ಆಲಂಕಾರು: ಮಾತೃಭಾಷೆಯಲ್ಲಿ ಶಿಕ್ಷಣ ದೊರೆತಾಗ ನಮ್ಮ ಪವಿತ್ರ ಧರ್ಮ ಸಂಸ್ಕೃತಿ, ಪರಂಪರೆ ಉಳಿದು ಮುಂದಿನ ಜನಾಂಗಕ್ಕೆ ಭಾರತ ದೇಶದ ಅಂತಃಸತ್ವ ಏನೆಂಬುದರ ಪರಿಚಯವಾಗುತ್ತದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.
ಅವರು ಶನಿವಾರ ಆಲಂಕಾರು ಶ್ರೀ ಭಾರತೀ ಶಾಲೆಯ ರಜತ ಮಹೋತ್ಸವ ಸಂಭ್ರಮ ಕಟ್ಟಡದ ಪ್ರವೇಶೋತ್ಸವ ಕಾರ್ಯಕ್ರಮದ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಚಿತ್ರಕಲಾವಿದ ಸತ್ಯನಾರಾಯಣ ಅವರನ್ನು ಸಮ್ಮಾನಿಸಿ ಮಾತನಾಡಿದರು.
ಸ್ವಾತಂತ್ರ್ಯ ಹೋರಾಟ ನಡೆದಿರುವುದು ಕೇವಲ ಅಧಿಕಾರಕ್ಕೆ ಅಲ್ಲ, ಈ ಮಣ್ಣಿನ ಭಾÅತೃತ್ವ ಅಂತಃಸತ್ವವನ್ನು ಉಳಿಸಿ ಉದ್ದೀಪನಗೊಳಿಸುವುದಕ್ಕಾಗಿ. ಆದರೆ ಇಂದು ನಾವು ಅದನ್ನೆಲ್ಲ ಮರೆತು ವಿದೇಶಿ ಗುಲಾಮರಾಗುತ್ತಿದ್ದೇವೆ. ಆದರೆ, ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕದಲ್ಲಿ ಹಿಂದಿಯಲ್ಲೇ ಮಾತನಾಡಿ ತನ್ನತನವನ್ನು ಮೆರೆದಿದ್ದಾರೆ. ಇದು ನಮಗೆಲ್ಲ ಪ್ರೇರಣೆಯಾಗಬೇಕು. ಕನ್ನಡ ಮಾಧ್ಯಮದ ಮೂಲಕ ಕಲಿತವರು ಹಲವು ಉನ್ನತ ಹುದ್ದೆ ಅಲಂಕರಿಸಿದ್ದಾರೆ. ನಮ್ಮ ಭಾಷೆಯಲ್ಲಿ ಕಲಿತರೆ ನಮ್ಮ ಸಂಸ್ಕೃತಿ, ಸಂಬಂಧಗಳ ಬಗೆಗಿನ ತಿಳಿವಳಿಕೆ ಮೂಡುತ್ತದೆ ಎಂದರು.
ಕರ್ಣಾಟಕ ಬ್ಯಾಂಕಿನ ಮಂಗಳೂರು ವಿಭಾಗದ ಜಿಎಂ ಮಹಾಲಿಂಗೇಶ್ವರ ಕೆ. ಬ್ಯಾಂಕಿನ ವತಿಯಿಂದ 4 ಲಕ್ಷ ರೂ. ದೇಣಿಗೆಯನ್ನು ಹಸ್ತಾಂತರಿಸಿದರು. ಪುತ್ತೂರಿನ ಸ್ವರ್ಣೋದ್ಯಮಿ ಬಲರಾಮ ಆಚಾರ್ಯ, ಮಂಗಳೂರು ಎಂ.ಸಿ.ಎಫ್. ಜಿಎಂ ಎನ್. ರಮೇಶ್ ಭಟ್ ನೆಗಳಗುರಿ, ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಚಂದ್ರಶೇಖರ ಆಲಂಕಾರು, ನಿವೃತ್ತ ವಿಜ್ಞಾನಿ ಡಾ| ಎನ್. ಯದುಕುಮಾರ್ ಕೊಳತ್ತಾಯ, ನ್ಯಾಯವಾದಿ ಮೋಹನ ಗೌಡ ಇಡ್ಯಡ್ಕ, ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಎಲ್.ಎನ್. ಕೂಡೂರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೆಶಕ ಬಿ. ಜಯರಾಮ ನೆಲ್ಲಿತ್ತಾಯ, ಆಲಂಕಾರು ಸಿ.ಎ. ಬ್ಯಾಂಕಿನ ಅಧ್ಯಕ್ಷ ರಮೇಶ್ ಭಟ್ ಉಪ್ಪಂಗಳ ಅತಿಥಿಗಳಾಗಿ ಮಾತನಾಡಿದರು. ಉದ್ಯಮಿ ಸಂಧ್ಯಾ ಶಾಂತಾರಾಮ ಶೆಣೈ ಬಸ್ತಿಕಾರ್ ಉಪಸ್ಥಿತರಿದ್ದರು.
ರಜತ ಮಹೋತ್ಸವ ಸಮಿತಿ ಅಧ್ಯಕ್ಷ ಕೃಷ್ಣಕುಮಾರ್ ಅತ್ರಿಜಾಲ್ ಪ್ರಸ್ತಾವನೆಗೈದರು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಡಾ| ಸುರೇಶ್ ಕುಮಾರ್ ಕೂಡೂರು ಸ್ವಾಗತಿಸಿದರು. ಸಂಚಾಲಕ ಈಶ್ವರ ಗೌಡ ಪಜ್ಜಡ್ಕ ವಂದಿಸಿದರು. ಶಿಕ್ಷಕ ಚಂದ್ರಹಾಸ ಕೆ.ಸಿ. ಕಾರ್ಯಕ್ರಮ ನಿರೂಪಿಸಿದರು. ಶಾರದಾಪೂಜೆ ಹಾಗೂ ಗಣಪತಿ ಹೋಮ ನಡೆಸಲಾಯಿತು.
ಸ್ವಾಭಿಮಾನ ಇರಲಿ
ಕನ್ನಡ ಭಾಷೆಯ ಬಗ್ಗೆ ಸ್ವಾಭಿಮಾನವಿರಬೇಕು. ಮಾತೃ ಭಾಷಾಭಿಮಾನದಲ್ಲಿ ನಮ್ಮತನವನ್ನು ಉಳಿಸಿಕೊಂಡಾಗ ಗೌರವ ಪ್ರಾಪ್ತಿಯಾಗುತ್ತದೆ. ಇವತ್ತು ಶಿಕ್ಷಣ ವ್ಯಾಪಾರೀಕರಣವಾಗಿರುವುದರಿಂದ ಜನ ಗುಣದ ಹಿಂದೆ ಹೋಗದೆ ಹಣದ ಹಿಂದೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಮನುಷ್ಯರ ನಡುವಿನ ಸಂಬಂಧಗಳು ಉಳಿಯ ಬೇಕಾದರೆ ನಮ್ಮ ಭಾಷೆ ಉಳಿಯಬೇಕು ಎಂದು ಡಾ| ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.