ಹರಿದಾಸ ಪರಂಪರೆಯಲ್ಲಿ ಬರುವ ದಾಸ ಶ್ರೇಷ್ಠ ಶ್ರೀ ಪ್ರಸನ್ನ ವೆಂಕಟದಾಸರ ಜೀವನ ಕಥೆಯನ್ನು ಆಧರಿಸಿದ “ಶ್ರೀ ಪ್ರಸನ್ನ ವೆಂಕಟದಾಸರು’ ಸಿನಿಮಾ ಇದೇ ಜುಲೈ 7ರಂದು ಬಿಡುಗಡೆಯಾಗಿ ತೆರೆಗೆ ಬರುತ್ತಿದೆ.
“ಮಾತಾಂಬುಜಾ ಮೂವೀಸ್’ ಬ್ಯಾನರಿನಲ್ಲಿ ಡಾ. ಮಧುಸೂದನ ಹವಾಲ್ದಾರ್ ನಿರ್ದೇಶನದಲ್ಲಿ ಮೂಡಿಬಂದಿರುವ “ಶ್ರೀ ಪ್ರಸನ್ನ ವೆಂಕಟದಾಸರು’ ಸಿನಿಮಾದಲ್ಲಿ ವೆಂಕಟದಾಸರ ಪಾತ್ರದಲ್ಲಿ ನಟ ಪ್ರಭಂಜನ ದೇಶಪಾಂಡೆ ಅಭಿನಯಿಸಿದ್ದಾರೆ. ಉಳಿದಂತೆ ವಿಷ್ಣುತೀರ್ಥ ಜೋಷಿ, ಪ್ರೀತಂ ಶ್ರೀಶ ಆಚಾರ್, ದೇವನಾಥ ಜೋಷಿ, ಲೀಲಾ, ವಿಜಯಾನಂದ ನಾಯಕ್, ಲಕ್ಷ್ಮೀ ಮೊದಲಾದವರು ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಸದ್ಯ “ಶ್ರೀ ಪ್ರಸನ್ನ ವೆಂಕಟದಾಸರು’ ಸಿನಿಮಾದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ಚಿತ್ರತಂಡ, ಇತ್ತೀಚೆಗೆ ಸಿನಿಮಾದ ಹಾಡುಗಳನ್ನು ಬಿಡುಗಡೆ ಮಾಡಿದೆ.
ಇದೇ ವೇಳೆ ಮಾತನಾಡಿದ ಸಿನಿಮಾದ ನಿರ್ದೇಶಕ ಡಾ. ಮಧುಸೂದನ ಹವಾಲ್ದಾರ್, “ನಮ್ಮ ತಾಯಿಯವರ ಕನಸಿನಂತೆ ವೆಂಕಟದಾಸರ ಜೀವನಗಾಥೆಯನ್ನು ಒಂದಷ್ಟು ಸಮಾನ ಮನಸ್ಕರ ಜೊತೆಗೆ ಸೇರಿ ಸಿನಿಮಾ ರೂಪದಲ್ಲಿ ಪ್ರೇಕ್ಷಕರ ಮುಂದೆ ತರುತ್ತಿದ್ದೇವೆ. ವೆಂಕಟದಾಸರ ವಂಶಜರಾದ ಡಾ. ರೇಖಾ ಕಾಖಂಡಕಿ ಅವರ ಕಾದಂಬರಿಯನ್ನು ಆಧರಿಸಿ ಈ ಸಿನಿಮಾ ಮಾಡಿದ್ದೇವೆ. ಈಗಾಗಲೇ ಸಿನಿಮಾಕ್ಕೆ ಎಲ್ಲ ಕಡೆಗಳಿಂದಲೂ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಜುಲೈ ಮೊದಲವಾರ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರುತ್ತಿದ್ದೇವೆ’ ಎಂದು ಮಾಹಿತಿ ನೀಡಿದರು.
“ಶ್ರೀ ಪ್ರಸನ್ನ ವೆಂಕಟದಾಸರು’ ಚಿತ್ರದ ಹಾಡುಗಳಿಗೆ ವಿಜಯಕೃಷ್ಣ ಸಂಗೀತ ನಿರ್ದೇಶನವಿದೆ. ಹರಿದಾಸರಲ್ಲಿ ಒಬ್ಬರಾದ ವೆಂಕಟದಾಸರ ಗೀತೆಗಳನ್ನು ಸಿನಿಮಾದಲ್ಲಿ ಬಳಸಿಕೊಳ್ಳಲಾಗಿದ್ದು, ಇಂದಿನ ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ಹಾಡುಗಳಿಗೆ ಸಂಗೀತ ಸಂಯೋಜಿಸಲಾಗಿದೆ. ಕಥೆಯ ಸನ್ನಿವೇಶಕ್ಕೆ ತಕ್ಕಂತೆ ಹಾಡುಗಳಿವೆ ಎಂಬುದು ಸಂಗೀತ ನಿರ್ದೇಶಕ ವಿಜಯಕೃಷ್ಣ ಮಾಹಿತಿ. “ಶ್ರೀ ಪ್ರಸನ್ನ ವೆಂಕಟದಾಸರು’ ಸಿನಿಮಾಕ್ಕೆ ಡಾ. ರೇಖಾ ಕಾಖಂಡಕಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ.
ಚಿತ್ರಕ್ಕೆ ನಾರಾಯಣ್ ಸಿ. ಛಾಯಾಗ್ರಹಣ, ಆರ್. ದೊರೈರಾಜ್ ಸಂಕಲನವಿದೆ. ಹಾಡುಗಳ ಬಿಡುಗಡೆ ವೇಳೆ ಹಾಜರಿದ್ದ ಸಿನಿಮಾದ ಕಲಾವಿದರು, ತಂತ್ರಜ್ಞರು ಸಿನಿಮಾದ ಬಗ್ಗೆ ಮಾತನಾಡಿದರು.
ಸುಮಾರು ಮೂರು ವರ್ಷಗಳ ಹಿಂದೆ ಆರಂಭವಾದ “ಶ್ರೀ ಪ್ರಸನ್ನ ವೆಂಕಟದಾಸರು’ ಸಿನಿಮಾವನ್ನುಬಾಗಲಕೋಟೆ, ಬಾದಾಮಿ, ಹಾನಾಪುರ, ಮಹಾಕೂಟ, ಬೀಳಗಿ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ