ಮುಂಬಯಿ : ರಿಲಯನ್ಸ್ ಜಿಯೋ ಇನ್‌ಫೋಕಾಮ್ ಬಳಕೆದಾರರಿಗೆ ಇದೊಂದು ಸಿಹಿ ಸುದ್ದಿ. ಜಿಯೋ ಬಳಕೆದಾರರು ಆನಂದಿಸುತ್ತಿರುವ ಆರು ತಿಂಗಳ ಉಚಿತ ಡಾಟಾ ಸೇವೆ ಮಾರ್ಚ್ 31ಕ್ಕೆ ಕೊನೆಗೊಳ್ಳಲಿದೆಯಾದರೂ ಅವರು ಆ ಬಳಿಕವೂ ಇನ್ನೂ ಮೂರು ತಿಂಗಳ ಮಟ್ಟಿಗೆ ಸಾಮಾನ್ಯ ದರದಲ್ಲಿ, ಫ್ರೀ ವಾಯ್ಸ ಕಾಲ್‌ಗಳೊಂದಿಗೆ ಈಗಿನ ಡಾಟಾ ಸೇವೆಯನ್ನು ಆನಂದಿಸಬಹುದಾಗಿದೆ.
ಈ ವರ್ಷ ಜೂನ್ 30ರ ವರೆಗಿನ ಅವಧಿಗೆ ಅನ್ವಯವಾಗುವ ಹೊಸ ಟ್ಯಾರಿಫ್ ಪ್ಲಾನ್ ಅನ್ನು ಇದೀಗ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ರೂಪಿಸುತ್ತಿರುವುದಾಗಿ ತಿಳಿದು ಬಂದಿದೆ.
ಹೊಸ ಪರಿಚಯಾತ್ಮಕ ಟ್ಯಾರಿಫ್ ಪ್ಲಾನ್ 100 ರೂ. ಶುಲ್ಕದೊಂದಿಗೆ ಇದ್ದು ಇದರೊಂದಿಗೆ ವಾಯ್ಸ ಕಾಲ್ ಉಚಿತವಾಗಿರುತ್ತದೆ ಎಂದು ತಿಳಿದು ಬಂದಿದೆ. “ನಾವು ಆದಾಯ ಗಳಿಕೆಯನ್ನು ಆರಂಭಿಸಬೇಕಾಗಿದೆ’ ಎಂದು ಹೆಸರು ತಿಳಿಸಬಯಸದ ಜಿಯೋ ವ್ಯಕ್ತಿ ಹೇಳಿದ್ದಾರೆ. ಆದರೆ ಈ ಬಗ್ಗೆ ಜಿಯೋ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಉಚಿತ ವಾಯ್ಸ ಮತ್ತು ಡಾಟಾ ಆಫರ್‌ನೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದ ಜಿಯೋ ಕಂಪೆನಿಗೆ ಪ್ರಕೃತ 7.20 ಕೋಟಿ ಗ್ರಾಹರು ಇದ್ದಾರೆ. ಕೇವಲ ನಾಲ್ಕು ತಿಂಗಳಲ್ಲಿ ಜಿಯೋ ಕಂಪೆನಿ ಇದನ್ನು ಸಾಧಿಸಿದೆ. ಕಳೆದ ವರ್ಷ ಸೆಪ್ಟಂಬರ್ 5ರಂದು ಜಿಯೋ ಸೇವೆಯನ್ನು ಆರಂಭಿಸಲಾಗಿತ್ತು.
ಜಿಯೋ ಒಡ್ಡಿದ ಕತ್ತುಕತ್ತಿನ ಸ್ಪರ್ಧೆಯನ್ನು ಎದುರಿಸಲು ಭಾರ್ತಿ ಏರ್‌ಟೆಲ್, ಐಡಿಯಾ ಸೆಲ್ಯುಲರ್ ಮತ್ತು ವೋಡಾಫೋನ್ ಇಂಡಿಯಾ ಕೂಡ ತಮ್ಮ ಗ್ರಾಹಕರಿಗೆ ಬಂಪರ್ ಆಫರ್ ನೀಡಿದ್ದವು.