Advertisement

“ದೇವಾಲಯಗಳಿಂದ ಧರ್ಮ, ಸಂಸ್ಕೃತಿ ರಕ್ಷಣೆ’

10:21 PM Apr 10, 2019 | mahesh |

ಕಡಬ: ದೇಶದ ಮೇಲೆ ಹಲವು ಆಕ್ರಮಣಗಳು ನಡೆದಿವೆ. ಆದರೂ ಹಿಂದೂ ಧರ್ಮ ಹಾಗೂ ಸಂಸ್ಕೃತಿ ಜೀವಂತವಾಗಿದೆ. ಇದಕ್ಕೆ ದೇವಾಲಯಗಳೇ ಕಾರಣ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ನುಡಿದರು.

Advertisement

ಅವರು ಹಳೆನೇರೆಂಕಿ ಗ್ರಾಮದ ಎರಟಾಡಿ ಶ್ರೀ ವಿಷ್ಣುಮೂರ್ತಿ ದೇವ ಸ್ಥಾನದಲ್ಲಿ ನಡೆಯುತ್ತಿರುವ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಮಹೋತ್ಸವದ ಅಂಗವಾಗಿ ಜರಗಿದ ಧಾರ್ಮಿಕ ಸಭೆಯಲ್ಲಿ ಅಶೀರ್ವಚನ ನೀಡಿದರು. ಭಗವಂತ ಕಣ್ಣಿಗೆ ಕಾಣಿಸದಿದ್ದರೂ ಅವನ ಶಕ್ತಿ ಎಲ್ಲೆಡೆಯೂ ವ್ಯಾಪಿಸಿದೆ.
ನಮ್ಮಲ್ಲಿ ಭಗವಂತನ ಪ್ರಜ್ಞೆ ನಿರಂತರ ಜಾಗೃತವಾಗಬೇಕೆಂದು ಹಿರಿಯರು ಪ್ರತಿ ಊರಿನಲ್ಲೂ ದೇವಸ್ಥಾನ ನಿರ್ಮಾಣ ಮಾಡಿದ್ದಾರೆ ಎಂದರು.

ಕೊಂಬೆಗಳಿಗೆ ನೀರು ಹಾಕಿದರೆ ಪ್ರಯೋಜನವಿಲ್ಲ. ಬೇರುಗಳಿಗೆ ನೀರು ಹಾಕಿದಲ್ಲಿ ಕೊಂಬೆಗಳಲ್ಲಿ ಫಲ ಬರಲಿದೆ. ಭಗವಂತ ಜಗತ್ತಿನ ಬೇರು. ಭಗವಂತನ ಮೇಲೆ ಭಕ್ತಿಯ ನೀರೆರೆದಲ್ಲಿ ಮನೆ ಮನೆಗಳಲ್ಲೂ ಸುಖ, ಸಮೃದ್ಧಿಯಾಗಲು ಸಾಧ್ಯವಿದೆ. ಹುಟ್ಟೂರು ಎರಟಾಡಿಯ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಊರಿನ ಭಕ್ತರು ಸಹಕಾರ ನೀಡಿದ್ದಾರೆ. ಇಲ್ಲಿನ ಆರಾಧ್ಯ ಮೂರ್ತಿ ವಿಷ್ಣುಮೂರ್ತಿಯ ಅನುಗ್ರಹದಿಂದ ಗ್ರಾಮದಲ್ಲಿ ಸುಭಿಕ್ಷೆ ನೆಲೆಸಲಿ ಎಂದು ಹಾರೈಸಿದರು.

ಧಾರ್ಮಿಕ ಉಪನ್ಯಾಸ ನೀಡಿದ ಖ್ಯಾತ ವಿದ್ವಾಂಸ ಪಂಜ ಭಾಸ್ಕರ ಭಟ್‌, ಅಷ್ಟಬಂಧ ಬ್ರಹ್ಮಕಲಶೋತ್ಸವದಿಂದ ಲೋಕಕ್ಕೆ ಕ್ಷೇಮವಾಗಲಿದೆ ಎಂದರು. ಪುತ್ತೂರಿನ ಉದ್ಯಮಿ ಬಲರಾಮ ಆಚಾರ್ಯ ಮಾತನಾಡಿ, ದೇವಸ್ಥಾನ ಧಾರ್ಮಿಕ ಚಟುವಟಿಕೆಗೆ ಸೀಮಿತಗೊಳ್ಳದೆ ಸಾಮಾಜಿಕವಾಗಿ ಹಿಂದೂ ಧರ್ಮವನ್ನು ಒಟ್ಟುಗೂಡಿಸುವ ಕೆಲಸ ಮಾಡುತ್ತಿದೆ ಎಂದರು.

ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಎಸ್‌. ಪ್ರದೀಪ್‌ ಕುಮಾರ್‌ ಕಲ್ಕೂರ ಮಾತನಾಡಿ, ಮಕ್ಕಳು ಮುಂದಿನ ಬೆಳಕು. ಅವರಲ್ಲಿ ಧಾರ್ಮಿಕ ಚಿಂತನೆ ಬೆಳೆಸಬೇಕೆಂದು ಹೇಳಿದರು. ಹಳೆನೇರೆಂಕಿ ಶ್ರೀ ಚಕ್ರವರ್ತಿ ಕೊಡಮಣಿತ್ತಾಯ ದೇವಸ್ಥಾನ ಹಾಗೂ ಬ್ರಹ್ಮಬೈದರ್ಕಳ ಗರಡಿಯ ಧರ್ಮದರ್ಶಿ ಎಸ್‌.ಕೆ. ಆನಂದ ಕುಮಾರ್‌, ಮುಂಬಯಿ ಪೇಜಾವರ ಮಠದ ಮ್ಯಾನೇಜರ್‌ ಎಸ್‌. ಪ್ರಕಾಶ ಆಚಾರ್ಯ ಮಾತನಾಡಿದರು.

Advertisement

ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಇ. ಕೃಷ್ಣಮೂರ್ತಿ ಕಲ್ಲೇರಿ ಅಧ್ಯಕ್ಷತೆ ವಹಿಸಿದ್ದರು. ಆನುವಂಶಿಕ ಆಡಳಿತ ಮೊಕ್ತೇಸರ ಎಂ. ರಘುರಾಮ ಆಚಾರ್ಯ ಉಡುಪಿ ಉಪಸ್ಥಿತರಿದ್ದರು. ವ್ಯವಸ್ಥಾಪಕ ಮೊಕ್ತೇಸರ ಎಂ. ಹರಿನಾರಾಯಣ ಆಚಾರ್ಯ ಸ್ವಾಗತಿಸಿ, ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಟಿ. ನಾರಾಯಣ ಭಟ್‌ ನಿರೂಪಿಸಿದರು. ಧಾರ್ಮಿಕ ಸಭೆಯ ಬಳಿಕ ವಿಠಲ ನಾಯಕ್‌ ಮತ್ತು ಬಳಗ ಕಲ್ಲಡ್ಕ ಇವರಿಂದ ಗೀತ, ಸಾಹಿತ್ಯ, ಸಂಭ್ರಮ ನಡೆಯಿತು.

ವಿಷ್ಣುಮೂರ್ತಿ ದೇವರಿಗೆ ಬ್ರಹ್ಮಕುಂಭಾಭಿಷೇಕ
ಬುಧವಾರ ಬೆಳಗ್ಗೆ ಪುಣ್ಯಾಹವಾಚನ, ಗಣಯಾಗ, ವಿಷ್ಣುಯಾಗ, ಕಲಶಾಭಿಷೇಕ ಪ್ರಾರಂಭಗೊಂಡು 10.58ರ ಮಿಥುನ ಲಗ್ನದಲ್ಲಿ ಶ್ರೀ ವಿಷ್ಣುಮೂರ್ತಿ ದೇವರಿಗೆ ಬ್ರಹ್ಮಕುಂಭಾಭಿಷೇಕ ನೆರವೇರಿತು. ಬಳಿಕ ನ್ಯಾಸಪೂಜೆ, ಮಹಾಫ‌ೂಜೆ, ಅವಭೃಥ ಬಲಿ, ಪಲ್ಲಪೂಜೆ ನಡೆದು ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ಜರಗಿತು. ಸಂಜೆ ನಾಗ ತನುತರ್ಪಣ, ಮಂಡಲ ಪೂಜೆ, ರಂಗಪೂಜೆ, ಶ್ರೀ ವಿಷ್ಣುಮೂರ್ತಿ ದೇವರಿಗೆ ಉತ್ಸವ, ದರ್ಶನಬಲಿ, ಬಟ್ಟಲು ಕಾಣಿಕೆ, ಪ್ರಸಾದ ಭೋಜನ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next