ಹೊಸಬರ “ಪರ್ಯಾಯ’ ಚಿತ್ರ ಸೆ.8ರಂದು ತೆರೆಕಾಣುತ್ತಿದೆ. ಮೂವರು ವಿಭಿನ್ನ ಮನಸ್ಥಿತಿಯುಳ್ಳ ವಿಶೇಷ ಚೇತನರು ಬದುಕು ಕಟ್ಟಿಕೊಳ್ಳುವಲ್ಲಿ ಮಾಡುವ ಪ್ರಯತ್ನಗಳು, ಜನರ ಬೆಂಬಲ ಸಿಗದಿದ್ದಾಗ ಅವರು ಹುಡುಕಿಕೊಳ್ಳುವ ಪರ್ಯಾಯ ಮಾರ್ಗಗಳ ಸುತ್ತ ನಡೆಯೋ ಕಥೆಯನ್ನು ಈ ಸಿನಿಮಾ ಮೂಲಕ ಹೇಳಲು ಹೊರಟಿದೆ ತಂಡ.
ರಾಜಕುಮಾರ್ ಹಾಗೂ ಇಂದುಮತಿ ರಾಜ್ ಕುಮಾರ್ ಅವರು ಈ ಚಿತ್ರ ನಿರ್ಮಿಸಿದ್ದಾರೆ. ರಮಾನಂದ ಮಿತ್ರ ಈ ಚಿತ್ರದ ನಿರ್ದೇಶಕರು.
“ಮೂರು ಪಾತ್ರದ ಮೂಲಕ ಸಂದೇಶ ಹೇಳುವ ಪ್ರಯತ್ನ ಮಾಡಿದ್ದೇನೆ. ಪ್ರತಿ ಪಾತ್ರದಲ್ಲೂ ತಿರುವುಗಳಿವೆ. ಹೊಸಬರ ಬಳಿ ಪಾತ್ರ ಮಾಡಿಸಿದ್ದು ಸವಾಲಿನಿಂದ ಕೂಡಿತ್ತು. ಮೊದಲ ದಿನ ಸ್ವಲ್ಪ ಕಷ್ಟ ಆಯಿತು. ಆನಂತರ ಸುಲಭವಾಯಿತು. ಮಾಮುಲಿ ಪ್ಯಾಟ್ರನ್‌ಗಿಂತ ಬೇರೆ ರೀತಿ ಪ್ರಯತ್ನಿಸಿದ್ದೇವೆ’ ಎನ್ನುವುದು ನಿರ್ದೇಶಕರ ಮಾತು.
ನಿರ್ಮಾಪಕ ಕಮ್ ನಟ ರಾಜ್ ಕುಮಾರ್ ಕೂಡಾ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಉಳಿದಂತೆ ರಂಜನ್ ಕುಮಾರ್, ಅರ್ಚನಾ ಶೆಟ್ಟಿ, ಮುರುಗೇಶ್ ಬಿ ಶಿವಪೂಜೆ ತಮ್ಮ ತಮ್ಮ ಪಾತ್ರಗಳನ್ನು ವಿವರಿಸಿದರು. ಜಿ.ರಂಗಸ್ವಾಮಿ ಅವರು ಚಿತ್ರದ ಛಾಯಾಗ್ರಹಣ ಮಾಡಿದ್ದಾರೆ.
ಜೀವನ್ ಪ್ರಕಾಶ್ ಅವರ ಸಂಕಲನ ಈ ಚಿತ್ರಕ್ಕಿದ್ದು, ಜಯಂತಿ ರೇವಡಿ, ಅರ್ಚನಾ ಶೆಟ್ಟಿ, ಪ್ರಿಯಾ ಕೊಠಾರಿ, ಭೀಮಾ ನಾಯಕ್, ಸುರೇಶ್ ಬೆಳಗಾವಿ, ರೋಹನ್ ಕುಬ್ಸದ್ ಮುಂತಾದವರು ಪರ್ಯಾಯ ಚಿತ್ರದಲ್ಲಿ ನಟಿಸಿದ್ದಾರೆ.