Advertisement

ರಾಜಮಾರ್ಗ ಅಭಿನಂದನಾ ಗ್ರಂಥ ಬಿಡುಗಡೆ

03:54 PM Jun 05, 2017 | |

ಧಾರವಾಡ: ಗದುಗಿನ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠದ ಡಾ| ಎಂ.ಎಂ.ಕಲಬುರ್ಗಿ ಅಧ್ಯಯನ ಸಂಸ್ಥೆ ಹಾಗೂ ಡಾ| ವೀರಣ್ಣ ರಾಜೂರ ಅಭಿನಂದನ ಸಮಿತಿ ಸಹಯೋಗದಲ್ಲಿ ನಗರದ ಆಲೂರು ವೆಂಕಟರಾವ್‌ ಭವನದಲ್ಲಿ ರವಿವಾರ ಸಂಜೆ ಅಭಿನಂದನಾ ಸಮಾರಂಭ ಹಾಗೂ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮ ಜರುಗಿತು. 

Advertisement

ಡಾ| ಎಫ್‌.ಟಿ. ಹಳ್ಳಿಕೇರಿ ಸಂಪಾದಿಸಿದ ರಾಜಮಾರ್ಗ ಅಭಿನಂದನ ಗ್ರಂಥವನ್ನು ಬಿಡುಗಡೆ ಮಾಡಿದ ಹಿರಿಯ ಸಾಹಿತಿ ಡಾ| ಗುರುಲಿಂಗ ಕಾಪಸೆ ಮಾತನಾಡಿ, ಗ್ರಾಮೀಣ ಮತ್ತು ಶ್ರಮ ಸಂಸ್ಕೃತಿ ಜೀವಿ ರಾಜೂರ ಅವರು ಸಾಹಿತ್ಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಲೇ ಎಂಎ ಪದವಿ ಪಡೆದವರು.

ವಚನಗಳನ್ನು ಸಾಹಿತ್ಯಿಕವಾಗಿ ಬೆಳೆಸಿದ ಶ್ರೇಯಸ್ಸು ಆರ್‌.ಸಿ. ಹಿರೇಮಠ, ಎಂ.ಎಂ. ಕಲಬುರ್ಗಿ ಹಾಗೂ ರಾಜೂರ ಅವರಿಗೆ ಸಲ್ಲುತ್ತದೆ ಎಂದರು. ಹೊಸ ತಲೆಮಾರಿನ ಸಂಶೋಧನಾಕಾರರಲ್ಲಿ ಡಾ| ವೀರಣ್ಣ ರಾಜೂರ ಅಗ್ರ ಗಣ್ಯರು. ಅವರು ತಮ್ಮ ಸೃಜನ ಶೀಲ ಬರವಣಿಗೆಯಿಂದ ಅನೇಕ ಸಂಶೋಧನೆಗಳ ಮಹತ್ವ ಹೆಚ್ಚಿಸಿದ್ದಾರೆ.

ವಚನ ಸಾಹಿತ್ಯದ ಕುರಿತು ಸಂಶೋಧನೆ ಮಾಡಿದ ರಾಜೂರರ ಸಂಶೋಧನಾ ಗ್ರಂಥದಿಂದ ಇಂದಿನ ಯುವ ಜನತೆಗೆ ವಚನಗಳ ಕುರಿತು ಅರಿವು ಮೂಡಿಸಲು ಸಾಧ್ಯವಾಗಿದೆ. ಇವರು ಸಾಹಿತ್ಯ ಹಾಗೂ ನಾಟಕ ಪ್ರೇಮ ಸರ್ವರಿಗೂ ಆದರ್ಶನೀಯ. ನಿರಂತರ ಸಾಹಿತ್ಯ ಸೇವೆ ಸಲ್ಲಿಸಿದ ಅವರ ಕಾರ್ಯ ಮೆಚ್ಚುವಂತಹದ್ದು ಎಂದರು. 

ಡಾ| ವೀರಣ್ಣ ರಾಜೂರರ ಐದು ಕೃತಿ ಬಿಡುಗಡೆ ಮಾಡಿದ ಹಿರಿಯ ಸಾಹಿತಿ ಡಾ| ಸಿದ್ಧಲಿಂಗ ಪಟ್ಟಣಶೆಟ್ಟಿ ಮಾತನಾಡಿ, ರಾಜೂರ ಅವರು ಕನ್ನಡ ವಿಭಾಗಕ್ಕೆ ಸೇರಿದಾಗಿನಿಂದ ಸಜ್ಜನರಲ್ಲದ, ವಿದ್ವಾಂಸರಲ್ಲದ ಸಹದ್ಯೋಗಿ ಮತ್ತು ವಿದ್ಯಾರ್ಥಿಗಳನ್ನು ಬದಿಗಿಟ್ಟು ಕಾರ್ಯ ನಿರ್ವಹಿಸಿದ್ದರಿಂದಲೇ ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದೆ ಎಂದು ಕಲಬುರ್ಗಿ ಅವರು ಲೇಖನವೊಂದರಲ್ಲಿ ಉಲ್ಲೇಖೀಸಿದ್ದಾರೆ ಎಂದರು. 

Advertisement

ಅಭಿನಂದನಾ ನುಡಿಗಳನ್ನಾಡಿದ ಹಂಪಿ ಕನ್ನಡ ವಿವಿ ಕುಲಪತಿ ಡಾ| ಮಲ್ಲಿಕಾ ಘಂಟಿ, ರಾಜೂರ ಅವರು ವಿದ್ಯಾರ್ಥಿಗಳೊಂದಿಗೆ ಸ್ನೇಹಿತರಾಗಿ ಇದ್ದುಕೊಂಡು ಉತ್ತಮ ದಾರಿಗೆ ತಂದಿದ್ದಾರೆ. ಭೌತಿಕ ಸಾಮರ್ಥ್ಯ ಅರಿತು ಅವರು ಪಿಎಚ್‌ಡಿಗೆ ಅರಿತು ವಿಷಯ ನೀಡಿದ್ದರು.

ಆದಾಗ್ಯೂ ಸಹ ನಾನು 9 ವರ್ಷಗಳ ಕಾಲ ಪಿಎಚ್‌ಡಿಗೆ ಕಾಲಾವಕಾಶ ತೆಗೆದುಕೊಂಡರೂ ತಾಳ್ಮೆಯಿಂದ ಮಾರ್ಗದರ್ಶನ ಮಾಡಿದರು. ವಾಸ್ತವ ಹಾಗೂ ಆದರ್ಶಗಳನ್ನು ಒಂದಾಗಿಸಿಕೊಂಡು ನಡೆಯುವುದನ್ನು ರಾಜೂರ ಅವರಿಂದ ತಿಳಿದುಕೊಂಡೆ ಎಂದರು. ಅರವಿಂದ ಜತ್ತಿ ಅವರು ವಿರಾಜಮಾನ ಗ್ರಂಥ ಲೋಕಾರ್ಪಣೆಗೊಳಿಸಿ ಮಾತನಾಡಿದರು. 

ರಾಜೂರರಿಗೆ ಗೌರವ ಸನ್ಮಾನ: ಗದುಗಿನ ಡಾ| ತೋಂಟದ ಸಿದ್ದಲಿಂಗ ಸ್ವಾಮೀಜಿ ಹಾಗೂ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಎಪ್ಪತ್ತರ ಸಂಭ್ರಮದ ಡಾ| ವೀರಣ್ಣ ರಾಜೂರ ದಂಪತಿಯನ್ನು  ಗೌರವಿಸಲಾಯಿತು. ಈ ವೇಳೆ ನಾಡೋಜ ಡಾ| ಚೆನ್ನವೀರ ಕಣವಿ, ಹೇಮಾ ಪಟ್ಟಣಶೆಟ್ಟಿ ಇದ್ದರು. 

ಲೋಕಾರ್ಪಣೆಗೊಂಡ ಗ್ರಂಥಗಳು: ಗದುಗಿನ ತೋಂಟದಾರ್ಯ ಸಂಸ್ಥಾನಮಠದ ಡಾ| ಎಂ.ಎಂ. ಕಲಬುರ್ಗಿ ಅಧ್ಯಯನ ಸಂಸ್ಥೆಯಿಂದ ಪ್ರಕಾಶಿತವಾದ ರಾಜಮಾರ್ಗ ಅಭಿನಂದನ ಗ್ರಂಥವನ್ನು ಡಾ| ಗುರುಲಿಂಗ ಕಾಪಸೆ ಲೋಕಾರ್ಪಣೆ ಬಿಡುಗಡೆ ಮಾಡಿದರು. ಈ ರಾಜಮಾರ್ಗ ಸಂಪುಟವು ವಿಶೇಷವಾಗಿ ಎಪ್ಪತ್ತು ಜನ ಸಂಶೋಧಕರ ಹಾಗೂ ರಾಜೂರ ಅವರ ಜೀವನ-ಸಾಧನೆಗಳನ್ನು ತಿಳಿಸುವ ಪ್ರಬಂಧಗಳನ್ನು ಒಳಗೊಂಡಿದೆ.

ಇದರೊಂದಿಗೆ ಗದುಗಿನ ತ್ವರಿತ ಮುದ್ರಣಾಲಯದ ವಿವೇಕ ಪ್ರಕಾಶನವು ಪ್ರಕಟಿಸಿದ ಡಾ| ಬಿ.ಬಿ.ಬಿರಾದಾರ, ಡಾ| ಪಿ.ಕೆ.ರಾಠೊಡ, ಡಾ| ಎಚ್‌. ಎಸ್‌.ಮೇಲಿನಮನಿ ಅವರು ಸಂಪಾದಿಸಿದ ವಿರಾಜಮಾರ್ಗ (ಡಾ| ವೀರಣ್ಣ ರಾಜೂರ: ನಾವು ಕಂಡಂತೆ) ಗ್ರಂಥ ಹಾಗೂವೀರಣ್ಣ ರಾಜೂರ ಅವರ ನೂರೊಂದು ಬರಹ, ನೂರು ಶೋಧ, ಶರಣ ಸಂಚಯ, ಜ್ಞಾನದ ಬಲದಿಂದ, ಕನ್ನಡ ನಾಟಕಪಥ ಗ್ರಂಥಗಳು ಲೋಕಾರ್ಪಣೆಗೊಂಡವು. 

Advertisement

Udayavani is now on Telegram. Click here to join our channel and stay updated with the latest news.

Next