Advertisement

ದಿಲ್ಲಿ ರಾಜ್ಯವಲ್ಲ ; ಲೆ|ಗವರ್ನರ್‌ ಅಂತಿಮವಲ್ಲ

06:00 AM Jul 05, 2018 | Team Udayavani |

ಹೊಸದಿಲ್ಲಿ: ದಿಲ್ಲಿಯ ಲೆಫ್ಟಿನೆಂಟ್‌ ಗವರ್ನರ್‌ ಅಧಿಕಾರಕ್ಕೆ ಅಂಕುಶ ಹಾಕಿರುವ ಸುಪ್ರೀಂ ಕೋರ್ಟ್‌, ದಿಲ್ಲಿಗೂ ಸಂಪೂರ್ಣ ರಾಜ್ಯ ಸ್ಥಾನಮಾನ ನೀಡಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿದೆ. ದಿಲ್ಲಿಯಲ್ಲಿ ಲೆಫ್ಟಿನೆಂಟ್‌ ಗವರ್ನರ್‌ಗೆ ಸಂಪೂರ್ಣ ಅಧಿಕಾರ ಎಂಬ 2016ರ ಆ.4ರ ದಿಲ್ಲಿ ಹೈಕೋರ್ಟ್‌ ತೀರ್ಪನ್ನು ತಿರಸ್ಕರಿಸಿರುವ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಸಂವಿಧಾನ ಪೀಠ, ಲೆಫ್ಟಿನೆಂಟ್‌ ಗವರ್ನರ್‌, ಚುನಾಯಿತ  ಸರಕಾರದ ಸಲಹೆಯಂತೆ ಅಧಿಕಾರ ನಿರ್ವಹಿಸಬೇಕು ಎಂದೂ ಸೂಚನೆ ನೀಡಿದೆ. ಅಲ್ಲದೆ ಇವರಿಗೆ ಯಾವುದೇ ಸ್ವತಂತ್ರ ಅಧಿಕಾರ ಇಲ್ಲವೆಂದು ಸ್ಪಷ್ಟವಾಗಿ ಹೇಳಿದೆ.

Advertisement

ಮುಖ್ಯಮಂತ್ರಿ ಅರವಿಂದ ಕೇಜ್ರಿ ವಾಲ್‌ ಮತ್ತು ಲೆಫ್ಟಿನೆಂಟ್‌ ಗವರ್ನರ್‌ ಅನಿಲ್‌ ಬೈಜಲ್‌ ನಡುವೆ ತಿಕ್ಕಾಟದ ಬಗ್ಗೆಯೂ ಪ್ರಸ್ತಾವಿಸಿರುವ ಕೋರ್ಟ್‌, ಇಬ್ಬರೂ ಪರಸ್ಪರ ಹೊಂದಿಕೊಂಡು ಆಡಳಿತ ನಡೆಸಿಕೊಂಡು ಹೋಗಬೇಕು ಎಂದೂ ಸೂಚಿಸಿದೆ. ಇದಷ್ಟೇ ಅಲ್ಲ, ಪೊಲೀಸ್‌, ಜಮೀನು ಮತ್ತು ಸಾರ್ವಜನಿಕ ಜೀವನ (ಪಬ್ಲಿಕ್‌ ಆರ್ಡರ್‌)ಕ್ಕೆ ಸಂಬಂಧಿಸಿದ ವಿಚಾರಗಳಿಗೆ ಹೊರತುಪಡಿಸಿ ಇತರ ವಿಚಾರಗಳಲ್ಲಿ ದಿಲ್ಲಿ ಸರಕಾರ ನಿಯಮ ರೂಪಿಸಿ ಜಾರಿಗೊಳಿಸಬಹುದು ಎಂದು ಹೇಳಿದೆ

ಒಮ್ಮತದ ತೀರ್ಪು: ಮುಖ್ಯ ನ್ಯಾಯ ಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಐವರು ನ್ಯಾಯಮೂರ್ತಿಗಳುಳ್ಳ ಸಂವಿಧಾನಪೀಠ  ಸರ್ವಸಮ್ಮತವಾಗಿ ಈ ತೀರ್ಪು ನೀಡಿದೆ. ಲೆಫ್ಟಿನೆಂಟ್‌ ಗವರ್ನರ್‌ ಚುನಾಯಿತ ಸರಕಾರದ ಸಹಾಯ ಮತ್ತು ಸಲಹೆಗಳ ಜತೆಗೂಡಿಯೇ ಕಾರ್ಯ ನಿರ್ವಹಿಸಬೇಕೆಂದು ಸಾರಿದೆ. ಜತೆಗೆ ಸಹಮತದಿಂದಲೇ ಕೆಲಸ ಮಾಡಬೇಕು. ಕೇಂದ್ರ ಸರಕಾರವೇ ಲೆಫ್ಟಿನೆಂಟ್‌ ಗವರ್ನರ್‌ರನ್ನು ನೇಮಕ ಮಾಡಿದರೂ ಅವರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಬಂಧಕರಾಗಿ ಇರುವಂತಿಲ್ಲ ಎಂದು ನೆನಪಿಸಿದೆ. 

“ನಿಜವಾದ ಅಧಿಕಾರ ಇರುವುದೇ ಚುನಾಯಿತ ಸರಕಾರದಲ್ಲಿ. ಅದರ ಅರ್ಥ ಸಲಹೆ ಮತ್ತು ಸಹಕಾರ ಜತೆಗೆ ಲೆಫ್ಟಿನೆಂಟ್‌ ಗವರ್ನರ್‌ ಕರ್ತವ್ಯ ನಿರ್ವಹಿಸಬೇಕು’ ಎಂದು ಪೀಠದಲ್ಲಿದ್ದ ನ್ಯಾ| ಡಿ.ವೈ.ಚಂದ್ರಚೂಡ್‌ ಹೇಳಿದ್ದಾರೆ. ಸಂಪುಟದಲ್ಲಿನ ಸಚಿವರು ಜನರಿಗೆ ಉತ್ತರ ಹೇಳುವ ಹೊಣೆ ಹೊಂದಿರುತ್ತಾರೆ ಎಂಬ ಅಂಶ ಲೆಫ್ಟಿನೆಂಟ್‌ ಗವರ್ನರ್‌ ತಿಳಿದಿರಬೇಕು ಎಂದಿದ್ದಾರೆ. ಆಡಳಿತದ ಪ್ರತಿ ಹಂತದಲ್ಲಿಯೂ ಲೆಫ್ಟಿನೆಂಟ್‌ ಗವರ್ನರ್‌ ಹಸ್ತಕ್ಷೇಪ ನಡೆಸುತ್ತಿದ್ದರೆ ಚುನಾಯಿತ ಪ್ರತಿನಿಧಿಗಳ ಮಹತ್ವ ಶೂನ್ಯವಾಗುತ್ತದೆ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

ಅನುಮತಿ ಅಗತ್ಯವಿಲ್ಲ: ಇದೇ ವೇಳೆ ದೈನಂದಿನ ಆಡಳಿತ ನಿರ್ವಹಿಸಲು ಲೆಫ್ಟಿನೆಂಟ್‌ ಗವರ್ನರ್‌ ಅನುಮತಿ ಪಡೆದು ಕೊಳ್ಳಬೇಕಾದ ಅಗತ್ಯವಿಲ್ಲ ಎಂದು ನ್ಯಾ| ಅಶೋಕ್‌ ಭೂಷಣ್‌ ತಮ್ಮ ಟಿಪ್ಪಣಿ ಯಲ್ಲಿ ಹೇಳಿದ್ದಾರೆ. ಈ ಮೂಲಕ ಇದೇ ಮೊದಲ ಬಾರಿಗೆ  ಸುಪ್ರೀಂ ಕೋರ್ಟ್‌ ಲೆಫ್ಟಿನೆಂಟ್‌ ಗವರ್ನರ್‌ ಅಧಿಕಾರ ವ್ಯಾಪ್ತಿ ಯನ್ನೂ ನಿಗದಿ ಮಾಡಿದಂತಾಗಿದೆ.

Advertisement

ಪೂರ್ಣ ರಾಜ್ಯವಲ್ಲ: ಇದರ ಜತೆಗೆ ದಿಲ್ಲಿಗೆ ಪೂರ್ಣ ರಾಜ್ಯ ಸ್ಥಾನಮಾನವಿಲ್ಲ ಎಂಬ ಅಂಶವನ್ನು ಪುನರುತ್ಛರಿಸಿದ ಸುಪ್ರೀಂ ಕೋರ್ಟ್‌ ಹೊಸದಿಲ್ಲಿ ಮುನಿಸಿಪಲ್‌ ಕಾರ್ಪೊರೇಷನ್‌ ಮತ್ತು ಪಂಜಾಬ್‌ ನಡುವಿನ ಪ್ರಕರಣದಲ್ಲಿ ದಿಲ್ಲಿ ಪೂರ್ಣ ರಾಜ್ಯವಲ್ಲ ಎಂದು ಉಲ್ಲೇಖೀಸಲಾಗಿತ್ತು. ಜತೆಗೆ ಲೆಫ್ಟಿನೆಂಟ್‌ ಗವರ್ನರ್‌ “ಸೀಮಿತ ವ್ಯಾಪ್ತಿಯ ಆಡಳಿತಗಾರ’ ಎಂದು ನ್ಯಾಯಪೀಠ ಹೇಳಿದೆ. ಹೊಸದಿಲ್ಲಿ ದೇಶದ ರಾಜಧಾನಿ ಮತ್ತು ಅದಕ್ಕೆ ವಿಶೇಷ ಮಾನ್ಯತೆ ಇದೆ ಎಂಬ ಎರಡು ವಿಚಾರಗಳು ಜತೆಯಾಗಿ ಸಾಗಬೇಕು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಇದಷ್ಟೇ ಅಲ್ಲ, ಮುಖ್ಯಮಂತ್ರಿ ಮತ್ತು ಸಚಿವರೂ ದಿಲ್ಲಿಗೆ ರಾಜ್ಯದ ಸ್ಥಾನಮಾನವಿಲ್ಲ ಎಂಬುದನ್ನು ಮನಗಂಡು ಕೆಲಸ ಮಾಡಿಕೊಂಡು ಹೋಗಬೇಕು ಎಂದು ಕೋರ್ಟ್‌ ಹೇಳಿದೆ.

ರಿಲಯೆನ್ಸ್‌  ಕೇಸ್‌ನಿಂದ ಶುರು
ದಿಲ್ಲಿಯ ಅಧಿಕಾರ ಯಾರಿಗೆ ಸೇರಿದ್ದು ಎಂಬ ವಿವಾದ ಶುರುವಾಗಿದ್ದು ಕುತೂಹಲವಾದದ್ದೇ. 2014ರಲ್ಲಿ ದಿಲ್ಲಿಯ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರಿಲಯೆನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ (ಆರ್‌ಐಎಲ್‌) ಜತೆಗೂಡಿ ಅನಿಲ ದರ ನಿಗದಿ ಪ್ರಕರಣದಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಲಿ, ಮಾಜಿ ಸಚಿವ ಮುರಳಿ ದೇವ್ರಾ ವಿರುದ್ಧ ಕೇಸು ದಾಖಲಿಸುವ ಪ್ರಕರಣದಿಂದ ಆರಂಭವಾಯಿತು.

ಸುಪ್ರೀಂ ಕೋರ್ಟ್‌ ತೀರ್ಪು ಪ್ರಜಾಪ್ರಭುತ್ವಕ್ಕೆ  ಸಂದ ಜಯ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಹೇಳಿದ್ದಾರೆ. ಈ ಬಗ್ಗೆ ಅವರು ಟ್ವೀಟ್‌ ಮಾಡಿದ್ದಾರೆ. ದಿಲ್ಲಿಯ ಜನತೆಗೂ ಇದು ಜಯದ ವಿಚಾರವೇ ಎಂದು ಬರೆದುಕೊಂಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next