ಹರಿಹರ: ಸಮಾಜಕ್ಕೆ ದೈವಿ ಪ್ರಜ್ಞೆಗಿಂತ ಧರ್ಮದ ಪ್ರಜ್ಞೆಯ ಅಗತ್ಯತೆ ಹೆಚ್ಚಾಗಿದೆ ಎಂದು ಚಿತ್ರದುರ್ಗ ಮುರುಘಾ ಮಠದ ಡಾ| ಶಿವಮೂರ್ತಿ ಶರಣರು ಹೇಳಿದರು.
ತಾಲೂಕಿನ ಭಾನುವಳ್ಳಿ ಗ್ರಾಮದಲ್ಲಿ ಬುಧವಾರ ಶ್ರೀ ಲಕ್ಷ್ಮೀನಾರಾಯಣಸ್ವಾಮಿ ಪುನರ್ ನಿರ್ಮಿತ ದೇವಸ್ಥಾನ ಉದ್ಘಾಟನೆ, ಗೋಪುರ ಕಳಸಾರೋಹಣ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡಿದ ಅವರು, ದೈವಿ ಪ್ರಜ್ಞೆ ಸೀಮಿತ ಅವಧಿಯದ್ದಾದರೆ, ಧರ್ಮ ಪ್ರಜ್ಞೆ ಬದುಕಿನುದ್ದಕ್ಕೂ ನಮ್ಮನ್ನು ನೆರಳಿನಂತೆ ಹಿಂಬಾಲಿಸಬೇಕು ಎಂದರು.
12 ಶತಮಾನದಲ್ಲೇ ಶರಣರು ಕಾಯಕವೇ ಕೈಲಾಸ ಎನ್ನುವ ಮೂಲಕ ಕಾಯಕ ತತ್ವಕ್ಕೆ ಆದ್ಯತೆ ನೀಡಿ, ದೈವೀ ಪ್ರಜ್ಞೆಯನ್ನು ಬದಿಗೆ ಸರಿಸಿದರು. ಉಳ್ಳವರು ಶಿವಾಲಯವ ಮಾಡುವರು, ನಾನೇನು ಮಾಡಲಯ್ಯ ಬಡವ, ಎನ್ನ ದೇಹವೆ ದೇಗುಲ ಎಂದು ಬಸವಣ್ಣ ಹೇಳಿದರು. ನಾವು ದುಡಿಮೆಗೆ ಆದ್ಯತೆ ನೀಡಿದರೆ ದಾರಿದ್ರ್ಯ, ಬಡತನ ದೂರವಾಗುತ್ತದೆ. ದುರ್ಬಲರು, ಬಡವರಿಗೆ ದಾಸೋಹ ಮಾಡಿದರೆ ಅದೇ ದೈವ ಸೇವೆ. ದಾಸೋಹದಲ್ಲಿ ದೇವರನ್ನು ಕಾಣುವ ಮನೋಧರ್ಮ ನಾವೆಲ್ಲ ಬೆಳೆಸಿಕೊಳ್ಳಬೇಕು ಎಂದರು.
ವಿಶ್ವಕರ್ಮ ವಡ್ನಾಳ ಸಾವಿತ್ರಪೀಠದ ಅಷ್ಟೋತ್ತರಶತ ಶಂಕರಾತ್ಮನ ಸರಸ್ವತಿ ಶ್ರೀಗಳು ಮಾತನಾಡಿ, ದೇಶಾದ್ಯಂತ ಇರುವ ಪುರಾತನ ದೇವಾಲಯಗಳು ವಿದೇಶಿಗರನ್ನು ಸೆಳೆಯುತ್ತಿವೆ. ಹಂಪಿ, ಅಜಂತಾ, ಎಲ್ಲೋರಾ ಮೊದಲಾದ ದೇವಸ್ಥಾನಗಳ ಶಿಲ್ಪಿಗಳು ವಿಶ್ವಕರ್ಮ ಸಮಾಜದವರಾಗಿದ್ದಾರೆ. ಆ ಶಿಲ್ಪಿಗಳನ್ನು ನಾವು ಸ್ಮರಿಸಬೇಕಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಶಾಸಕ ಎಸ್.ರಾಮಪ್ಪ, ಸಮಿತಿಯ ಶ್ರೀನಿವಾಸರೆಡ್ಡಿ ಬಣಕಾರ್ ಮಾತನಾಡಿದರು. ಸಮಾರಂಭದಲ್ಲಿ ದೇವಾಲಯಕ್ಕೆ ನಿವೇಶನಗಳ ದಾನ ಮಾಡಿದ ದಾನಿಗಳನ್ನು ಹಾಗೂ ಶಿಲ್ಪಿ ರಾಮಾಂಜನೇಯರನ್ನು ಸತ್ಕರಿಸಲಾಯಿತು.
ನಂದಿಗುಡಿ ವೃಷಭಪುರಿ ಮಠದ ಶ್ರೀಗಳು, ಮಾಜಿ ಶಾಸಕ ಬಿ.ಪಿ.ಹರೀಶ್, ಪಿಎಲ್‌ಡಿ ಬ್ಯಾಂಕ್ ಸದಸ್ಯ ಆರ್.ಸಿ.ಪಾಟೀಲ್, ತಾಪಂ ಮಾಜಿ ಸದಸ್ಯೆ ಮಂಜುಳಮ್ಮ, ಎಪಿಎಂಸಿ ಸದಸ್ಯರಾದ ಮಂಜುನಾಥ್ ಪಟೇಲ್, ಆರ್.ಎಚ್. ಮಲ್ಲಿಕಾರ್ಜುನ್, ತಹಶೀಲ್ದಾರ್ ವೆಂಕಟಮ್ಮ, ಸಮಿತಿ ಅಧ್ಯಕ್ಷ ಎಚ್.ಕೆ. ಕನ್ನಪ್ಪ, ಡಿ.ಜಿ. ಪರಮೇಶ್ವರಪ್ಪ, ಡಿ.ಬಿ.ದೊಡ್ಡಬಸಪ್ಪ, ಜೆ. ಕರಿಬಸಪ್ಪ, ಎ. ನಾರಾಯಣಪ್ಪ, ಎಚ್.ಟಿ. ಸ್ವಾಮಿಲಿಂಗಪ್ಪ, ಎಸ್. ನಾರಾಯಣಪ್ಪ, ಬಸವರಾಜಾಚಾರಿ ಇತರರಿದ್ದರು. ಬೆಳಗ್ಗೆ ಶೃಂಗೇರಿ ಶಾರದಾ ಪೀಠದ ವಿದ್ಯಾಭಿನವ ವಿದ್ಯಾರಣ್ಯ ಶ್ರೀಗಳು ಕಳಸಾರೋಹಣ ನೆರವೇರಿಸಿದರು.
ನಾನು ನಾಪತ್ತೆಯಾಗಿಲ್ಲ!
ಪೂರ್ವನಿಯೋಜಿತವಾದ ಬಹುಮುಖ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕಿದ್ದರಿಂದ ನಾನು ಇಂದು ಅಧಿವೇಶನದಲ್ಲಿ ಪಾಲ್ಗೊಳ್ಳಲಾಗಿಲ್ಲ. ಆದರೆ ಕೆಲ ಟಿವಿ ಮಾಧ್ಯಮಗಳು ನಾನು ನಾಪತ್ತೆಯಾಗಿದ್ದೇನೆಂದು ಪ್ರಚಾರ ಮಾಡುತ್ತಿವೆಯಂತೆ. ನಾನು ಕೂಡಲೇ ಬೆಂಗಳೂರಿಗೆ ಹೋಗಬೇಕು. ಇಲ್ಲದಿದ್ದರೆ ಮತ್ತೂಂದು ಕಥೆ ಕಟ್ಟುತ್ತಾರೆ ಎಂದು ಶಾಸಕ ರಾಮಪ್ಪ ಅರ್ಧಕ್ಕೆ ಸಭೆಯಿಂದ ನಿರ್ಗಮಿಸಿದರು.