ಸೋಮವಾರಪೇಟೆ :ಬೆಂಗಳೂರಿನ ಮಲೆನಾಡು ಗೆಳೆಯರ ಸಂಘದ ವತಿಯಿಂದ ಇಲ್ಲಿನ ಪತ್ರಿಕಾಭವನದಲ್ಲಿ ಕಳೆದ ಸಾಲಿನ ಮಳೆಹಾನಿ ಸಂತ್ರಸ್ತರಿಗೆ ಸಹಾಯಧನ ವಿತರಿಸಲಾಯಿತು.
ಕಳೆದ ಆಗಸ್ಟ್‌ನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಆಸ್ತಿ, ಮನೆ ಕಳೆದುಕೊಂಡು, ದಾಖಲೆ ಇಲ್ಲದೆ ಸರಕಾರದ ಸೌಲಭ್ಯಗಳಿಂದ ವಂಚಿತ ರಾಗಿದ್ದ, ಆಯ್ದ ಬಡ ಫಲಾನುಭವಿಗಳಿಗೆ ಸಹಾಯಧನವನ್ನು ನೀಡಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್.ಮುತ್ತಣ್ಣ ಮಾತನಾಡಿ, ಕಳೆದ ವರ್ಷ ಸುರಿದ ಧಾರಾಕಾರ ಮಳೆ ಮತ್ತು ಭೂ ಕುಸಿತ ಸಂಭವಿಸಿದ ಸಂದರ್ಭ ಸಂಕಷ್ಟಕ್ಕೆ ಸಿಲುಕಿದ ಗ್ರಾಮೀಣ ಭಾಗದ ಜನರು, ಜೀವ ಭಯದಿಂದ ಪಟ್ಟಣಕ್ಕೆ ಬಂದರು. ಸಂತ್ರಸ್ತರಿಗೆ ಒಕ್ಕಲಿಗರ ಸಂಘ ಹಾಗೂ ಕೊಡವ ಸಮಾಜದಲ್ಲಿ ಆಶ್ರಯ ಕಲ್ಪಿಸಲಾಗಿತ್ತು. ರಾಜ್ಯದ ಬಹುತೇಕ ಕಡೆಗಳಿಂದ ಜನರು ಸಂತ್ರಸ್ಥರಿಗೆ ಸಹಾಯಹಸ್ತ ನೀಡಿದರು. ಮಲೆನಾಡು ಗೆಳೆಯರ ಸಂಘದವರು ಈ ಹಿಂದೆಯೂ ಸಂತ್ರಸ್ತರಿಗೆ ಸಹಾಯ ಮಾಡಿದ್ದಾರೆ. ಈಗಲೂ ಸಹಾಯ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಜಿ.ಪಂ. ಸದಸ್ಯ ಬಿ.ಜೆ.ದೀಪಕ್ ಮಾತನಾಡಿ, ಪ್ರಕೃತಿ ವಿಕೋಪದಿಂದ ಆಸ್ತಿ ಪಾಸ್ತಿ ಕಳೆದಕೊಂಡ ಅನೇಕ ಸಂತ್ರಸ್ತರಿಗೆ ಸೂಕ್ತ ಆಸ್ತಿ ದಾಖಲೆ ಇಲ್ಲದಿದ್ದರೂ ಮಾನವೀಯ ದೃಷ್ಟಿಯಿಂದ ಸರಕಾರ ಪರಿಹಾರ ಒದಗಿಸಬೇಕು. ಸರಕಾರೇತರ ಸಂಸ್ಥೆಗಳು ಇಂತಹವರಿಗೆ ಸಹಾಯ ಮಾಡಬೇಕಾಗಿದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಸಹಕಾರ ನೀಡಬೇಕಾಗಿದೆ ಎಂದರು.
ಬೆಂಗಳೂರಿನಲ್ಲಿ ವಿವಿಧ ಸಂಸ್ಥೆಗಳಲ್ಲಿ ನೌಕರಿ ಮಾಡುತ್ತಿರುವ ಮಲೆನಾಡು ಗೆಳೆ ಯರ ಸಮಿತಿಯವರು ತಮ್ಮ ಕೈಲಾದಷ್ಟು ಹಣವನ್ನು ನೀಡಿದ್ದಾರೆ. ಸಂಗ್ರಹವಾದ ಹಣವನ್ನು ಕಷ್ಟದ ಲ್ಲಿರುವವರಿಗೆ ಸಹಾಯ ಮಾಡುತ್ತ, ಸಮಾಜಮುಖೀ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದೇವೆ ಎಂದು ಗೆಳೆಯರ ಸಂಘದ ಅಧ್ಯಕ್ಷ ಚಿನ್ನೇಗೌಡ ಹೇಳಿದರು. ವೇದಿಕೆಯಲ್ಲಿ ಮಾಜಿ ಸೈನಿಕ ಎಸ್.ಎಂ.ಬೆಳ್ಳಿಯಪ್ಪ, ಕಾರ್ಮಿಕ ಮುಖಂಡ ಟಿ.ಜೆ.ಗಣೇಶ್, ಗುರುರಾಜ್, ಶಶಿ, ಗೌತಮ್ ಕಿರಗಂದೂರು ಉಪಸ್ಥಿತರಿದ್ದರು.