ಉಪ್ಪುಂದ: ಧರ್ಮದ ಮೂಲ ಉದ್ದೇಶ ಸ್ವ-ಸಹಾಯ. ಧರ್ಮ ವನ್ನು ಅನುಸರಿಸುವುದರಿಂದ ನಮ್ಮ ಆತ್ಮ ಕಲ್ಯಾಣವನ್ನು ಸಾಧ್ಯವಾಗಿಸುತ್ತದೆ. ವ್ಯಕ್ತಿತ್ವದಲ್ಲಿ ಬದಲಾವಣೆ ತರುತ್ತದೆ. ಭಾವನೆಗಳಲ್ಲಿ ಶುಭ ಪರಿಣಾಮಗಳನ್ನು ಕೊಡುತ್ತದೆ. ಇದರಿಂದ ಧರ್ಮದ ಸಂದೇಶ ಅನುಸರಣೆ ಮಾಡಲು ಸಾಧ್ಯವಾಗುತ್ತದೆ. ಧರ್ಮದ ಮೂಲಕ ಹೊಸ ಚಿಂತನೆ, ಯೋಜನೆಗಳು ಹಾಗೂ ದೂರದೃಷ್ಟಿತ್ವ ಬೆಳೆಯಬೇಕು. ಪರಿವರ್ತನೆ ದೇವರ ಅನುಗ್ರಹದಿಂದ ಸಾಧ್ಯ ಎಂದು ಡಾ| ವೀರೇಂದ್ರ ಹೆಗ್ಗಡೆ ಹೇಳಿದರು.
ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಬೈಂದೂರು ತಾಲೂಕು ವತಿಯಿಂದ ಕೃಷಿ ಮನೆ ನಾಯ್ಕನಕಟ್ಟೆಯಲ್ಲಿ ಸ್ಥಳಾಂತರಗೊಳ್ಳುತ್ತಿರುವ ಕೃಷಿ ಯಂತ್ರಗಳ ಬಾಡಿಗೆ ಸೇವಾ ಕೇಂದ್ರ ಮತ್ತು ಶ್ರೀ ಮೂಕಾಂಬಿಕಾ ಭತ್ತ ಬೆಳೆಗಾರರ ಒಕ್ಕೂಟದ ಕಚೇರಿ ಉದ್ಘಾಟಿಸಿ ಮಾತನಾಡಿದರು.
ಕ್ಷೇತ್ರದಲ್ಲಿ ವಿದ್ಯಾದಾನ, ಅನ್ನದಾನ, ಔಷಧ ದಾನ ನಿತ್ಯ ನಡೆಯುವಂಥದ್ದು. ಅಭಯದಾನ ನೀಡಲಾಗುತ್ತದೆ. ಜನರನ್ನು ಹೆದರಿಕೆಯಿಂದ ಮುಕ್ತಗೊಳಿಸುವಂತದ್ದು ಅಭಯ ದಾನವಾಗಿದೆ. ಇದರಲ್ಲಿ ಜನ ಹೇಗೆ ಬೆಳೆಯಬೇಕು ಎನ್ನುವುದನ್ನು ಸ್ವ-ಸಹಾಯ ಸಂಘಗಳ ಮೂಲಕ ತೋರಿಸಲಾಗಿದೆ ಎಂದರು. 3,666 ಸ್ವ-ಸಹಾಯ ಸಂಘಗಳನ್ನು ರಚನೆ ಮಾಡಲಾಗಿದೆ. ಸಂಘವು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವುದರಿಂದ 8.53 ಕೋಟಿ ರೂ. ಲಾಭಾಂಶ ಸದಸ್ಯರು ಹಂಚಿಕೊಂಡಿದ್ದಾರೆ ಎಂದರು.
ಇದನ್ನೂ ಓದಿ:ಮುಂದಿನ ಶರಣ ಸಂಸ್ಕೃತಿ ಉತ್ಸವದ ಗೌರವ ಅಧ್ಯಕ್ಷರಾಗಿ ವನಶ್ರೀ ಮಠದ ಸ್ವಾಮೀಜಿ ಆಯ್ಕೆ
ಕೃಷಿಕರು ಆಧುನಿಕತೆಯನ್ನು ಬಳಸಿ ಕೊಳ್ಳಬೇಕು. ಯಂತ್ರೋಪಕರಣಗಳನ್ನು ಬಳಕೆ ಮಾಡಿ ಕೃಷಿಯಲ್ಲಿ ಸಂಪತ್ತು ಗಳಿಸಬೇಕು. ಕೃಷಿಯಲ್ಲಿ ಉತ್ತಮ ಮೌಲ್ಯಗಳಿಸಬೇಕು. ಪರಿವರ್ತನೆಯನ್ನು ಬಳಸಿಕೊಂಡು ದುಶ್ಚಟಗಳಿಗೆ ಒಳಗಾಗದೆ ಅಭಿವೃದ್ಧಿಯನ್ನು ಹೊಂದುವಂತಾಗಲಿ ಎಂದು ಆಶೀರ್ವಚಿಸಿದರು.
ಕೃಷಿಮನೆ ಕಟ್ಟಡ ಮಾಲಕ ನಾಗಲಕ್ಷ್ಮೀ ಸತೀಶ ಕೊಠಾರಿ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಕುಂದಾಪುರ ಜನಜಾಗೃತಿ ವೇದಿಕೆ ಸ್ಥಾಪಕಾಧ್ಯಕ್ಷ ಬಿ. ಅಪ್ಪಣ್ಣ ಹೆಗ್ಡೆ, ಕೆರ್ಗಾಲು ಗ್ರಾ.ಪಂ. ಅಧ್ಯಕ್ಷ ಮಾಧವ ದೇವಾಡಿಗ, ಪ್ರಗತಿ ಬಂಧು ಒಕ್ಕೂಟದ ಅಧ್ಯಕ್ಷ ರಘುರಾಮ ಕೆ. ಪೂಜಾರಿ, ಬೈಂದೂರು ಜನಜಾಗೃತಿ ವೇದಿಕೆ ಅಧ್ಯಕ್ಷ ರಾಜು ದೇವಾಡಿಗ ಉಪಸ್ಥಿತರಿದ್ದರು.
ತಾಲೂಕು ಯೋಜನಾಧಿಕಾರಿ ಶಶಿರೇಖಾ ಪಿ. ಸ್ವಾಗತಿಸಿ, ಧರ್ಮಸ್ಥಳದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಎಲ್.ಎಚ್. ಮಂಜುನಾಥ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರಾಘವೇಂದ್ರ ಕಾರ್ಯಕ್ರಮ ನಿರ್ವಹಿಸಿದರು. ಅಶೋಕ ವಂದಿಸಿದರು.