ಬೆಂಗಳೂರು: “ನಾಡಿನ ಜನತೆಗೆ ಅವಮಾನ ಮಾಡುವ ರೀತಿಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಹೇಳಿಕೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ನಾಯಕರ ಬಳಿ ಈ ಸಂಬಂಧ ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ,’ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಸವಾಲು ಹಾಕಿದ್ದಾರೆ.|
ನಗರದ ಪುರಭವನದಲ್ಲಿ ಡಾ.ನೆಲ್ಸನ್ ಮಂಡೇಲಾ ಅಭಿಮಾನಿಗಳ ವೇದಿಕೆ ಆಯೋಜಿಸಿದ್ದ ಪ್ರತಿ ಸೆಲೂನ್‌ಗೆ ಕಾಂಗ್ರೆಸ್ ಯಾತ್ರೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ವಿರುದ್ಧ ಆಧಾರ ರಹಿತ ಆರೋಪ ಮಾಡುವವರಿಗೆ ಚುನಾವಣೆಯಲ್ಲಿ ಜನರೇ ಉತ್ತರ ನೀಡಲಿದ್ದಾರೆ. ರಾಜ್ಯ ಸರ್ಕಾರದ ಸಾಧನೆಯನ್ನು ಸಹಿಸಲಾಗದೆ ಈ ರೀತಿಯ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದರು.
ವಸಂತನಗರದ ಸಂತೋಷ್ ಕೊಲೆಗೆ ಸಂಬಂಧಿಸಿದಂತೆ ಬಿಜೆಪಿಯವರು ಕಲಾಪದಲ್ಲಿ ವಿಷಯ ಪ್ರಸ್ತಾಪಿಸಿದರೆ, ಸರ್ಕಾರದಿಂದಲೂ ಕೆಲವೊಂದು ದಾಖಲೆ ಬಿಡುಗಡೆ ಮಾಡುತ್ತೇವೆ. ಆಗ ಯಾರು ಯಾರನ್ನು ಕೊಲೆ ಮಾಡಿದ್ದಾರೆ ಎಂಬುದು ತಿಳಿಯುತ್ತದೆ ಎಂದರು.
“13 ವರ್ಷ ಮುಖ್ಯಮಂತ್ರಿಯಾಗಿದ್ದ ಪ್ರಧಾನಿ ಮೋದಿಯವರಿಗೆ 10 ಪರ್ಸೆಂಟ್ ಕಮೀಶನ್ ಕುರಿತು ಸ್ವಂತ ಅನುಭವ ಇರಬೇಕು. ಕೇಂದ್ರ ಸಚಿವ ಸದಾನಂದಗೌಡ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ 30 ಪರ್ಸೆಂಟ್ ಕಮೀಶನ್ ಇತ್ತು. ಈಗ ಅದ್ಯಾವುದೂ ಇಲ್ಲ,’ ಎಂದು ತಿರುಗೇಟು ನೀಡಿದರು.
ಸಂಸತ್‌ನಲ್ಲಿ ಪ್ರಸ್ತಾಪ: ಬಿಜೆಪಿ ಆಡಳಿತವಿರುವ ಗುಜರಾತ್, ಉತ್ತರ ಪ್ರದೇಶದಲ್ಲಿ ಕ್ರೈಂ ರೇಟ್ ಹೆಚ್ಚಿದೆ. ಆದರೂ ಬಿಜೆಪಿಯವರು ಶೇ.5ರಷ್ಟು ಅಪರಾಧ ಪ್ರಮಾಣ ಹೊಂದಿರುವ ಕರ್ನಾಟಕದ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಕಾನೂನಿನ ಅರಿವಿಲ್ಲದೆ ಕೇಂದ್ರ ಸಚಿವ ಸದಾನಂದಗೌಡ ಮಾತನಾಡುತ್ತಿದ್ದಾರೆ.
ರಾಜ್ಯದಲ್ಲಿ ನಡೆದಿರುವ ಕೋಮುಗಲಭೆಯಲ್ಲಿ ಸಂಘ ಪರಿವಾರದ ಕೈವಾಡ ಇರುವ ಕುರಿತ ದಾಖಲೆ ನಮ್ಮ ಬಳಿ ಇದೆ. ಅದನ್ನು ಲೋಕಸಭೆ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ನೀಡಿದ್ದು, ಸಂಸತ್‌ನಲ್ಲಿ ಪ್ರಸ್ತಾಪಿಸಲಿದ್ದಾರೆ ಎಂದು ಹೇಳಿದರು.