Advertisement

ಮುಳುಗಡೆ ಕೃಷಿ ಭೂಮಿಗೆ ತಿಂಗಳೊಳಗೆ ಪರಿಹಾರ ವಿತರಣೆ?

12:43 AM Jan 13, 2020 | Team Udayavani |

ಬಂಟ್ವಾಳ: ಮಂಗಳೂರು ನಗರಕ್ಕೆ ಕುಡಿಯುವ ನೀರು ಪೂರೈಕೆಯ ತುಂಬೆಯ ನೂತನ ಅಣೆಕಟ್ಟಿನಲ್ಲಿ 7 ಮೀಟರ್‌ ನೀರು ನಿಲ್ಲಿಸುವ ಕುರಿತು ಸರ್ವೇ ಆರಂಭಗೊಂಡಿದೆ. ಆದರೆ 6 ಮೀ. ನೀರು ನಿಲ್ಲಿಸಿದ್ದರಿಂದ ಮುಳುಗಡೆಯಾದ ರೈತರಿಗೆ ಇನ್ನೂ ಪೂರ್ಣ ಪ್ರಮಾಣದಲ್ಲಿ
ಪರಿಹಾರ ವಿತರಣೆಯಾಗಿಲ್ಲ. ಈ ತಿಂಗಳ ಅಂತ್ಯ ದೊಳಗೆ ದಾಖಲೆ ಸರಿಯಿರುವ ಬಹುತೇಕರಿಗೆ ಪರಿಹಾರಧನ ವಿತರಣೆ ಪೂರ್ಣಗೊಳಿಸುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ.

Advertisement

ಸಂತ್ರಸ್ತ ಕೃಷಿಕರಿಗೆ ಪರಿಹಾರ ನೀಡುವುದಕ್ಕಾಗಿ ಒಟ್ಟು 17.5 ಕೋ.ರೂ. ಮಂಜೂರುಗೊಂಡಿದ್ದು, ಪಾಲಿಕೆಯ ಅಧಿಕಾರಿಗಳ ಮಾಹಿತಿಯ ಪ್ರಕಾರ ಈ ತನಕ ಸುಮಾರು 10 ಕೋ.ರೂ. ವಿತರಣೆಯಾಗಿದೆ. ಈ ತಿಂಗಳೊಳಗೆ ಸುಮಾರು 20 ರೈತರಿಗೆ ವಿತರಿಸುವ ಗುರಿ ಇದೆ.

ಇಲ್ಲಿ ಖರೀದಿ ಪ್ರಕ್ರಿಯೆ ನಡೆಸಿಯೇ ಪರಿಹಾರ ವಿತರಣೆ ಯಾಗುವುದರಿಂದ ನಕ್ಷೆಗಳು ಸರಿಯಿಲ್ಲದೆ, ಮೈನರ್‌ ರೈಟ್ಸ್‌, ಹೆಸರುಗಳಲ್ಲಿ ವ್ಯತ್ಯಾಸವಿದ್ದರೆ ವಿಳಂಬವಾಗುತ್ತಿದೆ. ತುಂಬೆ ಡ್ಯಾಂ ಸಂತ್ರಸ್ತ ರೈತರ ಹೋರಾಟ ಸಮಿತಿಯು ಶೀಘ್ರ ಪರಿಹಾರ ಧನ ವಿತರಣೆಗೆ ಜಿಲ್ಲಾ ಉಸ್ತುವಾರಿ ಸಚಿವರನ್ನು ಆಗ್ರಹಿಸಿದೆ.

65.68 ಎಕರೆ ಭೂ ಪ್ರದೇಶ
ಅಣೆಕಟ್ಟಿನಲ್ಲಿ 6 ಮೀ. ನೀರು ನಿಲ್ಲಿಸಿದ ಪರಿಣಾಮ ಬಂಟ್ವಾಳ ತಾಲೂಕಿನ ಸಜಿಪಮುನ್ನೂರು, ಪಾಣೆಮಂಗಳೂರು, ಬಿ. ಮೂಡ ಮತ್ತು ಕಳ್ಳಿಗೆ ಹೀಗೆ 4 ಗ್ರಾಮಗಳ ಸುಮಾರು ಒಟ್ಟು 65.68 ಎಕರೆ ಭೂ ಪ್ರದೇಶ ಜಲಾವೃತವಾಗಿದೆ. 4ರಿಂದ 5 ಮೀ. ನೀರು ನಿಲ್ಲಿಸಿದಾಗ 20.53 ಎಕರೆ ಕೃಷಿ ಭೂಮಿ ಜಲಾವೃತವಾಗಿದ್ದು, 28 ಹಿಡುವಳಿದಾರರು ಸಂತ್ರಸ್ತರಾಗಿದ್ದರು. 5ರಿಂದ 6 ಮೀ. ನೀರು ನಿಲ್ಲಿಸಿದಾಗ 45.11 ಎಕರೆ ಕೃಷಿ ಭೂಮಿ ಜಲಾವೃತವಾಗಿದ್ದು, 63 ರೈತರ ಜಮೀನು ಸೇರಿತ್ತು.

ಸುಮಾರು 30 ಅರ್ಜಿಗಳು ಬಾಕಿಯಿದ್ದು, ಒಂದೇ ಕುಟುಂಬದ ಎರಡೆರಡು ಅರ್ಜಿಗಳಿರುವ ಪ್ರಕರಣಗಳಿವೆ. ಏಳೆಂಟು ಅರ್ಜಿಗಳು ವಿವಾದ ಹೊಂದಿವೆ. ಇವನ್ನು ಹೊರತು ಪಡಿಸಿ ಅವಶ್ಯವಿರುವ ಕೆಲವು ದಾಖಲೆ ನೀಡಿದರೆ ಇತ್ಯರ್ಥ ಸಾಧ್ಯವಿರುವ ಸುಮಾರು 20 ಅರ್ಜಿಗಳ ಶೀಘ್ರ ವಿಲೇವಾರಿಗೆ ಪ್ರಯತ್ನ ನಡೆಯುತ್ತಿದೆ. ಆದರೆ 12 ರೈತರು ಯಾವುದೇ ದಾಖಲೆ ನೀಡದೆ ಇರುವುದರಿಂದ ಪರಿಹಾರ ನೀಡುವ ಪ್ರಯತ್ನ ನಡೆದಿಲ್ಲ ಎನ್ನುತ್ತಾರೆ ಅಧಿಕಾರಿಗಳು.

Advertisement

ರೈತರಿಗೆ ಈಗಾಗಲೇ ಸುಮಾರು 10 ಕೋ.ರೂ. ಪರಿಹಾರ ನೀಡಲಾಗಿದೆ. ದಾಖಲೆ ನೀಡಿದರೆ 5-6 ಮೀ.ನೊಳಗೆ ಬರುವ ಸುಮಾರು 20 ರೈತರಿಗೆ ಈ ತಿಂಗಳಿನ ಅಂತ್ಯದೊಳಗೆ ಪರಿಹಾರ ನೀಡುತ್ತೇವೆ. ಇಲ್ಲದಿದ್ದರೆ ಮತ್ತೂಂದು ಸಭೆ ಕರೆದು ಚರ್ಚೆ ನಡೆಸಬೇಕಿದೆ. ಇಲ್ಲಿ ಭೂಮಿಯ ಮಾರಾಟ ಪ್ರಕ್ರಿಯೆ ನಡೆಯುವುದರಿಂದ ದಾಖಲೆಗಳಲ್ಲಿ ಕೊಂಚ ಗೊಂದಲ ಕಂಡುಬಂದರೂ ಪರಿಹಾರ ನೀಡಲು ಸಾಧ್ಯವಾಗುವುದಿಲ್ಲ.
– ಗಾಯತ್ರಿ ನಾಯಕ್‌
ವಿಶೇಷ ಭೂ ಸ್ವಾಧೀನಾಧಿಕಾರಿ, ಮಂಗಳೂರು ಮನಪಾ

ದಾಖಲೆಯೇ ನೀಡಿಲ್ಲ !
4-5 ಮೀ. ನೀರು ನಿಲ್ಲಿಸಿದಾಗ ಮುಳುಗಿದ ಕೃಷಿಭೂಮಿಯ ಪೈಕಿ ವಿವಾದಿತ ಭೂಮಿ ಹೊರತುಪಡಿಸಿ ಉಳಿದ ಎಲ್ಲ ಸಂತ್ರಸ್ತರಿಗೂ ಸುಮಾರು 5 ಕೋ.ರೂ.ಗಳಷ್ಟು ಪರಿಹಾರ ನೀಡಿದೆ. ಕಳೆದ ಬಾರಿ 5-6 ಮೀ.ವರೆಗೆ ನೀರು ನಿಲ್ಲಿಸಲಾಗಿದ್ದು, 21 ರೈತರ ಅರ್ಜಿಗಳ ನೋಂದಣಿ ಪೂರ್ಣಗೊಂಡಿದೆ.

– ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next