ಹೊಸದಿಲ್ಲಿ: ಸರ್ಜಿಕಲ್ ಸ್ಟ್ರೈಕ್ ಕುರಿತಂತೆ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಹೇಳಿಕೆ ನೀಡಿದ ಬೆನ್ನಲ್ಲೇ ಇದೀಗ ಮತ್ತೋರ್ವ ಕಾಂಗ್ರೆಸ್ ನಾಯಕ ರಶೀದ್ ಅಲ್ವಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಸರ್ಜಿಕಲ್ ಸ್ಟ್ರೈಕ್ ನ ವೀಡಿಯೊ ಇದ್ದರೆ ಅದನ್ನು ತೋರಿಸಲು ಸರ್ಕಾರಕ್ಕೆ ತೊಂದರೆ ಏನು ಎಂದು ಕಾಂಗ್ರೆಸ್ ನಾಯಕ ರಶೀದ್ ಅಲ್ವಿ ಗುರುವಾರ ಹೇಳಿದ್ದಾರೆ.
ನಮ್ಮ ಭದ್ರತಾ ಪಡೆಗಳ ಮೇಲೆ ನಮಗೆ ವಿಶ್ವಾಸವಿದೆ ಆದರೆ ಬಿಜೆಪಿ ಸರ್ಕಾರವನ್ನು ನಂಬಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಸರ್ಕಾರವು ತನ್ನ ಬಳಿ ವೀಡಿಯೋ (ಸರ್ಜಿಕಲ್ ಸ್ಟ್ರೈಕ್) ಇದೆ ಎಂದು ಹೇಳುತ್ತದೆ, ಹಾಗಾದರೆ ಅದನ್ನು ತೋರಿಸಲು ದಿಗ್ವಿಜಯ ಸಿಂಗ್ ಸರ್ಕಾರವನ್ನು ಕೇಳುವುದರಲ್ಲಿ ತಪ್ಪೇನು? ನಾವು ಸರ್ಜಿಕಲ್ ಸ್ಟ್ರೈಕ್ ಕುರಿತ ಪುರಾವೆಯನ್ನು ಕೇಳುತ್ತಿಲ್ಲ ಆದರೆ ಸರ್ಕಾರವು ತನ್ನ ಬಳಿ ಇರುವ ವೀಡಿಯೊವನ್ನು ತೋರಿಸಬೇಕು ಎಂದು ಅಲ್ವಿ ಹೇಳಿದರು.
ಇದನ್ನೂ ಓದಿ:ಸಂಶೋಧನೆ: ಭೂಮಿಯ ಒಳಪದರದ ತಿರುಗುವಿಕೆ ಬಂದ್…ಇದರಿಂದಾಗುವ ಪರಿಣಾಮವೇನು?
“ನಾನು ಸರ್ಜಿಕಲ್ ಸ್ಟ್ರೈಕ್ ನ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುತ್ತಿಲ್ಲ. ಅಧಿಕಾರದಲ್ಲಿರುವವರು ಮಾಡುವ ವ್ಯತಿರಿಕ್ತ ಹೇಳಿಕೆಗಳನ್ನು ನಾನು ಪ್ರಶ್ನಿಸುತ್ತಿದ್ದೇನೆ. ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಯೋಗಿ ಆದಿತ್ಯನಾಥ್ ವಿಭಿನ್ನ ಹೇಳಿಕೆಗಳನ್ನು ನೀಡಿದರೆ, ಅಮಿತ್ ಶಾ ವಿಭಿನ್ನ ಸಂಖ್ಯೆಗಳನ್ನು ಹೇಳಿಕೊಂಡಿದ್ದಾರೆ ” ಎಂದು ಹೇಳಿದರು.