ಹೊಸದಿಲ್ಲಿ: ಪೂರ್ವ ದೆಹಲಿಯ ಬಿಜೆಪಿ ಸಂಸದರಾಗಿರುವ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅವರು ಸಕ್ರಿಯ ರಾಜಕಾರಣದಿಂದ ದೂರ ಸರಿಯುವುದಾಗಿ ಹೇಳಿದ್ದಾರೆ. ಕ್ರಿಕೆಟ್ ನಲ್ಲಿ ತೊಡಗಿಸಿಕೊಂಡಿರುವ ಕಾರಣ ರಾಜಕೀಯದಲ್ಲಿ ಪಾಲ್ಗೊಳ್ಳಲು ಸಾಧ್ಯವಿಲ್ಲ ಎಂದು ಗಂಭೀರ್ ಹೇಳಿಕೊಂಡಿದ್ದಾರೆ.
ಈ ಬಗ್ಗೆ ಸ್ವತಃ ಗೌತಮ್ ಗಂಭೀರ್ ಅವರೇ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಿದ್ದಾರೆ. ಕ್ರಿಕೆಟ್ ನತ್ತ ತಮ್ಮ ಗಮನವನ್ನು ಹೆಚ್ಚು ನೀಡುವ ಅಗತ್ಯವನ್ನು ಉಲ್ಲೇಖಿಸಿ ಅವರು ತಮ್ಮ ಕ್ರಿಕೆಟ್ ಬದ್ಧತೆಗಳ ಮೇಲೆ ಕೇಂದ್ರೀಕರಿಸುವ ಬಯಕೆಯನ್ನು ವ್ಯಕ್ತಪಡಿಸಿದರು.
“ನನ್ನ ರಾಜಕೀಯ ಕರ್ತವ್ಯಗಳಿಂದ ನನ್ನನ್ನು ಮುಕ್ತಗೊಳಿಸುವಂತೆ ನಾನು ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ಮನವಿ ಮಾಡಿದ್ದೇನೆ. ಇದರಿಂದ ನಾನು ನನ್ನ ಮುಂಬರುವ ಕ್ರಿಕೆಟ್ ಬದ್ಧತೆಗಳ ಮೇಲೆ ಕೇಂದ್ರೀಕರಿಸಬಹುದಾಗಿದೆ. ಜನರ ಸೇವೆ ಮಾಡಲು ನನಗೆ ಅವಕಾಶ ನೀಡಿದ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿಯವರಿಗೆ ನಾನು ಪ್ರಾಮಾಣಿಕವಾಗಿ ಧನ್ಯವಾದಗಳು. ಜೈ. ಹಿಂದ್,” ಎಂದು ಗೌತಮ್ ಗಂಭೀರ್ ಬರೆದಿದ್ದಾರೆ.
2019ರ ಮಾರ್ಚ್ ನಲ್ಲಿ ಬಿಜೆಪಿ ಸೇರಿ ರಾಜಕೀಯ ಪದಾರ್ಪಣೆ ಮಾಡಿದ್ದ ಗೌತಮ್, 2019ರ ಲೋಕಸಭೆ ಚುನಾವಣೆಯಲ್ಲಿ ಪೂರ್ವ ದೆಹಲಿಯಲ್ಲಿ ಸ್ಪರ್ಧೆ ಮಾಡಿದ್ದರು. ಚುನಾವಣೆಯಲ್ಲಿ ಅವರು ಬರೋಬ್ಬರಿ 6,95,109 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.
ಮುಂಬರುವ 2024 ರ ಚುನಾವಣೆಗೆ ಗಂಭೀರ್ ಗೆ ಟಿಕೆಟ್ ಸಿಗುವುದಿಲ್ಲ ಎಂಬ ವರದಿಗಳ ನಡುವೆ ರಾಜಕೀಯ ತ್ಯಜಿಸುವ ನಿರ್ಧಾರ ಬಂದಿದೆ.