Advertisement

ಅಧಿಕ ಮಾಸದ ವಿಶೇಷ ಪದ್ಮಿನಿ ಏಕಾದಶಿ

11:51 PM Sep 26, 2020 | sudhir |

ಹಿಂದೂ ಶಾಸ್ತ್ರ ಸಂಪ್ರದಾಯ ದಲ್ಲಿ ಏಕಾದಶೀ ವ್ರತಕ್ಕೆ ಬಹಳ ಮಹತ್ವವಿದೆ. ಈ ದಿನ ಪೂರ್ತಿ ಉಪವಾಸವಿದ್ದು, ದೇವರ ನಾಮ ಸ್ಮರಣೆ, ವಿಶೇಷ ಪೂಜಾ ಕೈಂಕರ್ಯ, ದಾನಧರ್ಮಗಳನ್ನು ಮಾಡುವುದು ಶ್ರೇಷ್ಠ ಎಂದು ಪರಿಗಣಿಸಲಾಗುತ್ತದೆ.
ಶುಕ್ಲ ಪಕ್ಷದಲ್ಲಿ ಕಾಮದಾ, ಮೋಹಿನೀ, ನಿರ್ಜಲಾ, ಶಯನೀ, ಪುತ್ರದಾ, ಪರಿವರ್ತಿನಿ, ಪಾಶಾಂಕುಶ, ಪ್ರಬೋಧಿನೀ, ಮೋಕ್ಷದಾ, ಪೌಶಾ ಪುತ್ರದಾ, ಜಯ, ಆಮಲಕೀ, ಪದ್ಮಿನೀ ಹಾಗೂ ಕೃಷ್ಣ ಪಕ್ಷದಲ್ಲಿ ವರೂಥಿನಿ, ಅಪರಾ ಯೋಗೀನಿ, ಕಾಮಿಕಾ, ಅಜ, ಇಂದಿರಾ, ರಮಾ, ಉತ್ಪತ್ತಿ, ಸಫ‌ಲಾ, ಷಟಿ¤ಲಾ, ವಿಜಯಾ, ಪಾಪಮೋಚನೀ, ಪರಮ ಹೀಗೆ ಮಾರ್ಚ್‌- ಎಪ್ರಿಲ್‌ ತಿಂಗಳಿನಿಂದ ಎರಡರಂತೆ ವರ್ಷದಲ್ಲಿ ಒಟ್ಟು 24 ಏಕಾದಶಿ ವ್ರತಾಚರಣೆ ಮಾಡಲಾಗುತ್ತದೆ. ಆದರೆ ಈ ಬಾರಿ ಅಧಿಕ ಮಾಸದಲ್ಲಿ ಅಂದರೆ ಸೆಪ್ಟಂಬರ್‌ 27ರಂದು ಪದ್ಮಿನಿ ಏಕಾದಶಿ ಬಂದಿರುವುದು ವಿಶೇಷ. ಯಾಕೆಂದರೆ ಇದು ಪ್ರತಿ 2 ಅಥವಾ 3 ವರ್ಷಗಳಿಗೊಮ್ಮೆ ಮಾತ್ರ ಬರುತ್ತದೆ.

Advertisement

ಅಧಿಕ ಮಾಸದಲ್ಲಿ ಬರುವ ಏಕಾದಶಿಯು ಸಾಮಾನ್ಯವಾಗಿ ಆಷಾಢ ತಿಂಗಳಲ್ಲಿ ಅಂದರೆ ಜುಲೈ ಅಥವಾ ಆಗಸ್ಟ್‌ನಲ್ಲಿ ಬರುವುದರಿಂದ ಇದನ್ನು “ಆಷಾಢ ಏಕಾದಶಿ’ ಎಂದೇ ಕರೆಯಲಾಗುತ್ತದೆ. ಆದರೆ ಈ ಬಾರಿ ಅಧಿಕ ಮಾಸ ಅಂದರೆ ಅಶ್ವಯುಜ ಮಾಸದಲ್ಲಿ ಏಕಾದಶಿ ಬಂದಿರುವುದರಿಂದ ಇದನ್ನು ವಿಶೇಷವಾಗಿ ಪದ್ಮಿನಿ ಏಕಾದಶಿ ಎನ್ನುತ್ತಾರೆ. ಈ ಹೆಸರು ಬರಲು ಒಂದು ಕಥೆಯೂ ಇದೆ.

ಸ್ಕಾಂದ ಪುರಾಣದಲ್ಲಿ ಹೇಳಿರುವ ಪ್ರಕಾರ ಯುಧಿಷ್ಠಿರನಿಗೆ ಶ್ರೀಕೃಷ್ಣನು ಈ ಏಕಾದಶಿಯ ವಿಶೇಷತೆಯನ್ನು ಹೇಳುತ್ತಾನೆ. ರಾಜ ಕಾರ್ತವೀರ್ಯನ ರಾಣಿಯಾದ ಪದ್ಮಿನಿಯು ಮೊದಲು ಈ ಏಕಾದಶಿಯ ಬಗ್ಗೆ ತಿಳಿದು ಸಂಪೂರ್ಣ ಭಕ್ತಿಭಾವದಿಂದ ವ್ರತಾಚರಣೆ ಮಾಡುತ್ತಾಳೆ. ಹಿಂದಿನ ಜನ್ಮದ ಪಾಪಕರ್ಮಗಳಿಂದ ಮುಕ್ತಳಾಗಿ ವೈಕುಂಠದಲ್ಲಿ ಸ್ಥಾನ ಪಡೆಯುತ್ತಾಳೆ. ಹೀಗಾಗಿ ಅಧಿಕ ಮಾಸದಲ್ಲಿ ಬರುವ ಈ ಏಕಾದಶಿಗೆ ಆಕೆಯ ಹೆಸರನ್ನು ಇಡಲಾಗಿದೆ.

ಆಚರಣೆಗಳು
ಪದ್ಮಿನಿ ಏಕಾದಶಿಯಲ್ಲಿ ಹಲವಾರು ಆಚರಣೆಗಳು ನಡೆಯುತ್ತವೆ. ಮುಖ್ಯವಾಗಿ ಅಂದು ಬೆಳಗ್ಗೆ ಸೂರ್ಯೋದಯಕ್ಕೆ ಮುಂಚೆ ಎದ್ದು ಸ್ನಾನ ಮಾಡಿ ದೇಹ ಮತ್ತು ಮನಸ್ಸನ್ನು ಶುದ್ಧಗೊಳಿಸಬೇಕು. ಈ ದಿನ ಕಠಿನ ಉಪವಾಸ ಮಾಡುವುದು ವಿಶೇಷ. ಅದರಲ್ಲೂ ಮುಖ್ಯವಾಗಿ ಉದ್ದಿನ ಬೇಳೆ, ಅಕ್ಕಿ, ಸೊಪ್ಪು, ಬಟಾಣಿ, ಜೇನುತುಪ್ಪ, ಈರುಳ್ಳಿ, ಬೆಳ್ಳುಳ್ಳಿಯನ್ನು ಸೇವಿಸುವಂತಿಲ್ಲ. ಕಠಿನ ವ್ರತ ಮಾಡಲು ಸಾಧ್ಯವಾಗದವರು ಸಾತ್ವಿಕ ಭೋಜನದಲ್ಲಿ ಕೇವಲ ಹಾಲು ಹಣ್ಣು ಬಳಸಬಹುದು. ಅಷ್ಟೇ ಅಲ್ಲದೇ ಕಂಚಿನ ಪಾತ್ರೆಯಲ್ಲಿ ಆಹಾರ ತಯಾರಿಸುವಂತಿಲ್ಲ, ಸೇವಿಸುವಂತಿಲ್ಲ. ಸಾಧ್ಯವಿದ್ದರೆ ರಾತ್ರಿ ಪೂರ್ತಿ ದೇವರ ನಾಮ ಸ್ಮರಣೆಯಲ್ಲಿ ಕಳೆಯಬೇಕು. ಸಾಧ್ಯವಾಗದೆ ನಿದ್ದೆ ಬಂದರೆ ಬರೀ ನೆಲದ ಮೇಲೆ ಮಲಗಬೇಕು. ಈ ದಿನ ಸಂಪೂರ್ಣ ಉಪವಾಸವಿದ್ದು ಮರುದಿನ ಬೆಳಗ್ಗೆ ದೇವರ ಪೂಜೆ ಮಾಡಿ ಆಹಾರ ಸೇವಿಸಬಹುದು. ಆಹಾರ, ಬಟ್ಟೆಗಳನ್ನು ದಾನವಾಗಿ ನೀಡುವುದರಿಂದ ನಾವು ವಿಷ್ಣುವಿನ ಕೃಪೆಗೆ ಪಾತ್ರರಾಗುತ್ತೇವೆ ಎನ್ನುವುದು ನಂಬಿಕೆ.

ದೇವಸ್ಥಾನಗಳಲ್ಲಿ ಈ ದಿನ ವಿಷ್ಣುವಿಗೆ ಪಂಚಾಮೃತ ಅಭಿಷೇಕ, ಹೂವಿನ ಪೂಜೆ ಮಾಡಲಾಗುತ್ತದೆ. ಮುಖ್ಯ ವಾಗಿ ತುಳಸಿ, ಧೂಪದ್ರವ್ಯದಿಂದ ಪೂಜಿಸಲಾಗುತ್ತದೆ. ಇಡೀ ರಾತ್ರಿ ಭಜನೆ, ವಿಷ್ಣು ಸಹಸ್ರನಾಮ ಪಾರಾಯಣವನ್ನು ಮಾಡಲಾಗುತ್ತದೆ.
ಅಧಿಕ ಮಾಸವು ವಿಷ್ಣುವಿಗೆ ಅತ್ಯಂತ ಪ್ರಿಯವಾಗಿದ್ದು, ಮೂರು ವರ್ಷಗಳಿಗೊಮ್ಮೆ ಬರುವ ಪದ್ಮಿನಿ ಏಕಾದಶಿಯಂದು ವ್ರತ ಮಾಡಿ ವಿಷ್ಣುವಿನ ಆರಾಧನೆ ಮಾಡುವುದರಿಂದ ಸಾವಿರಾರು ಯಜ್ಞ ಮಾಡಿದ ಪುಣ್ಯ ಮಾತ್ರವಲ್ಲದೇ ಮಹಾಲಕ್ಷಿ$¾à ದೇವಿಯ ಅನುಗ್ರಹ ಪ್ರಾಪ್ತಿಯಾಗುವುದು ಎನ್ನುವ ನಂಬಿಕೆ ಕೂಡ ಇದೆ.

Advertisement

ಅಕ್ಕಿಯಿಂದ ತಯಾರಿಸಿದ ಆಹಾರ ಸೇವಿಸುವಂತಿಲ್ಲ
ಪದ್ಮಿನಿ ಏಕಾದಶಿ ದಿನದಂದು ಅಕ್ಕಿಯಿಂದ ಅಥವಾ ಅಕ್ಕಿ ಉಪಯೋಗಿಸಿ ತಯಾರಿಸಿದ ಆಹಾರ ಸೇವಿಸುವಂತಿಲ್ಲ ಎಂಬುದರ ಹಿಂದೆ ಒಂದು ಕಥೆ ಇದೆ.

ನಂಬಿಕೆಗಳ ಪ್ರಕಾರ ಭಗವಾನ್‌ ಬ್ರಹ್ಮನ ಶಿರದಿಂದ ನೆಲದ ಮೇಲೆ ಬಿದ್ದ ಬೆವರಿನ ಹನಿಯಿಂದ ರಾಕ್ಷಸ ಹುಟ್ಟುತ್ತಾನೆ. ಅವನು ವಾಸಿಸಲು ಸ್ಥಳ ಕೇಳಿದಾಗ ಬ್ರಹ್ಮ, ಏಕಾದಶಿಯಂದು ಜನರು ಸೇವಿಸುವ ಅಕ್ಕಿಯಲ್ಲಿ ಅಸ್ತಿತ್ವದಲ್ಲಿದ್ದು ಬಳಿಕ ಅದನ್ನು ತಿಂದವರ ಹೊಟ್ಟೆಯಲ್ಲಿ ಹುಳುವಾಗಿಸುವಂತೆ ಹೇಳುತ್ತಾನೆ. ಏಕಾದಶಿಯಂದು ಚಂದ್ರನ ಕಿರಣಗಳು ಪ್ರಕಾಶಮಾನವಾಗಿದ್ದು ಹೆಚ್ಚು ಕಾಸ್ಮಿಕ್‌ ಶಕ್ತಿಯನ್ನು ಹೊಂದಿರುತ್ತದೆ. ಇದರಿಂದ ಹೆಚ್ಚು ನೀರನ್ನು ಆಕರ್ಷಿಸುತ್ತದೆ. ಅಕ್ಕಿ ಬಳಸಿ ತಯಾರಿಸಿದ ಅಡುಗೆಯಲ್ಲಿ ಬಹಳಷ್ಟು ನೀರಿನಂಶ ಇರುವುದರಿಂದ ಅದನ್ನು ಸೇವಿಸಿದರೆ ಶೀತ, ಕಫ‌ದ ಜತೆಗೆ ಅಜೀರ್ಣ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹೀಗಾಗಿ ಏಕಾದಶಿ ವ್ರತದಲ್ಲಿರುವವರು ಅಕ್ಕಿಯಿಂದ ತಯಾರಿಸಿದ ಆಹಾರ ಸ್ವೀಕರಿಸಬಾರದು ಎನ್ನುತ್ತದೆ ವಿಜ್ಞಾನ.

– ವಿದ್ಯಾ ಇರ್ವತ್ತೂರು

Advertisement

Udayavani is now on Telegram. Click here to join our channel and stay updated with the latest news.

Next