ಮೂಡಿಗೆರೆ: ನೆರೆ ಪರಿಹಾರದ ವಿಚಾರವಾಗಿ ಕೇಂದ್ರ ಸರಕಾರ ರಾಜ್ಯವನ್ನು ಕಡೆಗಣಿಸಿಲ್ಲ. ನಿರಾಶ್ರಿತರಿಗೆಪುನರ್ವಸತಿ ಕಲ್ಪಿಸಲು ಉಭಯ ಸರಕಾರಗಳು ಸಿದ್ಧವಾಗಿವೆ. ಸೂಕ್ತ ಕಾಲದಲ್ಲಿ ಕೇಂದ್ರದಿಂದ ಪರಿಹಾರದ ಹಣ ಬಿಡುಗಡೆಯಾಗಲಿದೆ ಎಂದು ರಾಜ್ಯ ಬಿಜೆಪಿ ಕಾರ್ಯದರ್ಶಿ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ಭಾನುಪ್ರಕಾಶ್ ಹೇಳಿದರು.
ಸೋಮವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರ ದೇಶದ ಎಲ್ಲಾ ರಾಜ್ಯ ಸರಕಾರಗಳನ್ನು ಒಂದೇ ರೀತಿಯಲ್ಲಿ ನೋಡುತ್ತಿದೆ. ತಾರತಮ್ಯ ನೀತಿ ಅನುಸರಿಸುತ್ತಿಲ್ಲ.
ರಾಜ್ಯದ 25 ಮಂದಿ ಬಿಜೆಪಿ ಸಂಸದರ ಜತೆ ಉಳಿದ ಎಲ್ಲಾ ಪಕ್ಷಗಳ ಸಂಸದರನ್ನು ಏಕ ರೀತಿಯಲ್ಲಿ ಕೇಂದ್ರ ಸರಕಾರ ನೋಡಿಕೊಂಡಿದೆ. ನೆರೆ ಪರಿಹಾರ ನೀಡಲು ವಿಳಂಬವಾದ ಬಗ್ಗೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಭೇಟಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಅವಕಾಶ ನೀಡದ ಬಗ್ಗೆ ಮಾಹಿತಿಯಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಕೇಂದ್ರದ ಬಿಜೆಪಿ ನಾಯಕರು
ದೂರವಿಟ್ಟಿಲ್ಲ ಎಂದು ತಿಳಿಸಿದರು. ಡಿ.ಕೆ.ಶಿವಕುಮಾರ್ ಪ್ರಕರಣದಲ್ಲಿ ಸಿಬಿಐ, ಐಟಿ, ಇಡಿ ಸಹಿತ ತನಿಖಾ ಸಂಸ್ಥೆಗಳನ್ನು ಬಿಜೆಪಿ ದುರುಪಯೋಗ ಮಾಡಿಕೊಂಡಿದೆ ಎಂದು ಕಾಂಗ್ರೆಸ್‌ನವರು ಹತಾಶೆ ಭಾವನೆಯಿಂದ ಹೇಳುತ್ತಿದ್ದಾರೆ. ಎಲ್ಲವನ್ನೂ ದುರುಪಯೋಗ ಮಾಡಿಕೊಂಡರೆ ಪ್ರಜಾಪ್ರಭುತ್ವ ಉಳಿಯಲಾರದು. ಅಂತಹ ಕೆಲಸಕ್ಕೆ ಬಿಜೆಪಿ ಮುಂದಾಗುವುದಿಲ್ಲ. ಡಿ.ಕೆ.ಶಿವಕುಮಾರ್ ಅವರು ತಮ್ಮ ಆಸ್ತಿ ಲೆಕ್ಕವನ್ನು ನ್ಯಾಯಾಲಯಕ್ಕೆ ನೀಡಿ ದೋಷ ಮುಕ್ತರಾಗಿ ಹೊರ ಬರಲಿ ಎಂದು ಹೇಳಿದರು.
ಪಕ್ಷ ಸಂಘಟನೆಗೆ ಒತ್ತು ನೀಡಲಾಗಿದೆ. ಜಿಲ್ಲೆಯಲ್ಲಿ 1221 ಹಾಗೂ ತಾಲೂಕಿನಲ್ಲಿ 141 ಬೂತ್ ಸಮಿತಿಗಳನ್ನು ಅಕ್ಟೋಬರ್ ತಿಂಗಳಲ್ಲಿ ಪುನಾರಚಿಸಲಾಗುವುದು. ನಂತರ ತಾಲೂಕಿನ ಮಂಡಲ ಸಮಿತಿ, ನವೆಂಬರ್‌ನಲ್ಲಿ ಜಿಲ್ಲಾ ಸಮಿತಿಗಳನ್ನು ರಚಿಸಲಾಗುವುದು. ಪಕ್ಷವನ್ನು ಬೂತ್ ಮಟ್ಟದಿಂದಲೇ ಇನ್ನಷ್ಟು ಗಟ್ಟಿಗೊಳಿಸಲಾಗುವುದು. 17ಮಂದಿ ಅನರ್ಹ ಶಾಸಕರ ಪ್ರಕರಣ ಸುಪ್ರೀಂ
ಕೋರ್ಟ್‌ನಲ್ಲಿ ಇತ್ಯರ್ಥಗೊಂಡರೆ ಉಪ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ನೀಡಲಾಗುವುದು. ಸ್ಪೀಕರ್ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದರೆ 15 ಕ್ಷೇತ್ರಗಳ ಉಪ ಚುನಾವಣೆಗೆ ಅಭ್ಯರ್ಥಿಗಳನ್ನು ಪಕ್ಷ ತೀರ್ಮಾನಿಸಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಗೋಷ್ಠಿಯಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ದುಂಡುಗ ಪ್ರಮೋದ್, ಪಪಂ ಸದಸ್ಯರಾದ ಮನೋಜ್‌ಕುಮಾರ್, ಕಮಲಾಕ್ಷಿ, ಸು ಧೀರ್, ಆಶಾ ಮೋಹನ್, ಮಾಜಿ ಅಧ್ಯಕ್ಷೆ ಸರೋಜಾ ಸುರೇಂದ್ರ, ರಾಮೇಗೌಡ, ದೀಪಕ್ ದೊಡ್ಡಯ್ಯ, ಡಿ.ಬಿ.ಜಯಪ್ರಕಾಶ್, ಬಿ.ಎನ್.ಜಯಂತ್, ಮನೋಜ್, ನಯನ ತಳವಾರ ಮತ್ತಿತರರಿದ್ದರು.