ಬೆಂಗಳೂರು: ಕೇಂದ್ರ ಸರಕಾರದಿಂದ ಬರಬೇಕಿದ್ದ ಜಿಎಸ್‌ಟಿ ನಷ್ಟ ಪರಿಹಾರ ಹಾಗೂ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ(ನರೇಗಾ) ಯೋಜನೆಯ ಬಾಕಿ ಕೂಲಿ ಸೇರಿ ಒಟ್ಟು 1,790 ಕೋಟಿ ರೂ. ಬಿಡುಗಡೆಯಾಗಿದೆ.
ಪ್ರಸಕ್ತ ಆರ್ಥಿಕ ಸಾಲಿನಲ್ಲಿ ರಾಜ್ಯಕ್ಕೆ ನೀಡಬೇಕಿದ್ದ ಬಾಕಿ ಮೊತ್ತಗಳ ಪೈಕಿ ಬಹುತೇಕ ಅನುದಾನವನ್ನು ಕೇಂದ್ರ ಸರಕಾರ ನೀಡಿದ್ದು, 2,300 ಕೋ. ರೂ. ಜಿಎಸ್‌ಟಿ ನಷ್ಟ ಪರಿಹಾರದ ಪೈಕಿ 1,190 ಕೋ. ರೂ.ಗಳನ್ನು ನೀಡಿದೆಯಲ್ಲದೆ, ಇನ್ನೂ 1,110 ಕೋಟಿ ರೂ. ಮಾತ್ರ ಬಾಕಿ ಇದೆ. ಸಿಎಜಿಯಿಂದ ಪ್ರಮಾಣಪತ್ರ ತಲುಪಿದ ಬಳಿಕ ಉಳಿದ ಮೊತ್ತವೂ ಬಿಡುಗಡೆಯಾಗಲಿದೆ.
ಅದೇ ರೀತಿ ನರೇಗಾ ಯೋಜನೆಯಡಿ ಕೊಡ ಬೇಕಿದ್ದ 600 ಕೋ. ರೂ. ಕೂಲಿ ಹಣ ಸಂಪೂರ್ಣ ಬಿಡುಗಡೆಯಾಗಿದ್ದು, ಮಧ್ಯಾಹ್ನದ ಬಿಸಿಯೂಟ, ರಾಷ್ಟ್ರೀಯ ಉನ್ನತ ಶಿಕ್ಷಣ ಅಭಿಯಾನ ಸೇರಿ ಇನ್ನಿತರ ಕೇಂದ್ರ ಪುರಸ್ಕೃತ ಯೋಜನೆಗಳ ಅನುದಾನವೂ ಬಿಡುಗಡೆಯಾಗಿದೆ. ಕೇಂದ್ರ ಪುರಸ್ಕೃತ ಕೆಲ ಯೋಜನೆಗಳು ಅನುಷ್ಠಾನವಾಗಿ ರುವ ಬಗ್ಗೆ ಬಳಕೆ ಪ್ರಮಾಣಪತ್ರ (ಯುಸಿ) ಸಲ್ಲಿಸಿದರೆ ಉಳಿಕೆ ಮೊತ್ತವೂ ಪಾವತಿಯಾಗಲಿದೆ ಎಂದು ಸರಕಾರದ ಉನ್ನತ ಮೂಲಗಳು ಹೇಳಿವೆ.
92 ಸಾವಿರ ಕೋಟಿ ರೂ. ಆದಾಯ: ಕಳೆದ ವರ್ಷ ಇದೇ ಸಂದರ್ಭದಲ್ಲಿ 82 ಸಾವಿರ ಕೋಟಿ ರೂ. ಸಂಗ್ರಹವಾಗಿದ್ದ ಆದಾಯವು ಈ ಬಾರಿ 92 ಸಾವಿರ ಕೋಟಿ ರೂ.ತಲುಪಿದೆ. ಬರಗಾಲವಿದ್ದರೂ 10 ಸಾವಿರ ಕೋಟಿ ರೂ. ಹೆಚ್ಚುವರಿ ಆದಾಯ ಬಂದಿದ್ದು, ಬರಗಾಲ ಇಲ್ಲದಿದ್ದರೆ ನಿಗದಿತ ಗುರಿ ಮೀರಿದ ಆರ್ಥಿಕತೆ ಸಾಧಿಸಬಹುದಿತ್ತು. ಎಪ್ರಿಲ್‌ನಿಂದ ಅಕ್ಟೋಬರ್‌ವರೆಗೆ 52,760 ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿದ್ದು, ಕಳೆದ ವರ್ಷ ಇದೇ ವೇಳೆಗೆ 47 ಸಾವಿರ ಕೋಟಿ ರೂ. ಸಂಗ್ರಹವಾಗಿತ್ತು. 17 ಸಾವಿರ ಕೋಟಿ ರೂ. ಇದ್ದ ಅಬಕಾರಿ ತೆರಿಗೆ 19 ಸಾವಿರ ಕೋಟಿ ರೂ. ಆಗಿದೆ. 3 ಸಾವಿರ ಕೋಟಿ ರೂ. ಇದ್ದ ಗಣಿಗಾರಿಕೆ ತೆರಿಗೆ 3,900 ಕೋಟಿ ರೂ. ಸಂಗ್ರಹವಾಗಿದೆ. ಮಾರ್ಗಸೂಚಿ ದರ ಇತ್ತೀಚೆಗಷ್ಟೆ ಹೆಚ್ಚಳವಾಗಿದ್ದು, ಸದ್ಯದವರೆಗೆ ನೋಂದಣಿ ಮತ್ತು ಮುದ್ರಾಂಕ ಶುಲ್ಕವು ಅಂದಾಜು 10,703 ಕೋಟಿ ರೂ. ಸಂಗ್ರಹವಾಗಿದೆ. ಕಳೆದ ಬಾರಿಗಿಂತ ಈ ಬಾರಿ ಗುರಿಯನ್ನೂ ಹೆಚ್ಚಿಗೆ ಕೊಟ್ಟಿದ್ದು, ಮುಂದಿನ 6 ತಿಂಗಳಲ್ಲಿ ಮಾರ್ಗಸೂಚಿ ದರ ಹೆಚ್ಚಳದ ಪರಿಣಾಮ ಗೊತ್ತಾಗಲಿದೆ ಎಂದು ಆರ್ಥಿಕ ಇಲಾಖೆ ತಿಳಿಸಿದೆ.
ಸರಿದೂಗಿಸಬಲ್ಲ ಆರ್ಥಿಕತೆ: ಈವರೆಗೆ 5.22 ಲಕ್ಷ ಕೋಟಿ ರೂ. ಸಾಲವಿದ್ದು, ಇದರ ಮೇಲಿನ ಬಡ್ಡಿ 25 ಸಾವಿರ ಕೋಟಿ ರೂ. ಆಗಿದೆ. ಆದರೆ, ಸಾಲದ ಮರುಪಾವತಿಗಾಗಿ 15 ಸಾವಿರ ಕೋಟಿ ರೂ. ಬಳಸಲಾಗುತ್ತಿದೆ. ಈ ಬಾರಿ 80 ಸಾವಿರ ಕೋಟಿ ರೂ. ಸಾಲ ಮಾಡಬೇಕಿದೆ. ಇದರಿಂದ ಸಾಲದ ಪ್ರಮಾಣವು 6 ಲಕ್ಷ ಕೋಟಿ ರೂ. ಮುಟ್ಟಲಿದೆ. ಹುಡ್ಕೊ, ಆರ್‌ಇಸಿಯಂತಹ ಸಂಸ್ಥೆಗಳು ಸಾಲ ಕೊಡಲು ಮುಂದೆ ಬಂದಿವೆಯಾದರೂ ಜಿಎಸ್‌ಡಿಪಿಯ ಶೇ.3ಕ್ಕಿಂತ ಸಾಲ ಮಾಡಬಾರದೆಂಬ ನಿಯಮ ಇರುವುದರಿಂದ ಹೊಸ ಸಾಲಕ್ಕೆ ಕೈಹಾಕಿಲ್ಲ.
ಹಿಂದಿನ ಸರಕಾರ ಬಜೆಟ್‌ನಲ್ಲಿ ಪ್ರಸ್ತಾಪಿಸಿದ್ದ ಮೊತ್ತ ಮತ್ತು ಹಣಕಾಸು ಪರಿಸ್ಥಿತಿ ಮೀರಿದ ಅಂದಾಜಿಗೆ ಅನುಮೋದನೆ ನೀಡಿದ್ದರಿಂದ ಗುತ್ತಿಗೆದಾರರಿಗೆ 27,900 ಸಾವಿರ ಕೋಟಿ ರೂ. ಬಾಕಿ ಬಿಲ್ ಪಾವತಿಸಬೇಕಿದೆ. ವಿಧವಾ ವೇತನ, ವೃದ್ಧಾಪ್ಯ ವೇತನ, ವಿಶಿಷ್ಟಚೇತನರ ಮಾಸಾಶಾನ ಸೇರಿ ಸಾಮಾಜಿಕ ಭದ್ರತಾ ಯೋಜನೆಗಳಡಿ 52 ಲಕ್ಷ ಫಲಾನುಭವಿಗಳಿದ್ದು, ಕೇಂದ್ರದಿಂದ 456 ಕೋಟಿ ರೂ. ಸಿಕ್ಕಿದರೆ, ರಾಜ್ಯ ಸರಕಾರ 9,500 ಕೋಟಿ ರೂ.ಗಳನ್ನು ಭರಿಸುತ್ತಿದೆ. ಇದಲ್ಲದೆ, ಸರಕಾರಿ ನೌಕರರ ವೇತನ, ಪಿಂಚಣಿಗೂ ಹಣ ಮೀಸಲಿಡಲೇಬೇಕು. ಇನ್ನು ನೀರಾವರಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಉಚಿತ ಇರುವುದರಿಂದ ಎಸ್ಕಾಂಗಳಿಗೆ 15 ಸಾವಿರ ಕೋಟಿ ರೂ. ಕೊಡುತ್ತಿದ್ದು, ಈ ಬಾರಿಯಿಂದ ಹೆಚ್ಚುವರಿಯಾಗಿ 6 ಸಾವಿರ ಕೋಟಿ ರೂ. ಹೆಚ್ಚು ವೆಚ್ಚ ಬರಲಿದೆ.
ಎಲ್ಲ ಮೂಲಗಳಿಂದ ಬೊಕ್ಕಸಕ್ಕೆ ಬರುತ್ತಿರುವ ಆದಾಯ ಹಾಗೂ ಕೇಂದ್ರದ ಅನುದಾನಗಳು ಇವುಗಳಿಗೆ ಸಾಕಾಗಲಿದ್ದು, ಬರಗಾಲ ಹಾಗೂ 5 ಗ್ಯಾರಂಟಿಗಳಿಗೆ ಹಣ ಹೊಂದಿಸುವ ಸವಾಲಿದೆ. ಹೀಗಾಗಿ ಮಿತಿ ಇಟ್ಟುಕೊಂಡಿದ್ದು, ಯಾವುದೇ ಹೊಸ ಕಾಮಗಾರಿ ಕೈಗೆತ್ತಿಕೊಳ್ಳದೆ ಬಾಕಿ ಬಿಲ್‌ಗಳ ಪಾವತಿ ಹಾಗೂ ಅಂತಿಮ ಹಂತದಲ್ಲಿರುವ ಚಾಲ್ತಿ ಕಾಮಗಾರಿಗಳನ್ನು ಪೂರೈಸಲಷ್ಟೇ ಆದ್ಯತೆ