Advertisement

ಪುನರ್ವಸತಿ ಕೇಂದ್ರಗಳಲ್ಲಿ ನೀರಿನ ಸಮಸ್ಯೆಗೆ ಪರಿಹಾರ: ಪಾಟೀಲ

02:31 PM Dec 02, 2018 | |

ಆಲಮಟ್ಟಿ: ಆಲಮಟ್ಟಿ-ಬಳೂತಿ ಸಂಯುಕ್ತ ಬಹುಹಳ್ಳಿ ಕುಡಿಯುವ ನೀರಿನ ಯೋಜನೆಯ ನೂತನವಾಗಿ ನಿರ್ಮಾಣವಾಗುತ್ತಿರುವ ಮುಖ್ಯ ಸ್ಥಾವರಕ್ಕೆ ಆರೋಗ್ಯ ಸಚಿವ ಶಿವಾನಂದ ಪಾಟೀಲ ಭೇಟಿ ನೀಡಿ ಪರಿಶೀಲಿಸಿದರು.

Advertisement

ಸ್ಥಳೀಯ ಲಾಲ್‌ ಬಹಾದ್ದೂರ್‌ ಶಾಸ್ತ್ರಿ ಜಲಾಶಯದ ಹಿನ್ನೀರು ಪ್ರದೇಶವಾದ ಚಂದ್ರಮ್ಮ ದೇವಸ್ಥಾನದ ಬಳಿ ನಡೆಯುತ್ತಿರುವ ಪುನರ್ವಸತಿ ಕೇಂದ್ರಗಳಿಗೆ ಕುಡಿಯುವ ನೀರಿನ ಮುಖ್ಯಸ್ಥಾವರ (ಜಾಕ್‌ವೆಲ್‌) ಕಾಮಗಾರಿ ಪರಿಶೀಲಿಸಿದ ಆರೋಗ್ಯ ಸಚಿವರು ಪುನರ್ವಸತಿ ಕೇಂದ್ರಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಯೋಜನೆ ಕೈಗೊಂಡಿದ್ದು ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಿದರು.

ಕಾಮಗಾರಿ ಗುಣಮಟ್ಟದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ ಸಚಿವ ಶಿವಾನಂದ ಪಾಟೀಲ ಮಾತನಾಡಿ, ಆಲಮಟ್ಟಿ ಕೃಷ್ಣಾ ನದಿ ಹಿನ್ನೀರಿನಿಂದ ಮುಳುಗಡೆಯಾಗಿ ಪುನರ್‌ ನೆಲೆ ಕಂಡ ಸುಮಾರು 11ಪುನರ್ವಸತಿ ಕೇಂದ್ರಗಳ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ ಎಂದರು. 

ಶಾಸ್ತ್ರಿ ಜಲಾಶಯದ ಮುಂಭಾಗದಲ್ಲಿರುವ ಕೃಷ್ಣಾ ಸೇತುವೆ ಹತ್ತಿರವಿದ್ದ ಮುಖ್ಯ ಸ್ಥಾವರದಿಂದ ಈ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಲಾಗುತ್ತಿತ್ತು, ಇದರಿಂದ ಬೇಸಿಗೆಯಲ್ಲಿ ಕೃಷ್ಣಾ ನದಿ ನೀರಿಗಾಗಿ ನೆಲೆ ಕಳೆದುಕೊಂಡ ಈ ಗ್ರಾಮಗಳಿಗೆ ನೀರಿನ ಸಮಸ್ಯೆ ಉಂಟಾಗುತ್ತಿತ್ತು. 

ಈಗ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ಸುಮಾರು 5.54 ಕೋಟಿ ರೂ. ವೆಚ್ಚದಲ್ಲಿ ಜಾಕ್‌ ವೆಲ್‌ ನಿರ್ಮಿಸುತ್ತಿದ್ದು, ಅಲ್ಲದೇ 3.05 ಕೋಟಿ ವೆಚ್ಚದಲ್ಲಿ ಪೈಪ್‌ಲೈನ್‌ ಆಧುನೀಕರಣ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಇದರಿಂದ ನೀರಿನ ಸಮಸ್ಯೆ ಶಾಶ್ವತವಾಗಿ ಬಗೆಹರಿದಂತಾಗುತ್ತದೆ. 

Advertisement

ಕ್ಷೇತ್ರದಲ್ಲಿ ಎಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಇಲ್ಲ, ಎಲ್ಲೆಡೆಯೂ ಕುಡಿಯುವ ಬಹುಹಳ್ಳಿ ಯೋಜನೆಯಿಂದ ಕೃಷ್ಣಾ ನದಿಯಿಂದಲೇ ನೀರು ಪೂರೈಸುವ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು. ಈಚೆಗೆ ಕೃಷ್ಣಾ ನದಿ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಶಾಸಕರು ಹಲವಾರು ಸಮಸ್ಯೆಗಳನ್ನು ನಿವೇದಿಸಿಕೊಂಡಿದ್ದು, ಚರ್ಚಿಸಲು ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ ಅವರನ್ನು ಕರೆಸಲು ತಿಳಿಸಿದ್ದರು. 

ಅವರ ಜೊತೆ ಈಗಾಗಲೇ ಮಾತನಾಡಿದ್ದು, ಶಾಸಕರ ಜೊತೆಗೂಡಿ ಬೆಳಗಾವಿ ವಿಧಾನಮಂಡಲದ ಅಧಿವೇಶನ ವೇಳೆಯಲ್ಲಿ ಇಲ್ಲವೇ ಆಲಮಟ್ಟಿಯಲ್ಲಿಯೇ ಸಭೆ ಕರೆದು ಯುಕೆಪಿಯ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.

ಕಾಮಗಾರಿ ನಡೆಯುವ ಸ್ಥಳದಲ್ಲಿ ಕೃಷ್ಣಾ ನದಿ ಹಿನ್ನೀರು ಇದ್ದು, ಇದರಿಂದ ಕಾಮಗಾರಿ ವಿಳಂಬವಾಗಿದೆ. ನದಿ ನೀರು ಇಳಿದ ನಂತರ ಕಾಮಗಾರಿ ತ್ವರಿತವಾಗಿ ಪೂರ್ಣಗೊಳ್ಳಲಿದೆ ಎಂದು ಅಧಿಕಾರಿಗಳು ಸಚಿವರಿಗೆ ತಿಳಿಸಿದರು.  ಸಿ.ಎಸ್‌. ನಾಗರಾಳ, ಸಿ.ಎಂ. ಮಲ್ಲಾಪುರ, ವೀರೇಶಕುಮಾರ ಹೆಬ್ಟಾಳ, ಗೋಪಾಲ ಬಂಡಿವಡ್ಡರ, ಬಾಬು ಬಡೇಗಾರ, ಚಂದ್ರಶೇಖರ ಪಳನಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next