ಹಾಗೂ ಸಾಂಸ್ಕೃತಿಕ, ಮಾನವ ಶಾಸ್ತ್ರೀಯ ನೆಲೆಯಲ್ಲಿ ಅಧ್ಯಯನ ಮಾಡಿರುವ ಮ್ಯಾಕ್ಸ್‌ಮುಲ್ಲರ್, ಪ್ಯಾಟ್ರಿಕ್ ಒಲಿವೆಲ್, ರೊç ಪೆರೆಟ್, ಮೋನಿಯರ್ ವಿಲಿಯಮ್ಸ್, ರಾಲ್ಫ್ ಗ್ರಿಫಿತ್ ಮೊದಲಾದ ಪಾಶ್ಚಾತ್ಯ ವಿದ್ವಾಂಸರು ಕೂಡ ವೇದಗಳ ಪ್ರಾಚೀನತೆ, ಅವುಗಳಲ್ಲಿ ಚರ್ಚಿಸಲಾಗಿರುವ ವಿಷಯಗಳ ಗಂಭೀರತೆ ಹಾಗೂ ಭಾರತೀಯ ತತ್ವಶಾಸ್ತ್ರಕ್ಕೆ ತಳಹದಿ ಎನ್ನಲಾಗಿರುವ ಮೂಲತತ್ವಗಳ ಬಗ್ಗೆ ಬೆರಗಾಗಿದ್ದಾರೆ. ಅವುಗಳು ಪೌರುಷೇಯವೋ, (ಪುರುಷನೊಬ್ಬನಿಂದ/ ಹಲವರಿಂದ ಬರೆಯಲ್ಪಟ್ಟಧ್ದೋ?) ಅಥವಾ ಅಪೌರುಷೇಯವೋ (ದೈವಕೃತವೋ?) ಎಂಬ ಬಗ್ಗೆಯೂ ಚರ್ಚಿಸಿದ್ದಾರೆ.
ತ್ರಿದಿನ ಸಮ್ಮೇಳನದಲ್ಲಿ ಭಾಷಣ ಮಾಡುತ್ತ ಸಮಕಾಲೀನ ಭಾರತದ ಓರ್ವ ಅತ್ಯಂತ ಪ್ರಮುಖ ಶುೃತಿವೇತ್ತರು ಹಾಗೂ ಮಹಾನ್ ವಿದ್ವಾಂಸರಾಗಿರುವ ಶ್ರೀ ವಿಶ್ವೇಶತೀರ್ಥರು ಅಲ್ಲಿ ನೆರೆದಿದ್ದ ವೇದ ವಾಗ್ಮ್ಯ ವಿದ್ವಾಂಸರ ಹಾಗೂ ವಿದ್ಯಾರ್ಥಿಗಳ ಮುಖವಾಣಿಯಾಗಿ ಹೇಳಿದರು: “ವೇದಗಳು ಅಪೌರುಷೇಯ, ಕಣ್ಣಿಗೆ ಕಾಣಿಸದ ದೇವರು ಜಗತ್ತಿನ ಸೃಷ್ಟಿಕರ್ತ ಎಂದು ಎಲ್ಲ ಮತ ಧರ್ಮಗಳು ಒಪ್ಪುವಾಗ ಪುರುಷಕೃತವಲ್ಲದ ಗ್ರಂಥ ರಚನೆಯನ್ನು ಒಪ್ಪಲು ಏಕೆ ಕಷ್ಟ? ಅಪೌರುಷೇಯ ಎನ್ನುವುದು ಅವೈಜ್ಞಾನಿಕ ವಾಗುವುದು ಹೇಗೆ? ಸ್ವರ್ಗ-ನರಕ, ಪಾಪ-ಪುಣ್ಯ, ಧರ್ಮ-ಅಧರ್ಮಗಳನ್ನು ನಂಬಿ ಒಪ್ಪಿದ ಮೇಲೆ ವೇದಗಳೂ ಅಪೌರುಷೇಯ ಎಂದು ಒಪ್ಪಬೇಕಲ್ಲವೆ? ಹೀಗಾಗಿ ಅಪೌರುಷೇಯ ವಾದ ವೇದಗಳಿಂದಲೇ ಧರ್ಮ-ಅಧರ್ಮ ತೀರ್ಮಾನ ಆಗಬೇಕು. ಹಿಂದೂ ಧರ್ಮದ ಮೂಲವೇ ವೇದ. ವೇದಗಳು ಜಗತ್ತೆಂಬ ವೃಕ್ಷದ ಎಲೆಗಳು. ಎಲೆಗಳಿಲ್ಲದ ಮರ ನಿರ್ಜೀವವಾಗಿರುವಂತೆ ವೇದಗಳ ಅರಿವು ಇಲ್ಲದ ಜೀವನ ಶೂನ್ಯ. ಆದ್ದರಿಂದ ಎಲ್ಲರಿಗೂ ವೇದವಿದ್ಯೆಯ ಜ್ಞಾನ ಅಗತ್ಯ.’
ಅವರ ಮಾತುಗಳನ್ನು ಆಲಿಸುತ್ತ ಟಿಪ್ಪಣಿ ಮಾಡಿಕೊಳ್ಳುತ್ತಿದ್ದ ನನ್ನನ್ನು ಕಾಡಿದ ಕೆಲವು ತತ್ವಶಾಸ್ತ್ರೀಯ ಅನುಮಾನಗಳನ್ನು ಜ್ಞಾನಾಸಕ್ತರ ಮುಂದೆ ಹಂಚುಕೊಳ್ಳಲು ಬಯಸುತ್ತೇನೆ. ಮೌಖೀಕವಾಗಿ ರಚಿಸಲ್ಪಟ್ಟು ನೂರಾರು ವರ್ಷಗಳ ಕಾಲ ತಲೆಮಾರಿನಿಂದ ತಲೆಮಾರಿಗೆ ಪ್ರಸಾರವಾಗುತ್ತ ಬಂದ ವೇದಗಳನ್ನು ಬಡಗಿಯೊಬ್ಬ ರಥವನ್ನು ನಿರ್ಮಿಸುವ ಹಾಗೆ ಋಷಿಗಳು ಶುೃತಿ ಪಠ್ಯಗಳನ್ನು ದೈವಿಕ ಸೃಜನಶೀಲತೆಯಲ್ಲಿ ರಚಿಸಿದರೆಂದು ಶುೃತಿಗಳ ಪಠ್ಯಗಳೇ ಹೇಳುತ್ತವಲ್ಲ ಎಂದು ವಾದಿಸಿದವರೂ ಇದ್ದಾರೆ. ಹಾಗೆಯೇ, ಶುೃತಿ ಪಾರಮ್ಯವನ್ನು ಭಾರತೀಯ/ ಹಿಂದೂ ಧರ್ಮದ ಎಲ್ಲ ಆರು ಶಾಖೆಗಳು ಒಪ್ಪುತ್ತವಾದರೂ, ಈ ಶಾಖೆಗಳ ಹಲವು ವಿದ್ವಾಂಸರು, ಚಾರ್ವಾಕರು ಅವುಗಳು ಅಪೌರುಷೇಯ ಎಂದು ಒಪ್ಪಲು ನಿರಾಕರಿಸುತ್ತಾರೆ ಎಂಬುದೂ ಗಮನಿಸಬೇಕಾದ ವಿಷಯ. ರೊç ಪೆರಟ್‌ನ ಪ್ರಕಾರ, ಪ್ರಾಚೀನ ಹಾಗೂ ಮಧ್ಯಯುಗೀಯ ಹಿಂದೂ ತತ್ವಶಾಸ್ತ್ರಜ್ಞರು ಕೂಡ ವೇದಗಳು ಡಿವಾಯ್ನ ಎನ್ನುವುದನ್ನು ಒಪ್ಪುವುದಿಲ್ಲ.
ಈ ಪೌರುಷೇಯ ಅಪೌರುಷೇಯ ಎಂಬ ವಾದ, ಪ್ರತಿ-ವಾದ, ವಾಗ್ವಾದ, ವಿವಾದಗಳನ್ನು ಗಮನಿಸುವಾಗ ಭಾರತೀಯ ತತ್ವಶಾಸ್ತ್ರದಲ್ಲಿ, ಅದರಲ್ಲಿರುವ ಸಾರ್ವಕಾಲಿಕ ಧೀಮಂತ ಚಿಂತನೆಗಾಗಿ ಆಸಕ್ತರಾಗಿರುವ ನನ್ನಂತಹ ಪಾಮರ ಜಿಜ್ಞಾಸುವನ್ನು ಕಾಡುವ ಪ್ರಶ್ನೆಗಳು ಇವು…
ವೇದದಂತಹ ಯಾವುದೇ ಒಂದು ಅಭಿಜಾತ (classical)ಪಠ್ಯ ಯಾರಿಂದ ಹೇಗೆ ರಚಿತವಾಯಿತು? ಅವತೀರ್ಣಗೊಂಡಿತು? ಅದು authorless ರಚನೆಯೇ? ಅಂದರೆ ದೈವಿಕ ರಚನೆಯೇ ಅಥವಾ ರಥದ ನಿರ್ಮಾಣದ ಹಿಂದೆ ಬಡಗಿಯೊಬ್ಬ ಇರುವ ಹಾಗೆ ಅದರ ಹಿಂದೆ ಒಬ್ಬ author ಇದ್ದಾನೆಯೇ? ಎಂಬುದು ಆ ಪಠ್ಯದ ಶ್ರೇಷ್ಠತೆ, ಗಂಭೀರತೆ ಮತ್ತು ಅದು ಪ್ರತಿಪಾದಿಸುವ ವಿಶ್ವಾತ್ಮಕ ಮಾನವೀಯ ಮೌಲ್ಯಗಳ ಮೇಲೆ ಯಾವುದೇ ರೀತಿಯ ಪರಿ ಣಾಮ ಬೀರುತ್ತದೆಯೇ? ಕೆಲವು ಮೀಮಾಂಸಕಾರರು ಹೇಳುವ ಹಾಗೆ ಯಾವುದೇ ಶುೃತಿಯ, ಕೃತಿಯ ಅರ್ಥ (meaning) ಅದರ ಸೃಷ್ಟಿಕರ್ತ ಯಾರು ಎಂಬುದಕ್ಕಿಂತ ತುಂಬ ತುಂಬ ಮುಖ್ಯವಲ್ಲವೇ? ಬಹುಶುೃತ ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯರು ಕೂಡ ಮೊನ್ನೆಯ ಸಮ್ಮೇಳನದಲ್ಲಿ ವೇದಾಧ್ಯಯನದ ಜೊತೆಗೆ ವೇದಾರ್ಥ ಚಿಂತನೆಗೆ ಮುಂದಾಗಬೇಕೆಂದು ಕರೆನೀಡಿದ್ದು ಈ ನಿಟ್ಟಿನಲ್ಲಿ ಗಮನಾರ್ಹ ಅನಿಸುತ್ತದೆ.
ಇನ್ನು, ವೇದಗಳಿಂದ ಧರ್ಮ-ಅಧರ್ಮ ತೀರ್ಮಾನ ಆಗಬೇಕು ಎಂಬುದನ್ನು ಒಪ್ಪಿದರೂ ಕೂಡ ಈ ತೀರ್ಮಾನ ಮಾಡುವವರು ಯಾರು? ಎಂಬ ಬಗ್ಗೆ ಮತ್ತೆ ಪ್ರಶ್ನೆಗಳು ಎದ್ದುನಿಲ್ಲುತ್ತವೆ:
ನಾವೋ (ಪಾಂಡವರು)? ನೀವೋ (ಕೌರವರು)? ಪ್ರಜಾಪ್ರಭುತ್ವದಲ್ಲಿ ಮೆಲ್ವರ್ಗದವರೋ? ಅಥವಾ ಕೆಳ ವರ್ಗದವರೋ? ಮೀಸಲಾತಿ ಪಡೆಯುವವರೋ? ಅಥವಾ ಪಡೆಯದವರೋ? ಏಕೆಂದರೆ ಒಂದು ಪವಿತ್ರ ಗ್ರಂಥದ ಪಠ್ಯದ ಅರ್ಥದ ಜೊತೆಗೆ, ಹಲವು ಅರ್ಥ ವಿವರಣೆಗಳೂ (interpretations) ಹುಟ್ಟಿಕೊಳ್ಳುತ್ತವೆ. ಪರಿಣಾಮವಾಗಿ ಮತ್ತೆ ವಾದ, ಪ್ರತಿ-ವಾದ, ವಿವಾದಗಳು ಏಳುತ್ತವೆ.
ಮನುಸ್ಮತಿ, ಭಗವದ್ಗೀತೆ, ರಾಮಾಯಣದ ಬಗ್ಗೆ ಈಗ ಹೀಗಾಗುತ್ತಿದೆ. ಹಲವರ ಅರ್ಥವಿವರಣೆಗಳಲ್ಲಿ ಯಾವುದು ಧರ್ಮ? ಯಾವುದು ಅಧರ್ಮ? ಯಾರು ಪಾಂಡವರು, ಯಾರು ಕೌರವರು? ಎಂದು ನಿರ್ಧಾರವಾಗದೆ, ಅಂತಿಮವಾಗಿ, ಅರ್ಥ ವಿವರಣೆಕಾರರಿಗೆ ಸರಕಾರ ಪೊಲೀಸ್ ರಕ್ಷಣೆ ನೀಡುತ್ತಿರುವುದನ್ನು ನಾವು ನೋಡುತ್ತಿದ್ದೇವೆ.
ಇನ್ನು, ಕೊನೆಯದಾಗಿ ವೇದಗಳ ಜ್ಞಾನ ಇಲ್ಲದವನ ಬದುಕು ಅರ್ಥಹೀನ, ಶೂನ್ಯ ಎನ್ನುವುದನ್ನು ಒಪ್ಪಿಕೊಂಡರೂ ಮತ್ತೆ ಪ್ರಶ್ನೆಗಳು ಎದುರಾಗುತ್ತವೆ: ವೇದಗಳನ್ನು ಓದದ ಈ ಭೂಮಿಯ ಮೇಲಿರುವ ನೂರಾರು ಕೋಟಿ ಜನರ ಪಾಡು ಏನು? ಮನುಸ್ಮತಿಯಲ್ಲಿ ಮನು ಹೇಳುವಂತೆ ಅವರು “ಪಂಕೇ ಗೌರಿವ ಸೀದತಿ’ (ಕೆಸರಿನಲ್ಲಿ ಹೂತು ಹೋಗುವ ಹಸುವಿನ ಹಾಗೆ) ಪಾಡು ಪಡುತ್ತಿರುವುದೇ ಅವರ ವಿಧಿಯೇ?
ಅಥರ್ವವೇದದ ಭಾಗವಾಗಿರುವ ಪ್ರಶ್ನೋಪನಿಷತ್ ಅತ್ಯಂತ ಪ್ರಜಾಸತ್ತಾತ್ಮಕವಾಗಿ ಯಥಾಕಾಮಂ ಪ್ರಶ್ನಾನ್ ಪೃಚ್ಛೇತ (ಎಷ್ಟು ಬೇಕಾದರೂ ಪ್ರಶ್ನೆಗಳನ್ನು ಕೇಳು) ಎನ್ನುತ್ತದೆ. ಈ ಉಪನಿಷತ್ ವಾಕ್ಯದ ಬಲ, ಬೆಂಬಲವು ಭಾರತೀಯ ತತ್ವಶಾಸ್ತ್ರ ಜನರ ಬದುಕು ಅರ್ಥಹೀನವಾಗದಂತೆ , ಅವರ ಬದುಕಿಗೆ ನೀಡಿದ ಬಹಳ ದೊಡ್ಡ ಬೌದ್ಧಿಕ ಬೆಂಬಲ.
ಡಾ| ಬಿ. ಭಾಸ್ಕರ ರಾವ್