Advertisement

ಎಲ್ಲ ಸಂತ್ರಸ್ತರಿಗೂ ಪರಿಹಾರ: ಡಿಸಿ

02:42 PM Feb 25, 2020 | Suhan S |

ರಾಮದುರ್ಗ: ನೆರೆ ಸಂತ್ರಸ್ತರು ಯಾವುದೇ ಕಾರಣಕ್ಕೂ ಭಯ ಪಡುವ ಅಗತ್ಯವಿಲ್ಲ. ಪ್ರವಾಹ ಪೀಡಿತ ಎಲ್ಲ ಫಲಾನುಭವಿಗಳಿಗೂ ಪರಿಹಾರ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಎಸ್‌.ಬಿ. ಬೊಮ್ಮನಹಳ್ಳಿ ಹೇಳಿದರು.

Advertisement

ಸ್ಥಳೀಯ ಮಿನಿ ವಿಧಾನಸೌಧ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ ನೆರೆ ಸಂತ್ರಸ್ತರ ಸಮಸ್ಯೆ ಹಾಗೂ ಬರಗಾಲಕ್ಕೆ ಸಂಬಂಧಿತ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈಗಾಗಲೇ 1924 ಮನೆಗಳ ಜಿ.ಪಿ.ಎಸ್‌ ಮಾಡಲಾಗಿದೆ.

ಇನ್ನೂಳಿದ 774 ಮನೆಗಳ ಜಿ.ಪಿ.ಎಸ್‌ ಕಾರ್ಯ ಮಾಡಬೇಕಿದೆ. ಪ್ರವಾಹದ ಸಂದರ್ಭದಲ್ಲಿ ಮೃತಪಟ್ಟ ಪಶುಗಳ ವರದಿ ಪಡೆದು ಅದಕ್ಕೂ ಪರಿಹಾರ ನೀಡಲಾಗುವುದು. ಬೆಳೆ ಹಾನಿಗೆ ಈಗಾಗಲೇ ಪರಿಹಾರ ನೀಡಲಾಗಿದ್ದು, ಉಳಿದ ರೈತರ ಪಟ್ಟಿ ಪಡೆದುಕೊಂಡು ಅವರಿಗೂ ಪರಿಹಾರ ಕಲ್ಪಿಸಲಾಗುವುದು. ಅಲ್ಲದೇ ಸವಕಳಿ ಭೂಮಿಯ ಸರ್ವೆ ಕಾರ್ಯ ಮಾಡಲಾಗಿದ್ದು, ಸೈಟ್‌ ಆರಂಭಗೊಂಡ ನಂತರ ಅದಕ್ಕೂ ಪರಿಹಾರ ನೀಡಲಾಗುತ್ತದೆ ಎಂದರು.

ಶಾಸಕ ಮಹಾದೇವಪ್ಪ ಯಾದವಾಡ ಮಾತನಾಡಿ, ತಾಲೂಕಿನಲ್ಲಿ ಪ್ರವಾಹದಿಂದಾಗಿ ಸಾಕಷ್ಟು ಹಾನಿಯಾಗಿದ್ದು, ಅದನ್ನರಿತುಕೊಂಡು ಪರಿಹಾರ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಿ ಈಗಾಗಲೇ ಪರಿಹಾರ ಒದಗಿಸಲಾಗಿದೆ. ಇನ್ನುಳಿದ ಫಲಾನುಭವಿಗಳಿಗೆ ಪರಿಹಾರ ಒದಗಿಸಲು ತಾವು ಪ್ರಯತ್ನಿಸುವುದಾಗಿ ಹೇಳಿದರು.

ನೆರೆ ಸಂತ್ರಸ್ತರ ಪರವಾಗಿ ಅವರಾದಿ ಫಲಹಾರೇಶ್ವರ ಮಠದ ಶ್ರೀ ಶಿವಮೂರ್ತಿ ಸ್ವಾಮೀಜಿ ಮಾತನಾಡಿ, ನೆರೆ ಬಂದು ರೈತರು ಹಾಗೂ ಸಾರ್ವಜನಿಕರ ಬದುಕು ಬೀದಿಗೆ ಬಿದ್ದಿದೆ. ಈ ವಿಚಾರವಾಗಿ ಸಾಕಷ್ಟು ಬಾರಿ ಮನವಿ ಸಲ್ಲಿಸಿ ಹೋರಾಟ ನಡೆಸಿದರೂ ಅಧಿಕಾರಿಗಳು ಸ್ಪಂದಿಸುವ ಕೆಲಸ ಮಾಡುತ್ತಿಲ್ಲ. ಎರಡು ತಿಂಗಳು ಕಳೆದರೆ ಮತ್ತೆ ಮಳೆ ಪ್ರಾರಂಭವಾಗುತ್ತದೆ. ಆ ಸಂದರ್ಭದಲ್ಲಿ ಜನರು ಮನೆ ಹೇಗೆ ಕಟ್ಟಿಕೊಳ್ಳಬೇಕು. ಹದಗೆಟ್ಟ ಭೂಮಿಯನ್ನು ಹೇಗೆ ಸರಿಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.

Advertisement

ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ರಾಮದುರ್ಗ, ತಾಲೂಕಾಧ್ಯಕ್ಷ ಜಗದೀಶ ದೇವರಡ್ಡಿ ಮಾತನಾಡಿ, ಶಿವಸಾಗರ ಸಕ್ಕರೆ ಕಾರ್ಖಾನೆ 15 ಕೋಟಿ ಕಬ್ಬಿನ ಬಾಕಿ ಉಳಿಸಿಕೊಂಡು, ರೈತರ ಟ್ರ್ಯಾಕ್ಟರ್‌ ಬಾಂಡ್‌ ಮೇಲೆ ಕೋಟ್ಯಂತರ ಸಾಲ ಪಡೆದು ರೈತರನ್ನು ಸತಾಯಿಸುವ ಕಾರ್ಖಾನೆ ಮಾಲೀಕರ ಮೇಲೆ ಏಕೆ ಕ್ರಮ ಜರುಗಿಸುತ್ತಿಲ್ಲ ಎಂದು ಪ್ರಶ್ನಿಸಿದರು. ಎಲ್ಲವನ್ನು ಅವಲೋಕಿಸಿದ ಜಿಲ್ಲಾಧಿಕಾರಿಗಳು ಕಾರ್ಖಾನೆ ಮಾಲೀಕರ ಮೇಲೆ ಕ್ರಮ ಕೈಗೊಳ್ಳಲು ಎಸ್‌.ಪಿ ಅವರಿಗೆ ಸೂಚಿಸಲಾಗುವುದು. ನೆರೆ ಸಂತ್ರಸ್ತರ ಸಮಸ್ಯೆಗಳನ್ನು ತ್ವರಿತಗತಿಯಲ್ಲಿ ಬಗೆ ಹರಿಸುವುದಾಗಿ ಹೇಳಿದರು.

ಸಭೆಯಲ್ಲಿ ಬೈಲಹೊಂಗಲ ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ, ತಹಶೀಲ್ದಾರ ಗಿರೀಶ ಸ್ವಾದಿ, ವಿವಿಧ ರೈತಪರ ಸಂಘಟನೆಗಳು, ಮಹಿಳಾ ಸಂಘಗಳ ಸದಸ್ಯರು ಸೇರಿದಂತೆ ನೆರೆ ಸಂತ್ರಸ್ತರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next