Advertisement

Lok sabha polls: 2 ಹಂತಗಳಲ್ಲಿ ಕಾಂಗ್ರೆಸ್‌ ಪಟ್ಟಿ ಬಿಡುಗಡೆ: ಡಿಕೆಶಿ

10:28 PM Mar 07, 2024 | Team Udayavani |

ಬೆಂಗಳೂರು: ಎರಡು ಹಂತಗಳಲ್ಲಿ ಲೋಕಸಭೆ ಚುನಾವಣಾ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆಗಲಿದ್ದು, ಈ ಪೈಕಿ ಮೊದಲ ಹಂತದ ಪಟ್ಟಿಯಲ್ಲಿ ಶೇ.50 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಳ್ಳಲಿದೆ ಎಂದು ಡಿಸಿಎಂ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ತಿಳಿಸಿದರು.

Advertisement

ದೆಹಲಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದೇ ಹಂತದಲ್ಲಿ ಎಲ್ಲ ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದಿಲ್ಲ. ಒಂದೆರಡು ಹಂತಗಳಲ್ಲಿ ಪಟ್ಟಿ ಪ್ರಕಟ ಮಾಡಲಾಗುವುದು. ಈ ಪೈಕಿ ಕಾಂಗ್ರೆಸ್‌ ಚುನಾವಣಾ ಸಮಿತಿ ಸಭೆಯಲ್ಲಿ ಮೊದಲ ಪಟ್ಟಿ ಬಿಡುಗಡೆ ಆಗಲಿದ್ದು, ಅದರಲ್ಲಿ ಶೇ. 50 ಅಭ್ಯರ್ಥಿಗಳ ಆಯ್ಕೆ ಅಂತಿಮಗೊಳ್ಳಲಿದೆ ಎಂದರು.

“ಬಿಜೆಪಿ ಪಟ್ಟಿ ನೋಡಿಕೊಂಡು “ಕೈ’ ಪಟ್ಟಿ ಬಿಡುಗಡೆ ಮಾಡಲಿದೆಯೇ’ ಎಂದು ಕೇಳಿದಾಗ, “ಬಿಜೆಪಿಯವರ ರಾಜಕಾರಣಕ್ಕೂ ನಮ್ಮ ರಾಜಕಾರಣಕ್ಕೂ ವ್ಯತ್ಯಾಸವಿದೆ. ನಮ್ಮ ಪಕ್ಷದಲ್ಲಿ ವಿಶೇಷವಾಗಿ ರಾಜ್ಯ ಕಾಂಗ್ರೆಸ್‌ನಲ್ಲಿ ವ್ಯಕ್ತಿ ಮೇಲೆ ರಾಜಕಾರಣ ನಡೆಯುವುದಿಲ್ಲ. ಅವರು ಅವರದ್ದೇ ಆದ ಲೆಕ್ಕಾಚಾರ ಇಟ್ಟುಕೊಂಡಿದ್ದರೆ, ನಾವು ನಮ್ಮದೇ ಲೆಕ್ಕಾಚಾರ ಇಟ್ಟುಕೊಂಡಿದ್ದೇವೆ’ ಎಂದು ತಿಳಿಸಿದರು.

ಇತ್ತೀಚೆಗೆ ಪಕ್ಷಕ್ಕೆ ಸೇರ್ಪಡೆಯಾದವರಿಗೆ ಟಿಕೆಟ್‌ ನೀಡುವುದು ಮತ್ತು ಸಚಿವರನ್ನು ಕಣಕ್ಕಿಳಿಸುವ ಬಗ್ಗೆ ಕೇಳಿದಾಗ, ರಾಜಕೀಯದಲ್ಲಿ ಎಲ್ಲ ಸಾಧ್ಯತೆಗಳೂ ಇರುತ್ತವೆ ಎಂದಷ್ಟೇ ಹೇಳಿದರು.

ಮುಂಚಿತವಾಗಿ ಅಭ್ಯರ್ಥಿ ಆಯ್ಕೆ ಮಾಡಬಹುದಿತ್ತಲ್ಲವೇ ಎಂದು ಕೇಳಿದಾಗ, “ನಾವು ಈಗಾಗಲೇ ಒಂದು ತಿಂಗಳ ಹಿಂದೆಯೇ ಚರ್ಚೆ ಮಾಡಿ, ಯಾರಿಗೆ ಯಾವ ಕಿವಿಮಾತು ಹೇಳಬೇಕೋ ಹೇಳಿದ್ದೇವೆ’ ಎಂದು ತಿಳಿಸಿದರು.

Advertisement

ಈಗ ತಮಗೆ ನೊಟೀಸ್‌ ಬರುತ್ತಿಲ್ಲವೇ ಎಂದಾಗ, “ಇನ್ನೂ ನೊಟೀಸ್‌ ಬರುತ್ತಿವೆ. ಮಾಧ್ಯಮಗಳು ಹಗಲು ರಾತ್ರಿ ನನ್ನನ್ನು ಕಾಯುತ್ತಾ ಕೆಲಸ ಮಾಡಿವೆ. ಹೆರಿಗೆ ನೋವು ಅನುಭವಿಸಿದವರಿಗೆ ಗೊತ್ತು ಎಂಬಂತೆ, ನನ್ನ ನೋವು ನನಗೆ ಗೊತ್ತು. ರಾಜ್ಯದ ಜನ ನನ್ನ ಪರವಾಗಿ ಹೋರಾಟ ಮಾಡಿದರು. ಪ್ರಾರ್ಥನೆ ಮಾಡಿದರು. ಈಗ ಅವರಿಗೆ ಸಮಾಧಾನ ಆಗಿದೆಯಲ್ಲ ಅಷ್ಟೇ ಸಾಕು’ ಎಂದು ತಿಳಿಸಿದರು.

“ಸಿಇಸಿ ಸಭೆಗೆ ಮುಖ್ಯಮಂತ್ರಿ ಆಗಮಿಸಲು ಸಾಧ್ಯವಾಗುತ್ತಿಲ್ಲ. ಬಸವಣ್ಣ ಅವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದ್ದು, ಬಸವ ಕಲ್ಯಾಣದಲ್ಲಿ ಈ ಸಂಬಂಧದ ದೊಡ್ಡ ಕಾರ್ಯಕ್ರಮ ನಿಗದಿಯಾಗಿದೆ. ಆ ಕಾರ್ಯಕ್ರಮದಲ್ಲಿ ಎಲ್ಲ ಮಠಾಧೀಶರು ಭಾಗವಹಿಸುತ್ತಿದ್ದಾರೆ. ಹೀಗಾಗಿ, ಇದನ್ನು ಮುಂದೂಡಲು ಸಾಧ್ಯವಿಲ್ಲ. ಇದು ಅದ್ಯತೆ ಕಾರ್ಯಕ್ರಮವಾದ್ದರಿಂದ ಸಿಎಂ ಅಲ್ಲಿ ಭಾಗವಹಿಸುತ್ತಿದ್ದಾರೆ. ನಾವೆಲ್ಲ ಸೇರಿ ಈಗಾಗಲೇ ಚರ್ಚೆ ಮಾಡಿರುವುದನ್ನು ನಾನು ಸಭೆಯಲ್ಲಿ ಪ್ರಸ್ತಾಪ ಮಾಡುತ್ತೇನೆ’ ಎಂದು ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next