Advertisement

ಕಲಾವಿದರ ನೆರವಿಗೆ ಸಂಕಷ್ಟ ಪರಿಹಾರ ನಿಧಿ

06:37 PM Apr 25, 2020 | Suhan S |

ಶಿರಸಿ: ವೃತ್ತಿಪರ ಬಡ ಕಲಾವಿದರ ಸಂಕಷ್ಟಕ್ಕೆ ನೆರವಾಗುವ ನಿಧಿ ಸ್ಥಾಪಿಸಲು ಯಕ್ಷಗಾನ ಅಕಾಡೆಮಿ ಯೋಜಿಸಿದೆ. ಅಪಘಾತದಲ್ಲಿ ಗಾಯಗೊಂಡವರು, ರಂಗಭೂಮಿಯಲ್ಲಿ ಸೇವೆ ಸಲ್ಲಿಸಲಾಗದೇ ಅವಘಡದಲ್ಲಿ ನೊಂದವರು, ಕೋವಿಡ್ 19 ಸಂಕಷ್ಟದಲ್ಲಿ ಸಿಲುಕಿದವರ ತುರ್ತು ನೆರವಿಗೆ ಈ ನಿಧಿ ಬಳಕೆಗೆ ಅವಕಾಶ ಕಲ್ಪಿಸಲು ಚಿಂತಿಸಲಾಗಿದೆ.

Advertisement

ಏನಿದು ಯೋಜನೆ?: ಈಗಾಗಲೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೋವಿಡ್ 19 ಸಂಕಷ್ಟದಲ್ಲಿ ಅರ್ಹ ಕಲಾವಿದರಿಗೆ 2 ಸಾವಿರ ರೂ. ನೀಡಲು ಯೋಜಿಸಿದೆ. ಆದರೆ, ಯಕ್ಷಗಾನ ಅಕಾಡೆಮಿ ದೀರ್ಘ‌ಕಾಲಿಕ ಸಂಕಷ್ಟ ನಿಧಿ ಸ್ಥಾಪನೆಗೆ ಚಿಂತಿಸಿದ್ದು, ಕೋವಿಡ್ 19 ಬಳಿಕವೂ ಉಳಿದ ಹಣದಲ್ಲಿ ಸಂಕಷ್ಟದಲ್ಲಿರುವ ಕಲಾವಿದರ ಬದುಕಿಗೆ ಬೆಳಕಾಗಲು ಬಯಸಿದೆ.

ಕಳೆದ ಬಜೆಟ್‌ ಪೂರ್ವದಲ್ಲೇ ಅಕಾಡೆಮಿ ಅಧ್ಯಕ್ಷ ಪ್ರೊ| ಎಂ.ಎ. ಹೆಗಡೆ ದಂಟ್ಕಲ್‌ ಸಂಕಷ್ಟ ಪರಿಹಾರ ನಿಧಿ  ಸ್ಥಾಪನೆಗೆ ಕ್ರಿಯಾಯೋಜನೆ ಸಲ್ಲಿಸಿ ಅನುಮತಿ ಪಡೆದಿದ್ದಾರೆ. ಅಪಘಾತದಲ್ಲಿ ಗಾಯಗೊಂಡು ಹಾಸಿಗೆ ಹಿಡಿದವರಿಗೆ, ಮರಳಿ ರಂಗ ಏರದೇ ಇರುವವರಿಗೆ ನೆರವಾಗುವ ನಿಟ್ಟಿನಲ್ಲಿ ಈ ಪ್ರಸ್ತಾಪ ಮಾಡಲಾಗಿತ್ತು.

ಆರ್ಥಿಕ ಮೂಲ ಏನು?: ಅಕಾಡೆಮಿ ಸಾರ್ವಜನಿಕರ ಸಹಭಾಗಿತ್ವವನ್ನೂ ಬಯಸಿದೆ. ಅಧ್ಯಕ್ಷ, ರಜಿಸ್ಟ್ರಾರ್‌ ಅವರ ಜಂಟಿ ಖಾತೆಯನ್ನು ರಾಷ್ಟ್ರೀಕೃತ ಬ್ಯಾಂಕ್‌ ನಲ್ಲಿ ತೆರೆದು ಅಲ್ಲಿಗೇ ನೇರವಾಗಿ ದಾನಿಗಳು ನೆರವನ್ನು ಜಮಾ ಮಾಡಬಹುದಾಗಿದೆ. ನಿಗದಿತ ಸಮಯದಲ್ಲಿ ಜಮಾಗೊಂಡ ಹಣ ಪರಿಶೀಲಿಸಿ ಸಂಕಷ್ಟದಲ್ಲಿರುವ ಕಲಾವಿದರಿಗೆ ನೀಡಲು ಚಿಂತಿಸಲಾಗಿದೆ.

ವೃತ್ತಿಪರ ಕಲಾವಿದರ ಕಷ್ಟ: ಮೂಡಲ ಪಾಯ, ಘಟ್ಟದ ಕೋರೆ, ಬಡಾಬಡಗು, ಬಡಗು, ತೆಂಕು ಸೇರಿದಂತೆ ಯಕ್ಷಗಾನ ಅಕಾಡೆಮಿಗೆ ಅನೇಕ ಕಲಾ ಪ್ರಕಾರಗಳು ಬರಲಿವೆ. ಇದರಲ್ಲಿ ಅನೇಕ ವೃತ್ತಿ ಕಲಾವಿದರು ಈಗ ಕೋವಿಡ್ 19 ಸಂಕಷ್ಟದಲ್ಲಿದ್ದಾರೆ. ಅವರ ಮಾಹಿತಿ ಕಲೆ ಹಾಕಲಾಗುತ್ತಿದೆ. ಸಂಗ್ರಹಿಸಿದ ಮಾಹಿತಿ ಆಧರಿಸಿ ಲಭ್ಯ ನಿಧಿ  ಬಳಸಿ ನೆರವಾಗುವುದು ಆಶಯವಾಗಿದೆ.

Advertisement

ಹಾಲಿ ಯಕ್ಷಗಾನ ಅಕಾಡೆಮಿ ಅಧ್ಯಕ್ಷರು ಶಿರಸಿಯಲ್ಲಿದ್ದಾರೆ. ಅವರು ಬೆಂಗಳೂರಿಗೆ ತೆರಳಿ ರಜಿಸ್ಟ್ರಾರ್‌ ಜೊತೆ ಬ್ಯಾಂಕ್‌ ಖಾತೆ ತೆರೆಯಬೇಕು. ಆದರೆ, ಶಿರಸಿಯಿಂದ ಬೆಂಗಳೂರಿಗೆ ತೆರಳಲು ಅನುಮತಿ ಲಭ್ಯವಾಗದೇ ಲಾಕ್‌ಡೌನ್‌ ತೆರೆಯುವ ತನಕ ಕಾಯುವಂತಾಗಿದೆ.

ಯಕ್ಷಗಾನ ಅಕಾಡೆಮಿ ಬಡ ಅರ್ಹ ವೃತ್ತಿಪರ ಕಲಾವಿದರ ನೆರವಿಗೆ ನಿಧಿ ಸ್ಥಾಪಿಸಲು ಯೋಜಿಸಿದೆ. ಸಾರ್ವಜನಿಕರ, ದಾನಿಗಳ ಸಹಕಾರ ಅಗತ್ಯವಾಗಿದೆ. ಪ್ರೊ| ಎಂ.ಎ. ಹೆಗಡೆ ದಂಟ್ಕಲ್‌, ಯಕ್ಷಗಾನ ಅಕಾಡೆಮಿ ಅಧ್ಯಕ್ಷ

ಇದೊಂದು ನೆರವಾಗುವ ಯೋಜನೆ. ಶಾಶ್ವತ ನಿಧಿ  ಸ್ಥಾಪನೆ ಮೂಲಕ ನಿರಂತರವಾಗಿ ಕಲಾವಿದರ ಕೈ ಹಿಡಿಯುವಂತಾಗಲಿ. –ವಿಘ್ನೇಶ್ವರ ಗೌಡ ಕೆಸರಕೊಪ್ಪ, ಯಕ್ಷಗಾನ ಕಲಾವಿದ

 

ರಾಘವೇಂದ್ರ ಬೆಟ್ಟಕೊಪ್ಪ

Advertisement

Udayavani is now on Telegram. Click here to join our channel and stay updated with the latest news.

Next